ADVERTISEMENT

ನಿರಂತರವಾಗಿ ಪರಿಶೀಲಿಸಿ

ಡಾ.ಬಸವರಾಜ್ ಎನ್.ಅಕ್ಕಿ ಧಾರವಾಡ
Published 27 ಮೇ 2016, 19:50 IST
Last Updated 27 ಮೇ 2016, 19:50 IST

ವಿಷಕಾರಿ ರಾಸಾಯನಿಕ ವಸ್ತುವಿನಿಂದ ಕೂಡಿದ್ದ ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು  ನಿಷೇಧಿಸಲಾಗಿತ್ತು. ಇತ್ತೀಚೆಗೆ ಪುನಃ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈಗ ಕೆಲವು ಬ್ರ್ಯಾಂಡ್‌ಗಳ ಬ್ರೆಡ್, ಬನ್‌ಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ವಸ್ತುಗಳಿರುವುದು ಪತ್ತೆಯಾಗಿದೆಯಂತೆ. ಇಂತಹ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡುವ ಉದ್ದೇಶವಾದರೂ ಏನು?

ಬ್ರ್ಯಾಂಡೆಡ್‌ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕೇವಲ ಒಂದು ಬಾರಿ ಪರೀಕ್ಷಿಸಿ ಅಂತಿಮ ಪ್ರಮಾಣಪತ್ರ ನೀಡುವುದು ಸಮಂಜಸವಲ್ಲ. ಈ ಪದಾರ್ಥಗಳ ಗುಣಮಟ್ಟವು ಪ್ರಯೋಗಾಲಯಗಳಲ್ಲಿ ನಿರಂತರವಾಗಿ ಪರೀಕ್ಷೆಗೆ ಒಳಪಡಬೇಕು.

ಕಳಪೆ, ಅವಧಿ ಮೀರಿರುವ ಔಷಧಗಳ ಮಾರಾಟ, ರಸ್ತೆ ಬದಿಯಲ್ಲಿ, ಪೆಟ್ಟಿಗೆ ಅಂಗಡಿಗಳಲ್ಲಿ ಆಹಾರ ಮಾರಾಟ, ಹೋಟೆಲ್‌ ಕಾರ್ಮಿಕರ ಆರೋಗ್ಯ, ಆಹಾರ ಉತ್ಪಾದನಾ ಕೇಂದ್ರಗಳ ನೈರ್ಮಲ್ಯ ಮುಂತಾದವುಗಳನ್ನೂ ನಿರಂತರವಾಗಿ ಪರಿಶೀಲಿಸಬೇಕು.

ಅಪಾಯಕಾರಿ ಔಷಧ ಮತ್ತು ರಾಸಾಯನಿಕ ವಸ್ತುಗಳು ವಿದೇಶಗಳಲ್ಲಿ ಪತ್ತೆಯಾದ ತಕ್ಷಣ ನೀಷೇಧಕ್ಕೆ ಒಳಗಾಗುತ್ತವೆ. ನಮ್ಮ ದೇಶದಲ್ಲಿ ಅವು ಬೇಗನೆ ನಿಷೇಧಕ್ಕೆ ಒಳಗಾಗುವುದಿಲ್ಲ.  ಖಾಸಗಿ ಟಿ.ವಿ.ಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಕೈಗೊಳ್ಳುವ ಸಮೀಕ್ಷೆಗಳನ್ನು ಸರ್ಕಾರ ಕೂಲಕಂಷವಾಗಿ ಪರಿಶೀಲಿಸಬೇಕು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಗೆ ಬಲ ತುಂಬಬೇಕು. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾಗುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ದಿಟ್ಟ ಆಹಾರ ನೀತಿ ಜಾರಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.