ADVERTISEMENT

ಸಂದರ್ಶನಕ್ಕೆ ತಡೆ ಏಕೆ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST

ದೆಹಲಿಯಲ್ಲಿ ನಡೆದ ಸಮೂಹಿಕ ಅತ್ಯಾಚಾರ ಪ್ರಕರಣವೊಂದರ ಆರೋಪಿಯ ಸಂದರ್ಶನ ಒಳಗೊಂಡಿರುವ ಸಾಕ್ಷ್ಯಚಿತ್ರ ರೂಪಿಸಿದ ಲೆಸ್ಲಿ ಉಡ್ವಿನ್  ಅಭಿನಂದ­ನಾರ್ಹರು. ಆರೋಪಿ ಮುಕೇಶನ ಕೆಲವು ಮಾತುಗಳು ನಮ್ಮ ಸಮಾಜದ ಶೇಕಡ ೮೦­ರಷ್ಟು ಪುರುಷರ ಮನೋಭಾವಕ್ಕೆ ಕನ್ನಡಿ ಹಿಡಿಯುವಂತಿವೆ.

‘ಮಹಿಳೆಗೆ ಮನೆಗೆಲಸವೇ ಭೂಷಣ... ಯಾವುದೇ ವಿವಾದಗಳಲ್ಲಿ ಮಹಿಳೆ ಸೋಲೊಪ್ಪಿಕೊಳ್ಳಲೇಬೇಕು... ಆಕೆ ಹದ್ದುಮೀರಿ ವರ್ತಿಸಿದರೆ (?)  ತಕ್ಕ ಪಾಠ ಕಲಿಸಬೇಕು’ ಇತ್ಯಾದಿ ವಾಕ್ಯಗಳು ನಮ್ಮ ನಾಗರಿಕ, ವಿದ್ಯಾವಂತ ಸಮಾಜದಲ್ಲೂ ನಮ್ಮ ಸುತ್ತಮುತ್ತಲೇ ಕೇಳಿದಂತೆ ಭಾಸವಾಗುತ್ತವೆ.

ಮಹಿಳೆಯ ಉಡುಪು, ಮಾತು, ನಡತೆ, ಕೆಲಸದ ಸ್ಥಳ, ಸಮಯ, ಮನರಂಜನೆ, ಇತ್ಯಾದಿಗಳೆಲ್ಲವೂ ತನ್ನ ನಿಯಂತ್ರಣದಲ್ಲೇ ಇರಬೇಕು ಎನ್ನುವ ಪುರುಷರಿಗೇನೂ ನಮ್ಮ ಸಮಾಜದಲ್ಲಿ ಕೊರತೆಯಿಲ್ಲ. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಸಾರಿದ ಮನುವಿನ ಸಂತತಿ ನಮ್ಮ ನಡುವೆ ಹುಲುಸಾಗಿ ಬೆಳೆದಿದೆ. ಇವೆಲ್ಲದರ ನಡುವೆಯೂ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್‌ರ ಮಾತುಗಳನ್ನು ಕೇಳಿ ಇನ್ನೂ ಸಂವೇದನೆಗಳು ಪೂರ್ತಿ ಸತ್ತಿಲ್ಲ ಎನಿಸಿ ಸಮಾಧಾನವಾಯಿತು.

ಈ ಸಂದರ್ಶನ ಎಲ್ಲ ಕಡೆಯೂ ಪ್ರಸಾರವಾಗಲಿ. ಸಾಮಾಜಿಕ ಜಾಲತಾಣ­ಗಳಲ್ಲಿ, ಯೂ ಟ್ಯೂಬ್‌ನಲ್ಲಿ ಲಕ್ಷಾಂತರ ಜನರು ನೋಡುವಂತಾಗಲಿ. ಮಹಿಳೆಯನ್ನು ಒಬ್ಬ ಜೀವಿಯೆಂದು ಗೌರವಿಸುವ ಮನೋಭಾವ ಶೈಶವಾವಸ್ಥೆಯಲ್ಲಿರುವ ನಮ್ಮ ಮಹಾನ್ ಸಂಸ್ಕೃತಿಯ ಕರಾಳ ಮುಖ ವಿಶ್ವಕ್ಕೆಲ್ಲ ಪರಿಚಯವಾಗಲಿ.

ಇಂಥ ವಿಚಾರಗಳು ಹೆಚ್ಚು ಹೆಚ್ಚು ಚರ್ಚೆಗೊಳಗಾದರೆ ಮಾತ್ರ ನಮ್ಮ  ಮುಂದಿನ ಪೀಳಿಗೆಯ ಮನೋಭಾವದಲ್ಲಿ ಇತ್ಯಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದು.
–ವೇದಾ ಅಠವಲೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.