ADVERTISEMENT

ಸೋಮವಾರ, 27–3–1967

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST

ಕಾಸರಗೋಡು ಪ್ರಶ್ನೆ ಶೀಘ್ರ ಇತ್ಯರ್ಥ: ಮುಖ್ಯಮಂತ್ರಿ ಆಶಯ
ಮಂಗಳೂರು, ಮಾ. 26– ಕಾಸರಗೋಡು ಪ್ರಶ್ನೆಯು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಬಗೆಹರಿಯುವುದೆಂಬ ಆಶಯವನ್ನು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ಕಾಸರಗೋಡು ತಾಲ್ಲೂಕಿನ ಬಹುಭಾಗ ಮೈಸೂರಿಗೆ ಹೋಗಬೇಕೆಂಬುದನ್ನು ಅನೇಕ ಸಂದರ್ಭಗಳಲ್ಲಿ ಕೇರಳದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆಂದೂ ಅವರು ಹೇಳಿದರು.
ಈಗಲೂ ಸಹ ಮಂಜೇಶ್ವರ, ಕುಂಬಳ ಫಿರ್ಕಾಗಳು ಕರ್ನಾಟಕಕ್ಕೆ ಸೇರಿದವುಗಳಾಗಿವೆಯೆಂದು ವಿವಿಧ ರಾಜಕೀಯ ಪಕ್ಷಗಳ ನಾಯಕರಲ್ಲಿ ಒಮ್ಮತವಿದೆಯೆಂದೂ, ಕಾಸರಗೋಡು ಕೆಲವು ಭಾಗಗಳನ್ನು ಕುರಿತು ಸ್ವಲ್ಪಮಟ್ಟಿನ ಚರ್ಚೆ ಹಾಗೂ ಒಪ್ಪಂದವಾಗಬೇಕಾಗಿದೆಯೆಂದೂ ಅವರು ತಿಳಿಸಿದರು.


ರಾಜಕೀಯ ಸಂತ್ರಸ್ತರಿಗೆ ನೆರವು ನೀಡುವುದರಲ್ಲಿ ಕಾಲ ವಿಳಂಬದ ಟೀಕೆ
ಬೆಂಗಳೂರು, ಮಾ. 26– ರಾಜಕೀಯ ಸಂತ್ರಸ್ತರಿಗೆ ನೆರವು ನೀಡುವುದರಲ್ಲಿ ಆಗಿರುವ ಕಾಲ ವಿಳಂಬವನ್ನು ಇಂದು ಇಲ್ಲಿ ಸೇರಿದ್ದ ನಗರದ  ‘ಸ್ವಾತಂತ್ರ್ಯ ಯೋಧರ’ ಸಮ್ಮೇಳನದಲ್ಲಿ ಕಟುವಾಗಿ ಟೀಕಿಸಲಾಯಿತು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕ ಪ್ರತಿನಿಧಿಗಳು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿ  ಸ್ವಾತಂತ್ರ್ಯ ಬಂದು 20 ವರ್ಷವಾದರೂ ಅವರುಗಳು ನಿರ್ಗತಿಕರಾಗಿರುವುದನ್ನು, ನೆರವಿನ ನಿರೀಕ್ಷೆಯಲ್ಲಿಯೇ ಅನೇಕರು ಸತ್ತಿರುವುದನ್ನೂ ಪ್ರಸ್ತಾಪಿಸಿ ‘ಈ ಸ್ಥಿತಿಗಾಗಿ’ ವಿಷಾದಿಸಿದರು.
ನಾಡು ಬಿಡಗಡೆಯಾದ ಎರಡು ದಶಕಗಳ ಮೇಲೂ ಸಮ್ಮೇಳನದಲ್ಲಿ ಇಂತಹ ಬೇಡಿಕೆಗಳನ್ನು ಮಂಡಿಸಬೇಕಾಗಿರುವುದು ‘ನಾಚಿಕೆಗೇಡಿನ ಸ್ಥಿತಿ’ ಎಂದು ಹೇಳಿ ‘ನಾವು ಭಿಕ್ಷೆ ಬೇಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT