ADVERTISEMENT

ಶುಚಿ ಸುರಂಗಮಾರ್ಗ

ಬಸವರಾಜ ಹುಡೆದಗಡ್ಡಿ
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಹೆಚ್ಚು ವಾಹನ ದಟ್ಟಣೆ ಇರುವ ಮಹಾರಾಣಿ ಕಾಲೇಜಿನಿಂದ ಕೆ.ಆರ್‌. ಸರ್ಕಲ್‌ ನಡುವೆ ಇರುವ ಶೇಷಾದ್ರಿ ರಸ್ತೆಗೆ ಹೊಂದಿಕೊಂಡಂತೆ ಸುರಂಗಮಾರ್ಗ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿ ವಿವಿಧ ಕಾಲೇಜುಗಳು, ಕಚೇರಿಗಳು ಇವೆ. ಈ ಮಾರ್ಗವಾಗಿ ಓಡಾಡುವ ವಯೋವೃದ್ಧರು, ಗರ್ಭಿಣಿಯರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲೆಂದು ಈ ಪಾದಚಾರಿ ಸುರಂಗಮಾರ್ಗ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಈ ಮಾರ್ಗ ಅನೇಕ ದಿನಗಳಿಂದ  ಬಹುತೇಕ ನಿರುಪಯುಕ್ತವಾಗಿದ್ದು, ಅಪಾಯಕ್ಕೆ ಎಡೆಮಾಡಿಕೊಡುವ ತಾಣವಾಗಿ ಮಾರ್ಪಟ್ಟಿತ್ತು.

ಈ ಮಾರ್ಗದಲ್ಲಿ ವಿದ್ಯುತ್‌ ದೀಪಗಳು ಮಾಯವಾಗಿ, ಮಾರ್ಗದ ಒಳಭಾಗದಲ್ಲಿ ಕಸ ತುಂಬಿ ಹೋಗಿತ್ತು. ನಡೆಯುತ್ತಿದ್ದರೆ ಮೂತ್ರ ವಾಸನೆ ಮೂಗಿಗೆ ರಾಚುತ್ತಿತ್ತು. ಇದನ್ನು ಶುಚಿಗೊಳಿಸಿ ದೀಪ ಅಳವಡಿಸುವ ಮೂಲಕ ಈ ಮಾರ್ಗವನ್ನು ಅನೈತಿಕ, ಅಕ್ರಮ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕು ಎಂದು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಇತ್ತೀಚೆಗೆ ಪುರಸಭೆಯೊಂದಿಗೆ ಮಹಾನಗರ ನೈರ್ಮಲ್ಯ ಕಾಯ್ದುಕೊಳ್ಳಲು ‘ಅಗ್ಲಿ ಇಂಡಿಯಾ’ ಸಂಸ್ಥೆ ಒಪ್ಪಂದ ಮಾಡಿಕೊಂಡು ಪಾದಚಾರಿಗಳ ಮಾರ್ಗಗಳ ಶುಚಿತ್ವ ಕಾಯುವ ಕಾಯಕಕ್ಕೆ ಚಾಲನೆ ನೀಡಿದೆ. ಎಸ್‌.ಜೆ. ಪಾಲಿಟೆಕ್ನಿಕ್‌ ಬಳಿ ಇರುವ ಸುರಂಗ ಪಾದಚಾರಿ ಮಾರ್ಗವನ್ನೂ ಶುಭ್ರಗೊಳಿಸಿ ಸುರಂಗ ಮಾರ್ಗವನ್ನು ಯೋಗ್ಯಗೊಳಿಸಿದ್ದಕ್ಕೆ ವಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.