ADVERTISEMENT

ಆಕ್ಷೇಪಾರ್ಹ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST

‘ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರು ದಲಿತರ ಮನೆಯಿಂದ ಹೆಣ್ಣು ತಂದಿದ್ದಾರೆಯೇ? ಅವರು ಯಾರನ್ನು ಮದುವೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು...’ ಎಂದು ದಿನೇಶ್ ಗುಂಡೂರಾವ್‌ ಅವರನ್ನು ಕುರಿತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ  ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಶೋಭಾ ಅವರು, ‘ದಿನೇಶ್ ಗುಂಡೂರಾವ್  ಮಾಡಬಾರದ ಕೆಲಸ ಮಾಡಿದ್ದಾರೆ’ ಎಂದು ಹೇಳಲು ಹೊರಟಂತಿದೆ.

ದಿನೇಶ್ ಅವರು ಮಹಿಳೆಯೊಬ್ಬರನ್ನು ಮದುವೆಯಾಗಿದ್ದಾರೆ. ಇದರಲ್ಲಿ ಅಸಹಜವಾದದ್ದು ಏನಿದೆ? ಬಹುಶಃ ಆ ಮಹಿಳೆ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬುದು ಶೋಭಾ ಅವರ ಅಸಹನೆಗೆ ಕಾರಣವಾಗಿರಬಹುದು.

ಯಾವ ಧರ್ಮ, ಜಾತಿ ಅಥವಾ ಕುಟುಂಬದಲ್ಲಿ ಹುಟ್ಟಬೇಕು ಎಂಬುದು ಯಾರ ನಿಯಂತ್ರಣದಲ್ಲೂ ಇಲ್ಲ ಎಂಬ ಕನಿಷ್ಠ ಜ್ಞಾನ ಶೋಭಾ ಅವರಿಗೆ ಇಲ್ಲದಿರುವುದು ವಿಸ್ಮಯ.  ಧರ್ಮ– ಜಾತಿಗಳ ಗಡಿ ಮೀರಿ ಪ್ರೀತಿಸಿ ಮದುವೆಯಾಗುವುದು ಶೋಭಾ ಅವರಿಗೆ ಅಸಹಜವಾಗಿ ಕಂಡರೆ ಅದು ಅವರೊಳಗಿನ ವಿಕೃತಿ ಮತ್ತು ಕೊರತೆ. ಅವರು ಸಾಮಾನ್ಯ ವ್ಯಕ್ತಿಯಾಗಿ, ಖಾಸಗಿಯಾಗಿ ಮಾತನಾಡಿದ್ದರೆ ಅದಕ್ಕೆ ಮಹತ್ವ ಕೊಡಬೇಕಾಗಿರಲಿಲ್ಲ.

ADVERTISEMENT

ಆದರೆ ಶೋಭಾ ಅವರು ಜಗತ್ತಿನ ಬೃಹತ್ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದ ಸಂಸದೆಯಾಗಿ ಇಂಥ ಮಾತನಾಡಿರುವುದು ಹೇಯ ಮತ್ತು ಅನಾಗರಿಕ ನಡವಳಿಕೆ. ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ ಸದಸ್ಯರಾಗಿ ಮುಂದುವರಿಯಲು ಅವರಿಗೆ ಈಗ ಯಾವ ನೈತಿಕತೆ ಇದೆ?
ಭರತ ಚಕ್ರವರ್ತಿ ಆಳಿದ ದೇಶ ನಮ್ಮದು.

ಭರತನ ಜನ್ಮವೇ ಅಂತರ್‌ಜಾತಿ ಪ್ರೇಮ ವಿವಾಹದಿಂದ ಉಂಟಾದುದು. ಇದು ನಮ್ಮ ಸಂಸ್ಕೃತಿ.  ಶೋಭಾ ಅವರಿಗೆ ಇವನ್ನು ನೆನಪಿಸಬೇಕಾಗಿದೆ. ಇನ್ನು ಮೇಲಾದರೂ ಅವರು ತಮ್ಮ ಸ್ಥಾನದ ಘನತೆಗೆ ತಕ್ಕ ನಡವಳಿಕೆ ರೂಢಿಸಿಕೊಳ್ಳಲಿ.
-ಉಗ್ರನರಸಿಂಹೇಗೌಡ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.