ADVERTISEMENT

ಸೋಮವಾರ, 3–4–1967

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2017, 19:30 IST
Last Updated 2 ಏಪ್ರಿಲ್ 2017, 19:30 IST

ತ್ರಿಭಾಷಾ ಸೂತ್ರ ಮಕ್ಕಳ ಮೇಲೆ ಭಾರಿ ಹೊರೆ ಎಂದು ತ್ರಿಗುಣ ಸೆನ್
ಅಹಮದಾಬಾದ್, ಏ. 2–
ಮಗುವಿನ ಮೇಲೆ ವಿಪರೀತ ಹೊರೆಯಾಗುವುದರಿಂದ ತ್ರಿಭಾಷಾ ಸೂತ್ರಕ್ಕೆ ತಾವು ವಿರೋಧಿಯೆಂದು ಕೇಂದ್ರ ಶಿಕ್ಷಣ ಸಚಿವ ಡಾ. ತ್ರಿಗುಣ ಸೆನ್‌ರವರು ಇಲ್ಲಿ ಇಂದು ಹೇಳಿದರು.

ಎಲ್ಲ ಮಟ್ಟದಲ್ಲೂ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕೆಂಬುದು ತಮ್ಮ  ನಂಬಿಕೆಯಾಗಿರುವುದಾಗಿ ಅವರು ಪತ್ರಕರ್ತರಿಗೆ ತಿಳಿಸಿದರು.  ಮಾತೃಭಾಷೆಯ ಮೂಲಕ ಮಾತ್ರ ಪೂರ್ಣವಾಗಿ ಮಗುವಿನ ವ್ಯಕ್ತಿತ್ವದ  ವಿಕಸನ ಸಾಧ್ಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಂದುವರಿದ ಎಲ್ಲ ರಾಷ್ಟ್ರಗಳಲ್ಲೂ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿದೆಯೆಂದು ನುಡಿದ ಅವರು, ‘ಈ ತತ್ವ ಜಾರಿಗೆ  ನಮ್ಮ ದೇಶದಲ್ಲಿ ವಿಪರೀತ ಹೆಚ್ಚು ಸಂಖ್ಯೆಯಲ್ಲಿ ಭಾಷೆಗಳಿರುವುದು ಅಡ್ಡಿಯೆಂದು ನಾನು  ಭಾವಿಸುವುದಿಲ್ಲ’ ಎಂದರು.

ಉತ್ತರ ಪ್ರದೇಶದಲ್ಲಿ ಸಂಯುಕ್ತದಳ ಸರ್ಕಾರ
ಲಖನೌ, ಏ. 2–
ಉತ್ತರ ಪ್ರದೇಶದ ಹೊಸ ಸರ್ಕಾರ ರಚಿಸುವಂತೆ ಸಂಯುಕ್ತ ವಿಧಾಯಕ್ ದಳದ ನಾಯಕ ಶ್ರೀ ಚರಣ್ ಸಿಂಗ್ ಅವರಿಗೆ ರಾಜ್ಯಪಾಲ ಶ್ರೀ ವಿಶ್ವನಾಥ್‌ದಾಸ್‌ರವರು ಇಂದು ಆಮಂತ್ರಣ ನೀಡಿದರು.

ಮುಖ್ಯಮಂತ್ರಿಯಾಗಲಿರುವ ಶ್ರೀ ಚರಣ್‌ ಸಿಂಗ್‌ರವರು ಸೋಮವಾರ ಬೆಳಿಗ್ಗೆ 9 ಗಂಟೆಗೆ ಪ್ರಮಾಣ ಸ್ವೀಕರಿಸುವರು. ಸಂಪುಟದ ಸದಸ್ಯರ ಹೆಸರುಗಳನ್ನು ‘ನಿಮಗೆ ಸಾಧ್ಯವಾದಷ್ಟು ಬೇಗ’ ಸಲ್ಲಿಸುವಂತೆ ರಾಜ್ಯಪಾಲರು ದಳದ ನಾಯಕರಿಗೆ ತಿಳಿಸಿದ್ದಾರೆ.

ಎಚ್.ಎಂ.ಟಿ.ಯಲ್ಲಿ ಹೆಚ್ಚಿನ ಉತ್ಪನ್ನ
ಬೆಂಗಳೂರು, ಏ. 2–
ನಗರದ ಎಚ್.ಎಂ.ಟಿ. ಕಾರ್ಖಾನೆಯಲ್ಲಿ ಉತ್ಪನ್ನ 66–67 ರಲ್ಲಿ ಅದರ ಹಿಂದಿನ ವರ್ಷಕ್ಕಿಂತ ಎರಡು ಕೋಟಿ ರೂ. ನಷ್ಟು ಹೆಚ್ಚಿತು. 1965–66ರಲ್ಲಿ 13 ಕೋಟಿ ರೂ. ನಷ್ಟಿದ್ದುದು 1966–67 ರಲ್ಲಿ 15 ಕೋಟಿ ರೂ. ನಷ್ಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.