ADVERTISEMENT

ಭಾನುವಾರ, 14–4–1968

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST

ನಾಲ್ಕಾಣೆ ಬೆಳೆಯೂ ಆಗದಿದ್ದರೆ ಕಂದಾಯ ಮಾಫಿ

ಬೆಂಗಳೂರು, ಏ. 13– 25 ಪೈಸೆಗಿಂತ ಕಡಿಮೆ ಬೆಳೆ ಆಗುವ ಜಮೀನಿನ ಭೂಕಂದಾಯವನ್ನು ಅದೇ ವರ್ಷ ಮಾಫಿ ಮಾಡಲಾಗುವುದು.

ರಾಜ್ಯದ ರೈತರಿಗೆ ಗಣನೀಯವಾಗಿ ರಿಯಾಯಿತಿಯನ್ನು ಒದಗಿಸುವ ಸರ್ಕಾರದ ನಿರ್ಧಾರವನ್ನು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದ ಕಂದಾಯ ಖಾತೆ ಉಪಸಚಿವ ಶ್ರೀ ಜಿ.ಬಿ. ಶಂಕರರಾವ್ ಅವರು ಈ ರಿಯಾಯಿತಿಯನ್ನು 1964ನೇ ಸಾಲಿನಿಂದ ನೀಡಲಾಗುವುದೆಂದು ತಿಳಿಸಿದರು.

ADVERTISEMENT

ಅಕ್ಕಿ ರೂಪದಲ್ಲಿ ಲೆವಿ ವಸೂಲಿ ಸಾಧ್ಯವಿಲ್ಲ: ಅರಸು

ಬೆಂಗಳೂರು, ಏ. 13– ಬತ್ತದ ಬದಲು ಅಕ್ಕಿ ರೂಪದಲ್ಲಿ ಲೆವಿಯನ್ನು ವಸೂಲು ಮಾಡಲು ಸಾಧ್ಯವಿಲ್ಲವೆಂದು ಕಾರ್ಮಿಕ ಮತ್ತು ಪಶು ಸಂಗೋಪನಾ ಸಚಿವ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ತುಂಗಭದ್ರಾ ಯೋಜನೆಯ ಪ್ರದೇಶದಲ್ಲಿ ಸರ್ಕಾರಿ ಫಾರಂನ್ನು ಆರಂಭಿಸಬೇಕೆಂದು ಸರ್ಕಾರ ಯೋಚಿಸಿದೆ ಎಂದು ಸಚಿವ ಅರಸು ಅವರು ಹೇಳಿದರು.

ಎಚ್.ಎ.ಎಲ್. ಲಾಕ್‌ ಔಟ್ ಅಂತ್ಯ: ನಾಳೆ ಕಾರ‍್ಯಾರಂಭ

ಬೆಂಗಳೂರು, ಏ. 13– ಹಿಂದೂಸ್ಥಾನ್ ಏರೋನಾಟಿಕ್ಸ್ ನೌಕರರ ಸಂಘ ಹಾಗೂ ಆಡಳಿತ ಪ್ರತಿನಿಧಿಗಳ ನಡುವೆ ಇಂದು ಸೌಹಾರ್ದಯುತವಾದ ಒಪ್ಪಂದವಾಗಿ ಏಪ್ರಿಲ್ 4ರಿಂದ ಘೋಷಿಸಿದ್ದ ಲಾಕ್‌ ಔಟ್‌ನ್ನು ಆಡಳಿತ ಮಂಡಳಿಯು 15ನೇ ತಾರೀಖಿನಿಂದ ತೆಗೆದಿದೆ.

ಇಂದು ಇವರಿಬ್ಬರ ನಡುವೆ ಮಾತುಕತೆ ನಡೆದು ಒಪ್ಪಂದವಾಯಿತು.

ಮೆಡಿಕಲ್ ಕಾಲೇಜು ನಿರ್ವಹಣೆಗೆ ಸಹಾಯಧನ ನೀಡಲು ಸಲಹೆ

ಬೆಂಗಳೂರು, ಏ. 13– ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ‘ಅನೀತಿಯುತವಾದ’ ಸೀಟು ಶುಲ್ಕವನ್ನು ತಪ್ಪಿಸಲು ಆ ಕಾಲೇಜುಗಳಿಗೆ ಸಹಾಯಧನ ನೀಡಬೇಕೆಂದು ಪಕ್ಷೇತರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯರವರು ಇಂದು ವಿಧಾನ ಪರಿಷತ್ತಿನಲ್ಲಿ ಸಲಹೆ ಮಾಡಿದರು.

ರಾಜ್ಯದ ಮೆಡಿಕಲ್‌ ಕಾಲೇಜುಗಳ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಬೇಕೆಂಬ ಡಾ.ಸಿ.ಬಂದಿಗೌಡರ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಮಲ್ಲಾರಾಧ್ಯರು ಖಾಸಗಿ ಮೆಡಿಕಲ್‌ ಕಾಲೇಜುಗಳನ್ನು ಸಹಕಾರ ಪದ್ಧತಿಯ ಆಧಾರದ ಮೇಲೆ ಸ್ಥಾಪಿಸುವುದಕ್ಕೆ ಪ್ರೋತ್ಸಾಹ ನೀಡಬೇಕೆಂದೂ ಸಲಹೆ ಮಾಡಿದರು.

ಪ್ರಧಾನಿ ಇಂದಿರಾಗೆ ವಾಜಪೇಯಿ ಸವಾಲು

ರಾಜಕೋಟೆ, ಏ. 13– ಕಛ್‌ ತೀರ್ಪಿಗೆ ಸಂಬಂಧಿಸಿದಂತೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮೊಡನೆ ಉಪಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಲಿ ಎಂದು ಜನಸಂಘದ ಅಧ್ಯಕ್ಷ ಶ್ರೀ ಎ.ಬಿ. ವಾಯಪೇಯಿ ಅವರು ಇಂದು ಪ್ರಧಾನಿಗೆ ಸವಾಲು ಹಾಕಿದರು.

ಸಕ್ಕರೆ ಬೆಲೆ ಇಳಿಸದಿದ್ದರೆ ಸರ್ಕಾರದ ಕ್ರಮ

ಹಾಪುರ್‌, ಏ.13– ಸಕ್ಕರೆಯ ಬೆಲೆಯನ್ನು ತಯಾರಿಕೆಗಾರರು ಇಳಿಸದೆ ಹೋದಲ್ಲಿ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದೀತು ಎಂದು ಆಹಾರ ಸಚಿವ ಶ್ರೀ ಜಗಜೀವನರಾಂ ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.