ADVERTISEMENT

ಪದ ಕುತೂಹಲ

ರಮಾಕಾಂತ ಪುರಾಣಿಕ
Published 26 ಮೇ 2017, 19:30 IST
Last Updated 26 ಮೇ 2017, 19:30 IST

‘ಭಗ’ ಎಂಬ ಶಬ್ದ ವೇದಗಳಲ್ಲಿ ಹಲವೆಡೆ ಬಳಕೆಯಾಗಿರುವ ಬಗ್ಗೆ ಜೆ.ಶ್ರೀನಿವಾಸಮೂರ್ತಿ ಅವರು ‘ಶಬ್ದ–ಅರ್ಥಗಳ ಸಾಂಸ್ಕೃತಿಕ ನೆಲೆಗಳು’ ಎಂಬ ಲೇಖನದಲ್ಲಿ ವಿವರಿಸಿದ್ದಾರೆ (ಪ್ರ.ವಾ., ಸಂಗತ, ಮೇ 23). ಋಗ್ವೇದದಲ್ಲಂತೂ ‘ಭಗ’ ಎನ್ನುವ ದೇವತೆಯ ಮೇಲೆಯೇ ಇರುವ ಒಂದು ಸೂಕ್ತದ ಉದಾಹರಣೆಯನ್ನೂ ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು. ಆದರೆ ವೇದ ಸಂಹಿತೆಗಳಲ್ಲಿಯ ಅರ್ಥ ‘ಭಗ’ ಎನ್ನುವ ಮೂಲ ಪದದ ಮೇಲೆಯೇ ನಿಂತಿದೆ. ಬೌದ್ಧ ಪರಂಪರೆಯಲ್ಲಿ ಅದು ಮುಖ್ಯವಾಗಿ ‘ಭಗ್ನ’ ಎನ್ನುವ ಪದ ಮತ್ತು ಅದರ ಅರ್ಥದ ಮೇಲೆ ಇದೆ.

ಜ್ಞಾನೋದಯವಾದ  ಗಳಿಗೆಯಲ್ಲಿ ತಥಾಗತ ಬುದ್ಧರು ಆನಂದದಿಂದ ಹೀಗೆ ಘೋಷಿಸುತ್ತಾರೆ.
‘ಸಬ್ಬಾತೆ ಘಾಸುಕಾ ಭಗ್ಗಾ,
ಗಹಕೂಟಂ ವಿಸಾಂಖಿತಂ.
ವಿಸಂಖಾರಗತಂ ಚಿತ್ತಂ,
ತಣ್ಣಾನಂ ಖಯಮಜ್ಝಗಾ’

ಅಂದರೆ, ‘ಮನೆ ಕಟ್ಟುವವನೇ, ನಿನ್ನನ್ನು ನೋಡಿಬಿಟ್ಟಿದ್ದೇನೆ. ಮತ್ತೆ ನೀನು ಮನೆ ಕಟ್ಟಲಾರೆ. ಬೇಕಾದ ತೊಲೆ ನಿಲವುಗಳೆಲ್ಲಾ ಚೂರುಚೂರಾಗಿವೆ. ಮನೆಯ ಆಧಾರಸ್ತಂಭ ಮುರಿದುಹೋಗಿದೆ. ನನ್ನ ಚಿತ್ತವು ಸಂಸ್ಕಾರಗಳಿಂದ ಬಿಡುಗಡೆಯಾಗಿದೆ. ತೃಷ್ಣೆಯೆಲ್ಲಾ ಕ್ಷಯವಾಗಿ ಹೋಗಿದೆ’.

ಒಂದು ಶಬ್ದ ಎರಡು ಪರಂಪರೆಗಳಲ್ಲಿ ಬೇರೆ ಬೇರೆ ಮೂಲಗಳಿಂದ ಹುಟ್ಟಿ ಇವತ್ತು ಎರಡೂ ಅರ್ಥಗಳಿಗೂ ಹೊಂದಿಕೊಂಡು  ಅತ್ಯಂತ  ಗೌರವಾರ್ಹ ಪದವಾಗಿರುವುದು  ಕುತೂಹಲಕಾರಿಯಾಗಿದೆ. ಶ್ರೀನಿವಾಸಮೂರ್ತಿ ಅವರಿಗೆ ಮತ್ತು ಈ ಸಂವಾದಕ್ಕೆ ಆಸ್ಪದ ಮಾಡಿಕೊಟ್ಟ ‘ಪ್ರಜಾವಾಣಿ’ಗೂ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.