ADVERTISEMENT

ವಿಶೇಷ ಸಾಧನ

ವಿ.ಡಿ.ಮಾದನಶೆಟ್ಟಿ ವಿಜಯಪುರ
Published 30 ಮೇ 2016, 19:30 IST
Last Updated 30 ಮೇ 2016, 19:30 IST

ಅಭದ್ರ ಭಾವ ಎದುರಿಸುತ್ತಿರುವ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ದೃಷ್ಟಿಯಿಂದ ಸರ್ಕಾರ,  ಮೊಬೈಲ್‌ನಲ್ಲಿ ಪ್ಯಾನಿಕ್‌ ಬಟನ್ ಅಳವಡಿಕೆಗೆ ಮುಂದಾಗಿರುವುದು ಶ್ಲಾಘನೀಯ.

ಆಧುನಿಕ ಸಮಾಜದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಐಟಿ, ಬಿಟಿ, ಬಿಪಿಒ, ಕಾಲ್‌ಸೆಂಟರ್‌ಗಳ ಭರಾಟೆ ಆರಂಭವಾಗಿರುವುದು ವಿದ್ಯಾವಂತ ಯುವತಿಯರಿಗೆ ಭವಿಷ್ಯದ ಮೆಟ್ಟಿಲಾಗಿದೆ.

ಬಿಪಿಒ ಉದ್ಯೋಗಿ ಪ್ರತಿಭಾ, ಕಾರು ಚಾಲಕನ ವಿಕೃತಿಗೆ ಆಹುತಿಯಾಗಿ 11 ವರ್ಷ ಕಳೆದರೂ ಮಹಿಳೆಯರ ಸುರಕ್ಷತೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.

ಈ ಹಿಂದೆ, ಮುಂಬೈ ಮೂಲದ  ಕಂಪೆನಿಯೊಂದು ಸ್ವಯಂಚಾಲಿತ ಜಾಗೃತಿ ಸಾಧನವನ್ನು ಅಭಿವೃದ್ಧಿಪಡಿಸಿತ್ತು. ಈ ಸಾಧನವನ್ನು  ವಾಹನಕ್ಕೆ ಜೋಡಿಸಬೇಕಾಗಿತ್ತು.

ವಾಹನದ ಎಲ್ಲ ಸೀಟುಗಳ ಪಕ್ಕ ಒಂದು ಬಟನ್‌ ಅಳವಡಿಸಬೇಕಾಗಿತ್ತು. ಅಪಾಯದಲ್ಲಿದ್ದಾಗ ಮಹಿಳೆ ಆ ಬಟನ್‌ ಒತ್ತಿದರೆ,  ವಾಹನದ ಎಂಜಿನ್‌ ಸ್ಥಗಿತಗೊಳ್ಳುವುದಲ್ಲದೆ ಪೊಲೀಸ್‌ ನಿಯಂತ್ರಣ ಕೊಠಡಿ ಸೇರಿದಂತೆ ಮೊದಲೇ ಗೊತ್ತುಪಡಿಸಿದ 5 ದೂರವಾಣಿ ಸಂಖ್ಯೆಗಳಿಗೆ ಅಪಾಯದ ಸಂದೇಶ ರವಾನೆಯಾಗುವ ವ್ಯವಸ್ಥೆ ಇತ್ತು. 

ಇಷ್ಟಕ್ಕೆ ಈ ಸಾಧನ ಸುಮ್ಮನಾಗದೆ ಜೋರಾಗಿ ಸೈರನ್‌ ಮೊಳಗಿಸುತ್ತಿತ್ತು.  ಆದರೆ ಈ ಸಾಧನ ಹೆಚ್ಚು ಬಳಕೆಯಾಗದೆ ಹೋದದ್ದು ವಿಪರ್ಯಾಸ. ಈಗ ಸರ್ಕಾರ, ಮಹಿಳೆಯರಿಗೆ ಸುರಕ್ಷತೆ, ಭದ್ರತೆ ಒದಗಿಸುವ ದೃಷ್ಟಿಯಿಂದ ಮುಂದಿನ ವರ್ಷದಿಂದ ಮಾರಾಟವಾಗುವ ಎಲ್ಲ ಮೊಬೈಲ್‌ಗಳಿಗೆ ‘ಆತಂಕದ ಕರೆ’ ನೀಡುವ ಬಟನ್‌ ಇರಲೇಬೇಕೆಂಬ ನೀತಿಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.