ADVERTISEMENT

ಪೌಷ್ಟಿಕ ರವೆ ನೀಡಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 19:30 IST
Last Updated 14 ಏಪ್ರಿಲ್ 2017, 19:30 IST

ಕರ್ನಾಟಕದಲ್ಲಿ ಸಮೃದ್ಧವಾಗಿ ಬೆಳೆಯುವ ಗೋವಿನ ಜೋಳ, ಅಕ್ಕಿಯಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಏಕದಳ ಧಾನ್ಯ. ಪಡಿತರದಲ್ಲಿ ಈಗ ಕೇವಲ ಅಕ್ಕಿ ವಿತರಿಸುತ್ತಿರುವುದರಿಂದ ಅಕ್ಕಿಯ ಧಾರಣೆ ಮುಕ್ತ ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ. ಆದರೆ ಅಕ್ಕಿಗೆ ಹೋಲಿಸಿದರೆ ಮೆಕ್ಕೆಜೋಳದ ಬೆಲೆ ಬಹಳ ಕಡಿಮೆ. ಬಿಳಿಜೋಳದ ಬೆಲೆಯೂ ಈಗ ಸಾಕಷ್ಟು ಹೆಚ್ಚಿರುವುದರಿಂದ ಕರ್ನಾಟಕದ ಉತ್ತರ ಭಾಗದ ದುಡಿಯುವ ಜನ ರೊಟ್ಟಿ, ಉಪ್ಪಿಟ್ಟು ಮತ್ತು ನುಚ್ಚಿನ ರೂಪದಲ್ಲಿ ಆಹಾರವಾಗಿ ಗೋವಿನ ಜೋಳವನ್ನು ಈಗ ಹೆಚ್ಚಿಗೆ ಉಪಯೋಗಿಸುತ್ತಾರೆ.

ಇವರಿಗೆ ಅಕ್ಕಿ ಮುಖ್ಯ ಆಹಾರ ಧಾನ್ಯವಲ್ಲ. ಪಡಿತರದಲ್ಲಿ ನೀಡುತ್ತಿರುವುದರಿಂದ ಅನಿವಾರ್ಯವಾಗಿ ಅದನ್ನು ಬಳಸುತ್ತಿದ್ದಾರಷ್ಟೆ. ಒಂದು ವೇಳೆ ಪಡಿತರದಲ್ಲಿ ಗೋವಿನ ಜೋಳದ ರವೆ (ಗೋವಿನ ಜೋಳವನ್ನು ಇಡಿಯಾಗಿ ನೀಡಿದರೆ ಅದನ್ನು ಗಿರಣಿಯಲ್ಲಿ ಬೀಸಲು ಅಧಿಕ ಹಣ ಖರ್ಚಾಗುತ್ತದೆ) ನೀಡಲು ಸಾಧ್ಯವಾದರೆ ಬಡಜನರ ಆರೋಗ್ಯದ ದೃಷ್ಟಿಯಿಂದ ಬಹಳ ಉಪಯುಕ್ತವಾಗುತ್ತದೆ. ಕನಿಷ್ಠ ಈ ಭಾಗಕ್ಕೆ ಸೀಮಿತವಾಗಿಯಾದರೂ ಗೋವಿನ ಜೋಳದ ರವೆ ನೀಡಿದರೆ ಅದನ್ನು ಇಲ್ಲಿನವರು  ತುಂಬು ಮನಸ್ಸಿನಿಂದ ಸ್ವಾಗತಿಸುವುದರಲ್ಲಿ ಸಂದೇಹವಿಲ್ಲ. ಬಿಸಿಯೂಟಕ್ಕೂ ಇದನ್ನು ವಿಸ್ತರಿಸಿದರೆ ಮಕ್ಕಳಿಗೆ ಪೌಷ್ಟಿಕ ಮತ್ತು ಸ್ಥಳೀಯ ಆಹಾರ ಕೊಟ್ಟಂತಾಗುತ್ತದೆ. ಗೋವಿನ ಜೋಳವನ್ನು ಬೆಳೆಯುವ ರೈತರಿಗೆ ಸರಿಯಾದ ಧಾರಣೆ ಸಹ ಸಿಕ್ಕಿದಂತಾಗಿ ಅವರಿಗೆ ಪ್ರೋತ್ಸಾಹ ಲಭಿಸುತ್ತದೆ.
ಹಜರತಅಲಿ ದೇಗಿನಾಳ,
ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.