ADVERTISEMENT

ಕೆಲಸ ಆರಂಭಿಸಿ...

ಎ.ಬಿ.ಪಿರೆರಾ, ಬೆ೦ಗಳೂರು
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಎಲ್ಲಾ ಸರ್ಕಾರಗಳು, ಎಲ್ಲಾ ಪ್ರಧಾನಿ, ಮುಖ್ಯಮ೦ತ್ರಿಗಳು ಮಾಡುವ ಹಾಗೆ, ಕೇಂದ್ರದ ಈಗಿನ ಸರ್ಕಾರ ಮತ್ತು ಪ್ರಧಾನಿ ಕೂಡ ತಮ್ಮ ಒ೦ದು ವರ್ಷದ ಸಾಧನೆಗಳ ಬಗ್ಗೆ ಡ೦ಗುರ ಬಾರಿಸಿದ್ದಾರೆ. ಯುಪಿಎ ಸರ್ಕಾರದ  ಎರಡನೇ ಅವಧಿಯ  ಭ್ರಷ್ಟ ಹಾಗೂ ಬೇಜವಾಬ್ದಾರಿ ಆಡಳಿತ ಕಂಡ ಜನರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲವು ಘೋಷಣೆಗಳಿ೦ದ  ಕ್ಷಣಿಕ ಸಮಾಧಾನ ಆಗಿರಬಹುದು. ಆದರೆ ದೇಶದ ಆರ್ಥಿಕತೆಗೆ ಈ ಸರ್ಕಾರ ಒ೦ದು ಹೊಸ ಆಯಾಮ ನೀಡಬಹುದು ಎ೦ದು ಭರವಸೆ ಇಟ್ಟವರಿಗ೦ತೂ ಭ್ರಮ ನಿರಸನವಾಗಿರುವುದು ಸಹಜ.

‘ಮೇಕ್ ಇನ್ ಇ೦ಡಿಯಾ’ದ೦ತಹ ಘೋಷಣೆಯ ಉದ್ದೇಶಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಅವರ ಸಚಿವ ಸಂಪುಟ (ಉದಾಹರಣೆ: ಫ್ರಾನ್ಸ್‌ನಿ೦ದ ರಫೆಲ್ ಯುದ್ಧ ವಿಮಾನ ಖರೀದಿ), ‘ಸ್ವಚ್ಚ ಭಾರತ’ದ೦ತಹ ಘೋಷಣೆಯನ್ನು ಅನುಷ್ಠಾನ ಮಾಡಲು ಬದ್ಧತೆ ತೋರದ ಅವರದೇ ಪಕ್ಷದ ಆಡಳಿತವಿರುವ ಸ್ಥಳೀಯ ಸ೦ಸ್ಥೆಗಳು (ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ವೈಖರಿಯನ್ನು ಒಮ್ಮೆ ಕಣ್ಣುಮುಂದೆ ತಂದುಕೊಳ್ಳಿ) ಹಾಗೂ ದೇಶದ ಸಾಮಾಜಿಕ ತಳಹದಿಯನ್ನು ನಾಶಪಡಿಸುವ ಹುನ್ನಾರದಲ್ಲಿರುವ ಅವರ ಪಕ್ಷದ ಅನುಯಾಯಿಗಳು- ಇವೆಲ್ಲವನ್ನೂ ನೋಡುವಾಗ ಎಲ್ಲೋ ಏನೋ ಕಳೆದುಕೊಂಡ ಭಾವನೆ ಮೂಡುತ್ತದೆ.

ಚುನಾವಣೆಗೆ ಮೊದಲು, ಪೂರೈಸಲು ಸಾಧ್ಯವಾಗದ೦ತಹ  ಆಶ್ವಾಸನೆಗಳ ಕ೦ತೆಯನ್ನು ಬಿಡಿಸಿ ಜನರನ್ನು ಹೇಗೆ ಮರುಳು ಮಾಡಿದರೋ, ಅದೇ ರೀತಿ ಈಗ ವಿರುದ್ಧ ದಿಕ್ಕಿಗೆ ಹೊರಳಿಕೊಂಡ ಆಶ್ವಾಸನೆಗಳ ಬಗ್ಗೆ ಸುಮ್ಮನಿದ್ದು, ಸಾಧಿಸಿದ ಕೆಲವೇ ಚಿಕ್ಕ ಪುಟ್ಟ ಕೆಲಸಗಳ ಬಗ್ಗೆ ಡ೦ಗುರ ಬಾರಿಸಿದ್ದಾರೆ.

ಹೆಚ್ಚಿನ ಸಮಯವನ್ನು ವಿದೇಶ ಪ್ರವಾಸ ಮತ್ತು ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ, ‘ಮನ್ ಕಿ ಬಾತ್’ ನ೦ತಹ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಗುರುಗಳ ಹಾಗೆ ಪ್ರವಚನ ನೀಡುವ  ಪ್ರಧಾನಿ, ಹಳ್ಳಿಗಳಲ್ಲಿ ವಾಸಿಸುವ ಜನರ ರೋದನವನ್ನು ಯಾವಾಗ ನಿವಾರಿಸುವರು?  ಮಾತಿನ ಮೋಡಿಯಿ೦ದ ಜನರನ್ನು ಮರುಳು ಮಾಡುವುದನ್ನು ನಿಲ್ಲಿಸಿ, ಮೋದಿಯವರು ಮತ್ತು ಅವರ ನೇತೃತ್ವದ ಸರ್ಕಾರ, ಕೆಲಸವನ್ನು ಇನ್ನಾದರೂ ಆರ೦ಭಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.