ADVERTISEMENT

ಇವರೇನು ಬಸ್‌ ಚಾಲಕರೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಇದೇ ತಿಂಗಳ ದಿನಾಂಕ 27ರಂದು ಬೆಳಿಗ್ಗೆ 9.30ಕ್ಕೆ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜು ಮುಂದಿನ ರಸ್ತೆಯಲ್ಲಿ ನಾನು ನನ್ನ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದೆ. ನನ್ನ ಹಿಂದಿನಿಂದ ಕಿವಿಗಡಚಿಕ್ಕುವ ಹಾಗೆ ಹಾರ್ನ್‌ ಹಾಕುತ್ತ ಬಿ.ಎಂ.ಟಿ.ಸಿ ಬಸ್ಸೊಂದು ನನ್ನ ಮೇಲೆಯೇ ಹರಿದು ಹೋಗುವಂತೆಯೇ ಬಂತು. (ರೂಟ್‌ ಸಂಖ್ಯೆ ಕೆಐಎ–12– ಬಸ್ ಸಂಖ್ಯೆ 236) ದಾರಿ ಬಿಟ್ಟುಕೊಟ್ಟೆ. ಉದ್ದಕ್ಕೂ ಬಸ್ಸು ಅದೇ ರೀತಿ ಯಾವ ಎಗ್ಗೂ ಇಲ್ಲದೇ ವೇಗವಾಗಿ ಹೋಗುತ್ತಿತ್ತು. ಮುಂದೆ ಜಯನಗರ ಮೂರನೇ ಬ್ಲಾಕಿನ ರಸ್ತೆಯಲ್ಲಿ ಮತ್ತೆ ಬಸ್‌ ಸಿಕ್ಕಿತು. ಆಗಲೂ ಚಾಲಕ ಅದೇ ರೀತಿ ಬಸ್‌ ಓಡಿಸುತ್ತಿದ್ದ. ಆತ ಸಿಂಡಿಕೇಟ್‌ ಬ್ಯಾಂಕ್‌ ನಿಲ್ದಾಣದ ಬಳಿ ಬಸ್‌ ಅನ್ನು ನಿಲ್ಲಿಸಬೇಕಿತ್ತು. ಎಡ ಬದಿಯಿಂದಲೇ ಸಿಗ್ನಲ್‌ ದಾಟುವ ಬದಲು ತೀರಾ ಬಲಬದಿಗೆ ಹೋಗಿ ಮತ್ತೆ ಸರಕ್ಕನೆ ಎಡ ಬದಿಗೆ ಬಂದು ನಿಲ್ಲಿಸಿದ. ಆತನಿಗೆ ವಾಹನ ಓಡಿಸುವ ಯಾವ ಕನಿಷ್ಠ ನಿಯಮಗಳೂ ಗೊತ್ತಿರುವಂತೆ ನನಗೆ ಕಾಣಲಿಲ್ಲ. ಭಯಭೀತರಾದ ಜನರು ತಾವೇ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು. ಬಿಎಂಟಿಸಿಯವರು ವಿಮಾನ ನಿಲ್ದಾಣಕ್ಕೆ ಹೀಗೆ ‘ವಿಮಾನ’ಗಳನ್ನು ಬಿಡುವ ಬದಲು ಬಸ್‌ಗಳನ್ನೇ ಬಿಡಬೇಕು ಮತ್ತು ಅದರ ಒಳಗೆ ‘ಪೈಲಟ್‌’ಗಳ ಬದಲಿಗೆ ಚಾಲಕರನ್ನೇ ಕೂಡ್ರಿಸಿ ಬಡ ಪಾದಚಾರಿಗಳ, ದ್ವಿಚಕ್ರ ವಾಹನ ಸವಾರರ ಜೀವ ಕಾಪಾಡಬೇಕು ಎಂದು ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.