ADVERTISEMENT

ಚಿಂತನೆ ಪಸರಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

‘ಜನ ಉದ್ಯೋಗ ಹುಡುಕಿಕೊಂಡು ಅಲೆಯುವುದರ ಬದಲು, ಯಾವುದರಿಂದ ತಮಗೆ ಸಾಕಾಗುವಷ್ಟನ್ನು ಸಂಪಾದಿಸಿ ಕಷ್ಟಕಾಲಕ್ಕೆ ಕೊಂಚ ಉಳಿಸಲು ಸಾಧ್ಯವಾಗುತ್ತದೋ ಅಂತಹ ಶಿಕ್ಷಣ ಅವಶ್ಯಕ’ ಎಂದು ಪ್ರತಿಪಾದಿಸಿದ್ದವರು ಸ್ವಾಮಿ ವಿವೇಕಾನಂದ.

ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಗುರುತಿಸಿದ್ದ  ಅವರ ಜನ್ಮದಿನಾಚರಣೆ ಯನ್ನು ಇಂದು ಯುವದಿನ, ಸ್ವಾಭಿಮಾನ ದಿನ ಎಂದೆಲ್ಲಾ  ಆಚರಿಸಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ, ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುವ ಹುನ್ನಾರ ದೇಶದಾದ್ಯಂತ ನಡೆಯುತ್ತಿದೆ.

ಶತ ಶತಮಾನಗಳಿಂದ ಆಡಳಿತದಿಂದ ದೂರವಿರುವ ಶೂದ್ರರು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುವಂತಹ ಭಾರತ ನಿರ್ಮಾಣವಾಗಬೇಕೆಂದು ವಿವೇಕಾನಂದರು ಹಂಬಲಿಸಿದ್ದರು. ಜಾತಿ ವ್ಯವಸ್ಥೆಯಿಂದ ರೋಸಿ, ಈ ಭೂಮಿ ನಿಜವಾಗಿಯೂ ಒಂದು ಹುಚ್ಚರ ಆಸ್ಪತ್ರೆಯಾಗಿದೆ ಎಂದು ಟೀಕಿಸಿದ್ದರು.

ದೇವರು, ಮಠ, ಮಂದಿರಗಳ ಹೆಸರಿನಲ್ಲಿ ವಿಜ್ಞಾನವನ್ನು ಮರೆಯದಿರೋಣ ಎಂದು ಹೇಳಿದ್ದ ವಿವೇಕಾನಂದರ ದೇಶದಲ್ಲಿ ಇಂದು ದೇವಸ್ಥಾನ, ಮಠಗಳು ವ್ಯಾಪಾರಿ ನೆಲೆಗಳಾಗಿವೆ. ಮೂಢನಂಬಿಕೆ, ಕಂದಾಚಾರ ಹೆಚ್ಚುತ್ತಿದೆ.

ವಿವೇಕಾನಂದರನ್ನು ಹಿಂದೂ ಧರ್ಮದ ಪ್ರಚಾರಕ ಎಂದು ಬಿಂಬಿಸುತ್ತಿರುವ ಈ ಕಾಲಘಟ್ಟದಲ್ಲಿ, ಅವರ ಸಮೂಹಮುಖಿ ಚಿಂತನೆಗಳನ್ನು ಬೆಳೆಸಿ ಹಳ್ಳಿಹಳ್ಳಿಗೂ ಪಸರಿಸುವ ಕಾರ್ಯ ಸಫಲವಾಗಬೇಕಾಗಿದೆ. ವಿವೇಕಾನಂದರು ಶಿಕ್ಷಿತ ಸಮಾಜದ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ.
-ಸತೀಶ್ ಕೆ., ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT