ADVERTISEMENT

ನೆಮ್ಮದಿ ಕೆಡಿಸಿರುವ ಕಸ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ನೆಮ್ಮದಿ ಕೆಡಿಸಿರುವ ಕಸ
ನೆಮ್ಮದಿ ಕೆಡಿಸಿರುವ ಕಸ   
ನಂದಿನಿ ಬಡಾವಣೆಯ ರಾಮಕೃಷ್ಣ ನಗರದಲ್ಲಿ ಸುರಿಯಲಾಗಿರುವ ಕಸದ ರಾಶಿ ಸ್ಥಳೀಯರ ನೆಮ್ಮದಿ ಹಾಳು ಮಾಡಿದೆ. ಕಸದಿಂದ ಕೆಟ್ಟ ವಾಸನೆ ಹೊಮ್ಮುತ್ತಿದ್ದು. ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದಿಂದಾಗಿ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸಮಸ್ಯೆ ನಿವಾರಿಸಬೇಕೆಂದು ಮನವಿ.
ರಾಮಕೃಷ್ಣನಗರ ನಿವಾಸಿಗಳು
 
ಕಸ ವಿಲೇವಾರಿ ಸರಿಯಾಗಲಿ
ರಾಮನವಮಿಗೆ ನಗರದ ಹಲವು ಕಡೆ ಪಾನಕ, ಮಜ್ಜಿಗೆ ವಿತರಣೆ ಜೋರಾಗಿಯೇ ನಡೆಯಿತು. ಆದರೆ ಇವುಗಳ ವಿತರಣೆಗೆ ಬಳಸಿದ ಪ್ಲಾಸ್ಟಿಕ್ ಗ್ಲಾಸುಗಳ ವಿಲೇವಾರಿ ಸರಿಯಾಗಿ ಆಗಿಲ್ಲ. ಹೀಗಾಗಿ ಹಬ್ಬ ಮುಗಿದು ಇಷ್ಟು ದಿನವಾದರೂ ಬೀದಿ ಬದಿಯಲ್ಲಿ ಪ್ಲಾಸ್ಟಿಕ್ ಪ್ಲೇಟ್‌ ಮತ್ತು ಲೋಟಗಳ ರಾಶಿ ಹಾಗೆಯೇ ಇದೆ.
ರಾಮನವಮಿಯಂಥ ಸಂಭ್ರಮದ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಪಾನಕ– ಕೋಸಂಬರಿ ವಿತರಿಸಿದವರೇ ಕಸದ ನಿರ್ವಹಣೆ ಮಾಡುವಂತೆ ಬಿಬಿಎಂಪಿ ಸ್ಪಷ್ಟ ಆದೇಶ ಹೊರಡಿಸಬೇಕು. ಆಗ ಮಾತ್ರ ದೇವರ ಹೆಸರಿನಲ್ಲಿ ಆಗುತ್ತಿರುವ ಪರಿಸರ ಹಾನಿಯನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು. ಈ ಬಗ್ಗೆ ಬಿಬಿಎಂಪಿ ಗಂಭೀರವಾಗಿ ಚಿಂತನೆ ನಡೆಸಬೇಕು.
ಎ.ಕೆ.ಅನಂತಮೂರ್ತಿ, ನಾಗೇಂದ್ರ ಬ್ಲಾಕ್
 
ಮೆಟ್ರೊ ಸ್ಟೇಷನ್‌ಗೆ ದಾರಿ ತೋರಿಸಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಸಿಟಿ ರೈಲು ನಿಲ್ದಾಣ) ಇಳಿದ ಪ್ರಯಾಣಿಕರಿಗೆ ‘ಮೆಟ್ರೊ’ ಹಿಡಿಯಲು ಎತ್ತ ಹೋಗಬೇಕು ಎಂಬುದೇ ದೊಡ್ಡ ಗೊಂದಲ. ಹೊಸದಾಗಿ ಬಂದ ಅನೇಕರು ನಿಲ್ದಾಣದಿಂದ ಹೊರ ಬಂದು ಕೆಂಪೇಗೌಡ ಬಸ್‌ ನಿಲ್ದಾಣದ (ಮೆಜೆಸ್ಟಿಕ್) ಮೆಟ್ರೊ ಸ್ಟೇಷನ್‌ವರೆಗೆ ನಡೆದೇ ಬರುತ್ತಾರೆ. ಬ್ಯಾಗ್‌ಗಳು, ಮಕ್ಕಳನ್ನು ಕರೆದುಕೊಂಡು ಬರುವಾಗ ಟ್ರಾಫಿಕ್‌ನಲ್ಲಿ ಕಷ್ಟ ಅನುಭವಿಸುತ್ತಾರೆ.
ರೈಲು ನಿಲ್ದಾಣದ ಪಕ್ಕದಲ್ಲಿಯೇ ಮೆಟ್ರೊ ಸ್ಟೇಷನ್‌ ಇದೆ. ಆದರೆ ರೈಲು ನಿಲ್ದಾಣದಲ್ಲಿ ಎಲ್ಲಿಯೂ ಈ ಸಂಬಂಧ ಸೂಚನಾ ಫಲಕಗಳು ಇಲ್ಲ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ ಸೂಚನಾ ಫಲಕ ಅಳವಡಿಸಿದರೆ ಜನರಿಗೆ ಅನುಕೂಲವಾಗುತ್ತದೆ.
ಹೃಷೀಕೇಶ, ಯಲಹಂಕ
 
ಆಸನಗಳನ್ನು ಒದಗಿಸಿ
ಮರಿಯಪ್ಪನಪಾಳ್ಯದಲ್ಲಿ ಮಹಾಕವಿ ಕುವೆಂಪು ನಗರದ ಮೆಟ್ರೊ ನಿಲ್ದಾಣದ ಪಶ್ಚಿಮ ಭಾಗದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನವರಂಗ್‌ ಹಾಗೂ ಮಲ್ಲೇಶ್ವರದ ಕಡೆ ಹೋಗುವ ಬಿಎಂಟಿಸಿ ಬಸ್ ನಿಲ್ದಾಣಗಳಿವೆ. ಅವುಗಳಿಗೆ ತಂಗುದಾಣವಿಲ್ಲದ ಕಾರಣ ಪ್ರಯಾಣಿಕರು ತೊಂದರೆಪಡುವಂತಾಗಿದೆ. ಇಲ್ಲಿ ತಂಗುದಾಣ ನಿರ್ಮಿಸಿ ಅಥವಾ ನಿಲ್ದಾಣವನ್ನು ಮೆಟ್ರೊ ನಿಲ್ದಾಣದಡಿಗೆ ಸ್ಥಳಾಂತರಿಸಿ.
ಬಸವರಾಜ ಹುಡೇದಗಡ್ಡಿ,
ರಾಜಾಜಿ ನಗರ 2ನೆ ಹಂತ

ಸಿಗ್ನಲ್ ಅಳವಡಿಸಿ

ಬನ್ನೇರುಘಟ್ಟ ರಸ್ತೆಯಲ್ಲಿ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಗೊಟ್ಟಿಗೆರೆ, ಕಾಳೇನ ಅಗ್ರಹಾರ ಮುಂತಾದೆಡೆಗಳಿಗೆ ಸಂಚರಿಸುವ ಬಸ್‌ಗಳು ಹಾಗೂ ಇತರ ವಾಹನಗಳು ಅತಿವೇಗದಿಂದ ಸಂಚರಿಸುತ್ತವೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಇಲ್ಲಿ ಟ್ರಾಫಿಕ್‌ ಸಿಗ್ನಲ್ ಅವಶ್ಯಕತೆ ಇದೆ.
ವಿ.ಹೇಮಂತ್ ಕುಮಾರ್, ಜೆ.ಪಿ.ನಗರ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.