ADVERTISEMENT

ಶುಕ್ರವಾರ, 24–2–1967

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2017, 19:30 IST
Last Updated 23 ಫೆಬ್ರುವರಿ 2017, 19:30 IST

ಇಂದಿರಾ, ನಂದಾ, ಚವಾಣ್‌ ಆಯ್ಕೆ; ಕಾಮರಾಜ್‌, ಪಾಟೀಲ್‌, ಅತುಲ್ಯ ಪರಾಭವ
ಸ್ವರಾಜ್ಯ ಬಂದಾಗಿನಿಂದ ಯಾವ ಚುನಾವಣೆಯಲ್ಲೂ ಸಂಭವಿಸದಷ್ಟು ಐತಿಹಾಸಿಕ ಪರಾಭವ ಪರಂಪರೆ ಈ ಬಾರಿ ಕಾಂಗ್ರೆಸ್ಸಿಗೆ. ಅಧ್ಯಕ್ಷ ಕಾಮರಾಜ್‌, ಎ.ಐ.ಸಿ.ಸಿ. ಕಾರ್ಯದರ್ಶಿ ಮಣೇನ್‌, ಕೋಶಾಧಿಕಾರಿ ಅತುಲ್ಯ ಘೋಷ್‌, ಪ್ರಮುಖ ಹೈಕಮಾಂಡ್‌ ಸದಸ್ಯ ರೈಲುವೆ ಸಚಿವ ಎಸ್‌.ಕೆ. ಪಾಟೀಲ್‌, ಸಚಿವ ಡಿ. ಸಂಜೀವಯ್ಯ ಜನತೆಯ ಬೆಂಬಲಕ್ಕೆ ಎರವಾಗಿದ್ದಾರೆ.

ಆರು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು–ಉತ್ತರಪ್ರದೇಶ, ಬಿಹಾರ, ಒರಿಸ್ಸಾ, ತಮಿಳುನಾಡು, ಕೇರಳ ಹಾಗೂ ರಾಜಸ್ತಾನಗಳಲ್ಲಿ ಪರಾಭವಗೊಂಡಿದ್ದಾರೆ. ನಿನ್ನೆ ಸೋತುಹೋದ ಪಂಜಾಬ್‌, ಬಿಹಾರಗಳ ಮುಖ್ಯಮಂತ್ರಿಗಳ ಸಾಲಿಗೆ ಮದ್ರಾಸ್‌, ಪಶ್ಚಿಮ ಬಂಗಾಳಗಳ ಮುಖ್ಯಮಂತ್ರಿಗಳೂ ಸೇರಿದ್ದಾರೆ.

ಇದುವರೆಗೆ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಬಹುಮತವನ್ನು ಕಾಂಗ್ರೆಸ್ಸೇತರ ಪಕ್ಷಗಳು ಗಳಿಸಿವೆ. ಕೇರಳದಲ್ಲಿ ವಾಮ ಸಂಯುಕ್ತರಂಗ, ಮದ್ರಾಸಿನಲ್ಲಿ ಡಿ.ಎಂ.ಕೆ. ನಿಚ್ಚಳವಾಗಿ ಅಧಿಕಾರಕ್ಕೆ ಬಂದಿವೆ. ರಾಜಸ್ತಾನ, ಪಂಜಾಬ್‌ಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ಒಕ್ಕೂಟದ ಪ್ರಯತ್ನ ನಡೆಯುತ್ತಿದೆ. ಕೇರಳ, ಮದ್ರಾಸುಗಳಲ್ಲಿ ಕಾಂಗ್ರೆಸ್‌ ಪಕ್ಷ ಪೂರಾ ಉಚ್ಚಾಟನೆಗೆ ಗುರಿಯಾಗಿದೆ.

ಇಂದಿರಾ ಜಯ
ರೇಬರೇಲಿ, ಫೆ. 23–
ಉತ್ತರ ಪ್ರದೇಶದ ರೇಬರೇಲಿ ಕ್ಷೇತ್ರದಿಂದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ತೊಂಬತ್ತೊಂದು ಸಾವಿರಕ್ಕೂ ಹೆಚ್ಚು ಬಹುಮತದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.