ADVERTISEMENT

ಸೋಮವಾರ, 13–2–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ಆಚಾರ್ಯ ಡಿ.ಎಲ್.ಎನ್. ಅವರಿಗೆ ಸನ್ಮಾನ: ‘ಉಪಾಯನ’ ಅರ್ಪಣೆ
ಮೈಸೂರು, ಫೆ. 12–
ಕನ್ನಡವನ್ನು ವಿಶ್ವ ಭಾಷೆಯ ಸಾಲಿನಲ್ಲಿ ನಿಲ್ಲಿಸಲು ಶ್ರಮಿಸಿದ ಕೆಲವರಲ್ಲಿ ಒಬ್ಬರಾಗಿ, ಕನ್ನಡದ ‘ಸಂಚಾರಿ ಅರ್ಥಕೋಶ’ ಎಂದೆನಿಸಿ ಪ್ರಸಿದ್ಧರಾಗಿರುವ ಪ್ರೊ. ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ (ಡಿ.ಎಲ್.ಎನ್) ಅವರನ್ನು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಇಂದು ಇಲ್ಲಿ ಸನ್ಮಾನಿಸಿ, ತಮ್ಮ ಪ್ರೀತಿ ಪೂಜೆಗಳೊಡನೆ ಕೃತಜ್ಞತೆಯನ್ನು ಸಲ್ಲಿಸಿದರು. ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಭವನದಲ್ಲಿ ಸಂಜೆ ಸಮಾವೇಶಗೊಂಡಿದ್ದ ಸಭೆಯು ಆಚಾರ್ಯರಿಗೆ ಶಾಲು ಹೊದಿಸಿ ಸಂಭಾವನಾ ಗ್ರಂಥ ‘ಉಪಾಯನ’ವನ್ನು ಸಮರ್ಪಿಸಿತು.

ನಾಲ್ಕನೇ ಯೋಜನೆಯಲ್ಲಿ ಆಮದು ಖರ್ಚಿನ ಗುರಿ 300 ಕೋಟಿ ರೂ. ಏರಿಕೆ
ನವದೆಹಲಿ, ಫೆ. 12–
ನಾಲ್ಕನೇ ಯೋಜನೆಯಲ್ಲಿ ಅಮೆರಿಕದಿಂದ ಧಾನ್ಯದ ನೆರವನ್ನು ಬಿಟ್ಟು ಆಮದು ಮಾಡಿಕೊಳ್ಳಬಹುದಾದ ಎಲ್ಲಾ ವಸ್ತುಗಳ ಖರ್ಚು ಈಗಾಗಲೇ ಅಂದಾಜಾಗಿರುವ 7,650 ಕೋಟಿ ರೂಪಾಯಿ (ಅಪಮೌಲ್ಯಕ್ಕೂ ಮುಂಚಿನ ಬೆಲೆ) ಗಳಿಗಿಂತಲೂ 300 ಕೋಟಿ ರೂಪಾಯಿಗಳಷ್ಟು ಅಧಿಕವಾಗಬಹುದೆಂದು ಇತ್ತೀಚಿನ ಅಧಿಕೃತ ಅಂದಾಜಿನಿಂದ ತಿಳಿದು ಬಂದಿದೆ. ರಾಷ್ಟ್ರದಲ್ಲಿ ನಿಗದಿಯಾಗಿರುವಂತೆ ಯಂತ್ರಗಳ ಉತ್ಪಾದನೆಯಾಗದೆ ನಿಧಾನವಾದಲ್ಲಿ ವಿದೇಶಗಳಿಂದ ವಸ್ತುಗಳ ಆಮದಿನ ಅಗತ್ಯವೂ ಹೆಚ್ಚಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.