ADVERTISEMENT

ಭಾನುವಾರ, 20–8–1967

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST

ಆರ್ಥಿಕ ಮುಗ್ಗಟ್ಟಿಗೆ ಕೇಂದ್ರದ ಜಡ ನೀತಿ ಬಹುಪಾಲು ಕಾರಣವೆಂದು ಹೆಗ್ಗಡೆ
ಬೆಂಗಳೂರು, ಆ. 19–
ಇಂದಿನ ಆರ್ಥಿಕ ಬಿಕ್ಕಟ್ಟು ಮತ್ತು ಕೈಗಾರಿಕಾ ಉತ್ಪಾದನೆಯ ಮುಗ್ಗಟ್ಟಿಗೆ ಕೇಂದ್ರದ ವಿಳಂಬ ಕಾರ್ಯ ನೀತಿ ಮತ್ತು ಅವಾಸ್ತವಿಕ ಚಿಂತನೆ ಬಹುಪಾಲು ಕಾರಣ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ರೂಪಾಯಿಯ ಅಪಮೌಲ್ಯದಿಂದ ಯಾವುದೇ ಉದ್ದೇಶ ಈಡೇರಲಿಲ್ಲ. ಅದರ ಬದಲು ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಅಪಮೌಲ್ಯವನ್ನು ತಪ್ಪಿಸಬಹುದಾಗಿತ್ತು ಎಂಬ ಭಾವನೆಯೂ ರಾಷ್ಟ್ರದಲ್ಲಿ ಬಲವಾಗುತ್ತಿದೆ’ ಎಂದು ಅವರು ಹೇಳಿದರು.

ನಾಗಾರ್ಜುನಸಾಗರದ ಕ್ರೆಸ್ಟ್‌ಗೇಟ್: ರಾಜ್ಯಕ್ಕೆ ಕೇಂದ್ರ ಸರಕಾರ ಸರಿಯಾದ ತಿಳಿವಳಿಕೆ ನೀಡಿಲ್ಲ ಎಂದು ಮುಖ್ಯಮಂತ್ರಿ
ಬೆಂಗಳೂರು, ಆ. 19–
ನಾಗಾರ್ಜುನಸಾಗರದ ಕ್ರೆಸ್ಟ್ ಗೇಟ್ ನಿರ್ಮಾಣ ಸಂಬಂಧದಲ್ಲಿ ಮೊದಲಿನಿಂದಲೂ ಮೈಸೂರು ರಾಜ್ಯಕ್ಕೆ ಕೇಂದ್ರವು ಸರಿಯಾದ ತಿಳಿವಳಿಕೆಯನ್ನು ನೀಡಿಲ್ಲವೆಂದು ತಮಗನಿಸುವುದೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.

ADVERTISEMENT

‘ಕ್ರೆಸ್ಟ್ ಗೇಟ್ ನಿರ್ಮಾಣ ಯಾವ ಘಟ್ಟದಲ್ಲಿ ಸೇರಿಸಲ್ಪಟ್ಟಿದೆಯೆಂಬುದೇ ಅರ್ಥವಾಗುತ್ತಿಲ್ಲ’ ಎಂದರು.

ದೆಹಲಿಯಲ್ಲಿ ಕೃಷ್ಣಾ– ಗೋದಾವರಿ ನೀರು ಹಂಚಿಕೆ ಸಂಬಂಧದಲ್ಲಿ ಆಂಧ್ರ, ಮೈಸೂರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ ಇಂದು ನಗರಕ್ಕೆ ಹಿಂತಿರುಗಿದ ಶ್ರೀ ನಿಜಲಿಂಗಪ್ಪನವರು ಮೂರು ರಾಜ್ಯಗಳೂ ಹಂಗಾಮಿ ಹಂಚಿಕೆಯಂತೆ ನೀಡಲಾಗಿರುವ ಪ್ರಮಾಣಕ್ಕಿಂತ ತುಂಬ ಹೆಚ್ಚಿನ ಪ್ರಮಾಣ ತಮಗೆ ಬರಬೇಕಾಗಿದೆಯೆಂಬ ವಾದವನ್ನು ಮಂಡಿಸಿದುವೆಂದೂ ಅಂತಿಮ ಹಂಚಿಕೆಗೆ ಮುಂಚೆ ಹಂಚಿಕೆ ಎಷ್ಟು ನೀರು ದೊರಕುವುದೆಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆಯೆಂದು ಭಾವಿಸಲಾಯಿತೆಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.