ADVERTISEMENT

ಇಬ್ರಾಹಿಂ ಕೊರತೆ ತುಂಬುತ್ತಿರುವ ಸಿದ್ದರಾಮಯ್ಯ

ಸುದೇಶ ದೊಡ್ಡಪಾಳ್ಯ
Published 23 ಡಿಸೆಂಬರ್ 2017, 19:30 IST
Last Updated 23 ಡಿಸೆಂಬರ್ 2017, 19:30 IST

ಕಲಬುರ್ಗಿ: ಕಾಂಗ್ರೆಸ್‌ ಪಕ್ಷದ ಸಮಾವೇಶಗಳಲ್ಲಿ ನಾಯಕರು ಹಾಗೂ ಕಾರ್ಯಕರ್ತರನ್ನು ರಂಜಿಸುವುದರಲ್ಲಿ ಸಿ.ಎಂ.ಇಬ್ರಾಹಿಂ ಎತ್ತಿದ ಕೈ. ಅವರು ಮೈಕ್‌ ಮುಂದೆ ನಿಂತರೆ ಸಾಕು, ಯಾವ ಹಾಸ್ಯಗೋಷ್ಠಿಗಳಿಗೂ ಕಡಿಮೆ ಇಲ್ಲದಂತೆ ಭರಪೂರ ಮನರಂಜನೆ ನೀಡುತ್ತಾರೆ. ಅವರ ಪ್ರತಿ ಮಾತಿಗೂ ಚಪ್ಪಾಳೆ, ಶಿಳ್ಳೆ, ಕೇಕೆ ಇರುತ್ತದೆ. ಇಬ್ರಾಹಿಂ ಮಾತನಾಡಿದ ನಂತರ ಉಳಿದವರ ಮಾತು ರುಚಿಸುವುದೇ ಇಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ಸಾಧನಾ ಸಂಭ್ರಮ’ ಪ್ರವಾಸವನ್ನು ಕೈಗೊಂಡಿದ್ದಾರೆ. ದಿನಕ್ಕೆ ಮೂರು ಕಡೆ ಭಾಷಣ ಮಾಡುತ್ತಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಅವರೇ ಪ್ರಮುಖ ಆಕರ್ಷಣೆ. ಇದು ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಇಬ್ರಾಹಿಂ ಕಾಣಿಸಿಕೊಳ್ಳುತ್ತಿಲ್ಲ.

ಆದರೆ, ಸಿದ್ದರಾಮಯ್ಯ ಅವರೇ ಸಭಿಕರನ್ನು ನಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ! ತಮ್ಮ ಭಾವಾಭಿನಯ, ವಿಶಿಷ್ಟ ಶೈಲಿಯ ಮಾತಿನ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ‘ವಸ್ತು’. ಮಿಷನ್‌ 150 ಠುಸ್ಸ್‌, ಸೈಕಲ್‌ ಕೊಟ್ಟೆ, ಸೀರೆ ಕೊಟ್ಟೆ ಎನ್ನುವುದು ಹಾಗೂ ಯಡಿಯೂರಪ್ಪ ಅವರು ಪ್ಯಾಂಟನ್ನು ಮೇಲೆ ಎತ್ತಿಕೊಳ್ಳುವ ರೀತಿ ಅಭಿನಯಿಸುವಾಗ ನಗು ಅಲೆಯಾಗುತ್ತದೆ.

ADVERTISEMENT

ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಕುಳಿತವರ, ಸಭಿಕರ ಆಕಳಿಕೆ, ಬೇಸರಿಕೆ ಮಾಯವಾಗುವಂತೆ ಮಾಡುತ್ತಿದ್ದಾರೆ. ಇದನ್ನು ಕಂಡ ಕಾರ್ಯಕರ್ತರೊಬ್ಬರು, ‘ನಮ್‌ ಸಿದ್ದರಾಮಯ್ಯ ಸಾಹೇಬ್ರು, ಸಿ.ಎಂ.ಇಬ್ರಾಹಿಂ ಇಲ್ಲ ಅನ್ನುವ ಕೊರತೆಯನ್ನು ಚೆನ್ನಾಗಿಯೇ ತುಂಬುತ್ತಿದ್ದಾರೆ’ ಎಂದಿದ್ದು ಮಾತ್ರ ಕುಹುಕವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.