ADVERTISEMENT

ಭಾನುವಾರ, 23–4–1967

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST

ಕಾಂಗ್ರೆಸ್ಸೇತರ ಸರಕಾರದಿಂದ ಭಾರತದ ರಾಜಕೀಯ ವೈವಿಧ್ಯ ಹೆಚ್ಚಿದೆ–ಎಸ್ಸೆನ್
ಕಲ್ಕತ್ತ, ಏ. 22–
ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರಕಾರ ಆಸ್ತಿತ್ವಕ್ಕೆ ಬಂದಿರುವುದು ಭಾರತದ ರಾಜಕೀಯ ವೈವಿಧ್ಯ
ವನ್ನು ಹೆಚ್ಚಿಸಿದೆಯೆಂದೂ ಹೊಸ ಪ್ರಯೋಗ ನಡೆಸುವುದಕ್ಕೆ ಇದು ಅವಕಾಶ ಕಲ್ಪಿಸಿದೆಯೆಂದೂ ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಹೇಳಿದರು.

‘ಕಾಂಗ್ರೆಸ್ಸೇತರ ಸರಕಾರ ಆಸ್ತಿತ್ವಕ್ಕೆ ಬಂದಿರುವುದು ಅನೈಕ್ಯದ ಸೂಚನೆಯೆಂದು ನಾನು ಭಾವಿಸಿಲ್ಲ’ ಕಾಂಗ್ರೆಸ್ಸೇತರ ಸಚಿವ ಸಂಪುಟವು ತಮ್ಮ ಪ್ರಯೋಗದಲ್ಲಿ ಯಶಸ್ವಿಯಾಗಲಿ ಎಂಬುದು ನನ್ನ ಆಶಯ’ ಎಂದೂ ಅವರು ತಿಳಿಸಿದರು.

72ರ ವೇಳೆಗೆ ಸಕ್ರಿಯಾ ರಾಜಕೀಯದಿಂದ ನಿವೃತ್ತಿ: ನಿಜಲಿಂಗಪ್ಪನವರ ಹೇಳಿಕೆ (ಪ್ರಜಾವಾಣಿ ಪ್ರತಿನಿಧಿಯಿಂದ)
ಕಲ್ಕತ್ತ, ಏ. 22–
ಸಕ್ರಿಯ ರಾಜಕೀಯದಿಂದ 1972ರ ವೇಳೆಗೆ ನಿವೃತ್ತಿ ಹೊಂದುವ ತೀವ್ರ ಅಪೇಕ್ಷೆಯನ್ನು ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ವ್ಯಕ್ತಪಡಿಸಿದರು. ಆದರೆ ಅವರು ಈ ವಿಷಯವನ್ನು ಸ್ಪಷ್ಟಪಡಿಸಲಿಲ್ಲ. ಕಲ್ಕತ್ತದ ಕೆಲವು ವಾಣಿಜ್ಯೋದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಅವರು ‘ನಾನು ಅದುವರೆಗೂ ಅಧಿಕಾರದಲ್ಲಿದ್ದರೆ’ ಇನ್ನಾವುದೇ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದರು.

ADVERTISEMENT

ಸೊಲ್ಲಾಪುರ ಭೇಟಿ ರದ್ಧಾಗಿಲ್ಲ ಎಂದು ಮಹಾಜನ್:  ಜೂನ್ ಮಧ್ಯದಲ್ಲಿ ವರದಿ ಸಿದ್ಧ
ಬೆಂಗಳೂರು, ಏ. 22–
ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಯಲ್ಲಿ ಮೈಸೂರು ಮತ್ತು ಮಹಾರಾಷ್ಟ್ರ ಸರಕಾರಗಳ ಪ್ರತಿನಿಧಿಗಳ ವಾದವನ್ನು ಕೇಳಿದ ನಂತರ ಅಕ್ಕಲಕೋಟೆ, ಜಿತ್, ಸೊಲ್ಲಾಪುರ ಮತ್ತು ಚಂದಘಡಗಳಿಗೆ ತಾವು ಭೇಟಿ ಕೊಡಬಹುದೆಂಬ ಸೂಚನೆಯನ್ನು ಗಡಿ ಆಯೋಗದ ಅಧ್ಯಕ್ಷ ಶ್ರೀ ಮೆಹರ್ ಚಂದ್ ಮಹಾಜನ್‌ರವರು ನೀಡಿದರು.

ಕಾಂಗ್ರೆಸ್ಸೇತರ ಸಂಪುಟಗಳಲ್ಲಿ ಜನ ಸಂಘ ಸೇರಲು ಒಪ್ಪಿಗೆ
ನವದೆಹಲಿ, ಏ. 22–
ನಾನಾ ಕಾಂಗ್ರೆಸ್ಸೇತರ ಮಂತ್ರಿಮಂಡಲದಲ್ಲಿ ತಮ್ಮ ಪಕ್ಷವು ಭಾಗವಹಿಸುವುದಕ್ಕೆ ಸಮ್ಮತಿ ಸೂಚಿಸುವ ನಿರ್ಣಯವೊಂದನ್ನು ಭಾರತೀಯ ಜನಸಂಘದ ಜನರಲ್ ಕೌನ್ಸಿಲ್ ಇಂದು ಸರ್ವಾನುಮತದಿಂದ ಅಂಗೀಕರಿಸಿತು.

ಕಮ್ಯುನಿಸ್ಟರು ಸೇರಿರುವ ಕಾಂಗ್ರೆಸ್ಸೇತರ ಮಂತ್ರಿಮಂಡಲಗಳಲ್ಲಿ ಪಕ್ಷವು ಭಾಗವಹಿಸುವುದು ಸರಿಯಲ್ಲವೆಂದು ನಿರ್ಣಯದ ಬಗ್ಗೆ ಚರ್ಚೆ ನಡೆದ ಸಮಯದಲ್ಲಿ ಅನೇಕ ಮಂದಿ ಪ್ರತಿನಿಧಿಗಳು ಪ್ರಬಲವಾಗಿ ವಾದಿಸಿದರು.

ಪಕ್ಷವು ಇನ್ನೂ ಐದು ವರ್ಷಕಾಲ ಕಾಯಬಹುದೆಂದೂ, ಆನಂತರ ಜನತೆಯಿಂದ ಸ್ಪಷ್ಟವಾಗಿ ಆದೇಶ ಪಡೆಯಬೇಕೆಂದೂ ಮತ್ತು ಪಕ್ಷದ ತತ್ವಗಳ ಹಾಗೂ ನೀತಿಗಳ ಆಧಾರದ ಮೇಲೆ ದೇಶಕ್ಕೆ ಶುದ್ಧ ಹಾಗೂ ದಕ್ಷ ಆಡಳಿತವನ್ನೂ ಒದಗಿಸಬೇಕೆಂದೂ ಈ ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಅಧಿಕಾರವನ್ನು ಈಗಲೇ ಸ್ವಾಧೀನಪಡಿಸಿಕೊಳ್ಳಲು ಪಕ್ಷವು ಅತ್ಯಾಸಕ್ತಿ ತಳೆಯಬಾರದೆಂದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.