ADVERTISEMENT

ಮಂಗಳವಾರ, 23–5–1967

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಪ್ರಸಕ್ತ ವರ್ಷದ ರೈಲ್ವೆ ಆಯವ್ಯಯ: ರೈಲು ಪ್ರಯಾಣ–ಸರಕು ಸಾಗಣೆ ದರ ಏರಿಕೆ;  38 ಕೋಟಿ ರೂ. ಆದಾಯ
ನವದೆಹಲಿ, ಮೇ 22– ರೈಲ್ವೆ ಪ್ರಯಾಣದ ಹಾಗೂ ಸರಕು ಸಾಗಾಣಿಕೆಯ ದರಗಳನ್ನು ಪ್ರಸಕ್ತ ವರ್ಷದ ಜೂನ್‌ 15 ರಿಂದ ಹೆಚ್ಚಿಸಲಾಗುವುದೆಂದು ರೈಲ್ವೆ ಸಚಿವ ಶ್ರೀ ಸಿ.ಎಂ. ಪೂಣಚ್ಚರವರು ಇಂದು ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.
 
ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಉಳಿದಿರುವ ಭಾಗದಲ್ಲಿ 38 ಕೋಟಿ ರೂ.ಗಳ ಹೆಚ್ಚುವರಿ ಆದಾಯ ದೊರೆಯುವುದೆಂದು ಅವರು 1967–68ರ ರೈಲ್ವೆ ಆಯವ್ಯಯವನ್ನು ಮಂಡಿಸುತ್ತ ತಿಳಿಸಿದರು.
 
ಕುಪ್ಪಂ ಅಪಘಾತದಲ್ಲಿ 42 ಮಂದಿ ಸಾವು, ಗಾಯಗೊಂಡವರು 68 ಮಂದಿ
ಕುಪ್ಪಂ, ಮೇ 22–  ಭಾನುವಾರ ರಾತ್ರಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಒಟ್ಟು 42 ಮಂದಿ ಸಾವಿಗೀಡಾಗಿದ್ದಾರೆ. 
ಗಾಯಗೊಂಡವರು 68 ಮಂದಿ.  ಅಪಘಾತಕ್ಕೀಡಾದ ‘ಐಲೆಂಡ್‌ ಎಕ್ಸ್‌ಪ್ರೆಸ್‌’ನ 3ನೇ ತರಗತಿಯ ಡಬ್ಬಿಯಿಂದ ದೇಹಗಳನ್ನು ತೆಗೆಯುವ ಕಾರ್ಯ ಸಂಜೆಯವರೆಗೂ ನಡೆಯಿತು.
 
ನ್ಯಾಯಾಂಗ ವಿಚಾರಣೆ ಬಗ್ಗೆ ಪರಿಶೀಲಿಸುವುದಾಗಿ ಸಚಿವ ಶ್ರೀ ಪೂಣಚ್ಚ
ನವದೆಹಲಿ, ಮೇ 22– ದಕ್ಷಿಣ ರೈಲ್ವೆಯ ಬೆಂಗಳೂರು–ಜಾಲಾರ್‌ಪೇಟೆ ವಿಭಾಗದ ಕುಪ್ಪಂ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರೈಲು ಅನಾಹುತದ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸುವ ವಿಷಯವನ್ನು ಸರ್ಕಾರವು ಪರಿಶೀಲಿಸುವುದೆಂದು ರೈಲ್ವೆ ಸಚಿವ ಶ್ರೀ ಸಿ.ಎಂ. ಪೂಣಚ್ಚ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.
 
ಚೀನಾಬ್‌ ನದಿ ಬಳಿ ಭಾರಿ ಪ್ರಮಾಣದಲ್ಲಿ ಪಾಕ್‌ ಸೇನೆ ಜಮಾವಣೆ
ಜಮ್ಮು, ಮೇ 22– ಇಲ್ಲಿಯ ಪಶ್ಚಿಮಕ್ಕೆ ಸುಮಾರು ಹದಿನೆಂಟು ಮೈಲಿಗಳ ದೂರದಲ್ಲಿ ಚೀನಾಬ್‌ ನದಿಯ ಭರ್ಜಿ ಆಕೃತಿಯ ಪ್ರದೇಶದಲ್ಲಿ ಪಾಕಿಸ್ತಾನವು ಭಾರಿ ಸೈನ್ಯ ಜಮಾವಣೆ ಮಾಡಿದೆಯೆಂದು ವರದಿಯಾಗಿದೆ.
 
ಕಳೆದ ಶುಕ್ರವಾರ ಈ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಸೈನ್ಯದ ನಡುವೆ ಗುಂಡಿನ ಚಕಮಕಿ ನಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.