ADVERTISEMENT

ಕಾಯಂ ಎಣಿಕೆ ಕೇಂದ್ರ

ಜಿ.ಬಿ.ಕಂಬಾಳಿಮಠ
Published 5 ಮೇ 2016, 19:30 IST
Last Updated 5 ಮೇ 2016, 19:30 IST

ಚುನಾವಣೆಗಳಲ್ಲಿ ಮತದಾನದ ನಂತರ ಮತಪೆಟ್ಟಿಗೆಗಳು ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ಭದ್ರವಾಗಿ ಇಡಲು ಕೊಠಡಿಗಳ ಕಿಟಕಿಗಳನ್ನು ಇಟ್ಟಿಗೆ, ಸಿಮೆಂಟ್‌ನಿಂದ ಮುಚ್ಚಲಾಗುತ್ತದೆ. ಬಾಗಿಲುಗಳನ್ನು ಸೀಲ್ ಮಾಡಿ ಪೊಲೀಸ್ ಕಾವಲು ಹಾಕಲಾಗುತ್ತದೆ.

ಎಣಿಕೆ ಕೆಲಸ ಮುಗಿದ ನಂತರ ಮುಚ್ಚಿದ ಕಿಟಕಿಗಳ ಇಟ್ಟಿಗೆ, ಸಿಮೆಂಟ್ ಒಡೆದು ತೆಗೆದುಹಾಕಲಾಗುತ್ತದೆ. ಚುನಾವಣಾ ಪೂರ್ವ ಕಾರ್ಯ ಆರಂಭವಾದಾಗಿನಿಂದ ಮತ ಎಣಿಕೆ ಮುಗಿಯುವವರೆಗೂ ಆಯಾ  ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ರಜೆ ನೀಡಲಾಗುತ್ತದೆ.

ಇದಲ್ಲದೆ ಮತ ಎಣಿಕೆ ಕೇಂದ್ರಗಳಲ್ಲಿ ಬಿದಿರು-ಬೊಂಬು, ಸೆಣಬು, ತಂತಿಜಾಳಿಗೆಗಳನ್ನು ಬಳಸಿ ತಯಾರಿಸಿದ ವಸ್ತುಗಳನ್ನು ಎಣಿಕೆದಾರರು, ಅಭ್ಯರ್ಥಿಗಳು ಹಾಗೂ ಅವರ ಏಜೆಂಟರನ್ನು ಪ್ರತ್ಯೇಕಿಸಲು ಬಳಸಿಕೊಳ್ಳಲಾಗುತ್ತದೆ. ಸಾಕಷ್ಟು ಬೆಲೆಯ ಈ ಕಚ್ಚಾವಸ್ತುಗಳು ಎಣಿಕೆ ಕಾರ್ಯದ ನಂತರ ವ್ಯರ್ಥವಾಗುತ್ತವೆ. ಇದರಿಂದ 3 ತಿಂಗಳು 6 ತಿಂಗಳಿಗೊಮ್ಮೆ ಬರುವ ಚುನಾವಣೆಗಳ ಮತ ಎಣಿಕೆಗಾಗಿ ಮಾಡುವ ಖರ್ಚು ವ್ಯರ್ಥವಾಗುತ್ತದೆ.

ಹಿಂದೆ ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಚುನಾವಣೆಗಳಿಗೆ ಈ ತಾತ್ಕಾಲಿಕ ವ್ಯವಸ್ಥೆ ಸೂಕ್ತವಾಗಿತ್ತು. ಆದರೆ ಈಗ ಚುನಾವಣೆಗಳ ಸಂಖ್ಯೆ ಹೆಚ್ಚಿರುವುದರಿಂದ ಚುನಾವಣಾ ಆಯೋಗ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ, ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಿಗೂ ಅನುವಾಗುವಂತೆ ಕಾಯಂ ಮತ ಎಣಿಕೆ ಕೇಂದ್ರಗಳನ್ನು  ನಿರ್ಮಿಸಬಾರದೇಕೆ?   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.