ADVERTISEMENT

ಭಾನುವಾರ, 14–5–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಸುಭದ್ರ ರಾಷ್ಟ್ರ ನಿರ್ಮಾಣ, ಜನತೆಯ ಸುಖ ಸಾಧನೆ ನೂತನ ರಾಷ್ಟ್ರಪತಿ ಡಾ. ಹುಸೇನ್‌ರ ಸಂಕಲ್ಪ
ನವದೆಹಲಿ, ಮೇ 13– 
‘ಪ್ರಾದೇಶಿಕ ಅಥವಾ ಭಾಷಾವಾರು ಭಾವನೆಗೆಡೆಗೊಡದೆ ಭಾರತಕ್ಕೆ ನನ್ನ ಪೂರ್ಣ ನಿಷ್ಠೆ ಅನ್ನುವ ಪ್ರತಿಜ್ಞೆಯೊಡನೆ ಡಾ. ಜಾಕಿರ್ ಹುಸೇನ್ ಅವರು ಇಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಮಾಣ ಸ್ವೀಕಾರದ ನಂತರ ನೂತನ ರಾಷ್ಟ್ರಪತಿ ಪುಟ್ಟ ಭಾಷಣ ಮಾಡಿ, ‘ಜಾತಿ, ಮತ ಅಥವಾ ಪಂಥದ ತಾರತಮ್ಯ ಎಣಿಸದೆ ರಾಷ್ಟ್ರದ ಶಕ್ತಿ ಬೆಳೆಸಲು, ಪ್ರಗತಿ ಮತ್ತು ಎಲ್ಲ ಜನತೆಯ ಸುಖಕ್ಕಾಗಿ ಶ್ರಮಿಸುವ’ ಪಣ ತೊಟ್ಟರು.

‘ಈ ನನ್ನ ಮನೆಯನ್ನು ಸುಂದರಗೊಳಿಸಿ ಬಲಪಡಿಸುವುದು ಸಂಪದ್ಯುಕ್ತ ಹಾಗೂ ಗೌರವ ಜೀವನದ ಗುರಿ ಸಾಧನೆಯ ಕೆಲಸದಲ್ಲಿ ತೊಡಗಿರುವ ಈ ದೊಡ್ಡ ರಾಷ್ಟ್ರದ ದೊಡ್ಡ ಜನತೆ ಇರಲು ಯೋಗ್ಯವಾಗಿರುವಂತೆ ಈ ಮನೆಯನ್ನು ಮಾಡುವುದು ನನ್ನ ನಿಸ್ಪೃಹ ಪ್ರಯತ್ನವಾಗಿರುತ್ತದೆ’ ಎಂದು ಅವರು ನುಡಿದರು.

ADVERTISEMENT

***

ವಿಧಿ!
ನವದೆಹಲಿ, ಮೇ 13–
ಶ್ರೀ ಕೆ. ಸುಬ್ಬರಾವ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಕ್ಕಾಗಿ ರಾಜೀನಾಮೆ ನೀಡದೆ ಸುಪ್ರೀಂ ಕೋರ್ಟಿನ ಶ್ರೇಷ್ಠ ನ್ಯಾಯಾಧೀಶರಾಗಿಯೇ ಉಳಿದಿದ್ದರೆ ಇಂದು ರಾಷ್ಟ್ರಪತಿಗಳ ಪ್ರತಿಜ್ಞಾ ವಿಧಿಯನ್ನು ಅವರೇ ನೇರವೇರಿಸಬೇಕಿತ್ತು.

ಶ್ರೀ ಸುಬ್ಬರಾವ್ ಅವರು ರಾಜೀನಾಮೆ ನೀಡದಿದ್ದರೆ ಜುಲೈವರೆಗೆ ಅವರು ಶ್ರೇಷ್ಠ ನ್ಯಾಯಾಧೀಶರಾಗಿ ಮುಂದುವರೆಯುತ್ತಿದ್ದರು. ಆದರೆ ವಿಧಿ ಅವರನ್ನು ಕೋರ್ಟ್‌ನಿಂದ ಹೊರಗುಳಿಯುವಂತೆ ಮಾಡಿತು. ಅವರು ರಾಜೀನಾಮೆ ನೀಡಿದ್ದರಿಂದ ಶ್ರೇಷ್ಠ ನ್ಯಾಯಾಧೀಶರಾದ ಶ್ರೀ ಕೆ.ಎಸ್. ವಾಂಛೂ ಅವರು ಇಂದು ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.

***

ಶ್ರೀ ಗಿರಿ ಅವರಿಂದ ಪ್ರಮಾಣ ಸ್ವೀಕಾರ
ನವದೆಹಲಿ, ಮೇ 13–
ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶ್ರೀ ವರಾಹಗಿರಿ ವೆಂಕಟಗಿರಿಯವರು ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್‌ರವರು ಪ್ರತಿಜ್ಞಾ ವಚನ ನೀಡಿದರು. ಶ್ರೀ ವಿ.ವಿ. ಗಿರಿಯವರು (ವಯಸ್ಸು 73 ವರ್ಷ) ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

***

ತ್ರಿಭಾಷಾ ಸೂತ್ರಕ್ಕೆ ಕಾಂಗ್ರೆಸ್ ಕಾರ್ಯ ಸಮಿತಿ ಬೆಂಬಲ
ನವದೆಹಲಿ, ಮೇ 13–
ಸದ್ಯಕ್ಕೆ ತ್ರಿಭಾಷಾ ಸೂತ್ರವೇ ಮುಂದುವರಿಯಬೇಕೆಂದು ಬೆಂಬಲ ಸೂಚಿಸುವುದರೊಡನೆ ಒಂದು ವಾರದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಇಲ್ಲಿ ಕೊನೆಗೊಂಡಿತು.

ತುಂಬಾ ವಿಚಾರ ಮಥನಮಾಡಿ ಸಿದ್ಧಪಡಿಸಿದ ಈ ಭಾಷಾ ಸೂತ್ರವನ್ನು ಸದ್ಯದಲ್ಲಿ ಬದಲಾಯಿಸಬಾರದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ  ತಿಳಿದು ಬಂದಿದೆ.

ಇತ್ತೀಚಿನ ಶಿಕ್ಷಣ ಸಚಿವರ ಸಮ್ಮೇಳನ ಪರಿಶೀಲಿಸಿದ ದ್ವಿಭಾಷಾ ಸೂತ್ರಕ್ಕೆ ಕೆಲವರು ಬೆಂಬಲ ನೀಡಿದರೆಂದೂ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.