ADVERTISEMENT

ದ್ವೇಷ: ಎಷ್ಟು ಸರಿ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST

ಟಿ.ಕೆ. ತ್ಯಾಗರಾಜ್‌ ಅವರ ‘ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ!’ ಲೇಖನ (‘ಭಾವಭಿತ್ತಿ’, ಪ್ರ.ವಾ., ಜುಲೈ 18) ಓದಿ ಕಣ್ತುಂಬಿ ಬಂತು.
ಇತ್ತೀಚೆಗೆ ಅಲ್ಲಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ನೋಡಿದಾಗ ನಮ್ಮ ಸುತ್ತಮುತ್ತಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿರುವ, ನಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವ ಮುಸ್ಲಿಮರು ನಮಗೆ ನೆನಪಾಗುತ್ತಾರೆ.

ನಾವೆಲ್ಲಾದರೂ ಕುಟುಂಬ ಸಮೇತ ಪ್ರಯಾಣ ಹೋಗಬೇಕೆಂದಾಗ, ಬಾಡಿಗೆ ಕಾರಿನಿಂದಲೇ ಜೀವನ ಸಾಗಿಸುತ್ತಿರುವ ನಮ್ಮ ಹಳ್ಳಿಯ ಮಹಮ್ಮದ್‌ ಅಶ್ರಫ್‌ ನಮ್ಮನ್ನು ನಾವು ಹೇಳಿದಲ್ಲೆಲ್ಲಾ ತುಂಬಾ ಮುತುವರ್ಜಿಯಿಂದ ಸುತ್ತಿಸಿ ಸುರಕ್ಷಿತವಾಗಿ ಮನೆಗೆ ತಂದುಬಿಡುತ್ತಾನೆ.

ಬೆಳಿಗ್ಗೆ ಎದ್ದಕೂಡಲೇ ನಮ್ಮೂರಿನ ಗಣಪತಿ ದೇವಳಕ್ಕೆ ಹೋಗಿ ಕೈಮುಗಿದು ಬಂದು ತನ್ನ ದಿನಚರಿಯನ್ನು ಆರಂಭಿಸುವ ನಮ್ಮೂರಿನ ಅಮೀರ್‌ಜಾನ್‌, ಆ ದೇವಸ್ಥಾನದ ಕಮಿಟಿಯಲ್ಲಿದ್ದುಕೊಂಡು ಎಲ್ಲಾ ಧಾರ್ಮಿಕ ಕಾರ್ಯಗಳಲ್ಲೂ ಹಿಂದೂಗಳಿಗಿಂತ ಒಂದು ಕೈ ಮೇಲೆ ಎನ್ನುವಂತೆ ಹಗಲೂ ರಾತ್ರಿಯೆನ್ನದೆ ದುಡಿದು ದೇವರಿಗೆ ತನ್ನ ಸೇವೆಯನ್ನು ಮುಡಿಪಾಗಿರಿಸುತ್ತಾನೆ.

ADVERTISEMENT

ಬೆಳಿಗ್ಗೆ ನಾವು ಏಳುವ ಮೊದಲೇ ಕೆಲವು ಮುಸ್ಲಿಂ ಹುಡುಗರು ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಯಾವ ಭೇದ ಭಾವವಿಲ್ಲದೆ ಎಲ್ಲರ ಮನೆಗಳಿಗೂ ಹಾಲು, ಪೇಪರ್‌ ಹಾಕಿ ಬರುತ್ತಾರೆ. ಹಾಗಾದರೆ ಎಲ್ಲೋ ಕೋಮುಗಲಭೆ ನಡೆಯಿತೆಂದಾಗ ಇವರೆಲ್ಲರನ್ನೂ ಜಾತಿ– ಧರ್ಮದ ಒಂದೇ ಕಾರಣಕ್ಕಾಗಿ ಮಾನವೀಯತೆ ಮರೆತು ಹೊಡೆದು ಬಡಿದು ಊರಿನಿಂದ ಓಡಿಸಿಬಿಡೋಣವೇ!?

ಎಲ್ಲಾ ಜಾತಿ–ಧರ್ಮಗಳವರಲ್ಲೂ ಒಳ್ಳೆಯವರು, ಕೆಟ್ಟವರು ಇಬ್ಬರೂ ಇರುತ್ತಾರೆ. ಕೆಲವರು ಕೆಟ್ಟವರಿದ್ದಾರೆ ಎಂಬ ಮಾತ್ರಕ್ಕೆ ಆ ಇಡೀ ಸಮುದಾಯವನ್ನೇ ದ್ವೇಷಿಸುವುದು ಎಷ್ಟು ಸರಿ!?
-ಚಾವಲ್ಮನೆ ಸುರೇಶ್‌ ನಾಯಕ್‌, ಹಾಲ್ಮುತ್ತೂರ್‌, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.