ADVERTISEMENT

ಸರ್ಕಾರದ ಕೆಲಸವಲ್ಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST

‘ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ದೀಪದ ಗಿಡಿ ಒಡ್ಡಿನಲ್ಲಿ ಮಹದೇಶ್ವರ ಸ್ವಾಮಿಯ 80 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ’ ಎಂಬ ಸುದ್ದಿಯನ್ನು (ಪ್ರ.ವಾ., ಫೆ. 8) ಓದುತ್ತಿದ್ದಂತೆಯೇ ಬೆಟ್ಟದ ಮೇಲೆ ಕಂಡಂತಹ ಒಂದು ಪ್ರಸಂಗ ನೆನಪಾಯಿತು.

ದೇವರ ದರ್ಶನಕ್ಕೆಂದು ಒಮ್ಮೆ ಹೋಗಿದ್ದಾಗ, ದೇಗುಲದ ತುಸು ಸಮೀಪದಲ್ಲಿದ್ದ ಮರಗಿಡ ಪೊದೆಗಳ ನಡುವೆ ಬಿದ್ದಿದ್ದ ಮುರುಟಾಗಿದ್ದ ಕಲ್ಲಿಗೆ ಸುಮಾರು 60 ವರ್ಷದ  ಹೆಂಗಸೊಬ್ಬಳು ಕೈಮುಗಿಯುತ್ತ ‘ಅಪ್ಪಾ... ಮಾದಪ್ಪ... ನಂಗೆ ನೆಪ್ಪು ಕಂಡತ್ತಾವಿಂದ್ಲೂ ನಿನ್ ಸೇವೆ ಮಾಡ್ಕೊಂಡು ಬಂದಿದ್ದೀನಿ. ನನ್ ಬವಣೆನೆಲ್ಲಾ ಕಳ್ದು ಒಳ್ಳೇದು ಮಾಡಪ್ಪ. ನಿನ್ನೆ ನಂಬ್ಕೊಂಡಿದ್ದೀನಿ’ ಎಂದು ನೇರವಾಗಿ ದೇವರೊಡನೆ ಮಾತನಾಡುತ್ತಿದ್ದಳು.

ಮಾದೇಶ್ವರನ ಭಕ್ತರಲ್ಲಿ ಹೆಚ್ಚಿನ ಮಂದಿ ನಮ್ಮ ಹಳ್ಳಿಗಾಡಿನ ಜನಸಮುದಾಯ. ಅವರ ಪಾಲಿಗೆ ಕಲ್ಲಿನ ರೂಪದ ಮಾದಪ್ಪನಿಗಿಂತಲೂ ಪ್ರಕೃತಿಯ ಕಣಕಣದಲ್ಲಿಯೂ ಚೈತನ್ಯಶೀಲನಾಗಿ ಜೀವಂತವಾಗಿರುವ ಮಾದಪ್ಪನೇ ಸತ್ಯ ಮತ್ತು ನಿತ್ಯ.

ಪ್ರಜೆಗಳಿಗೆ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ ದೊರಕುವಂತೆ ಮಾಡುವ ಯೋಜನೆಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವ ಸರ್ಕಾರದ  ಕೆಲಸವಾಗಬೇಕೇ ಹೊರತು, ದೇವರ ಪ್ರತಿಮೆ ಸ್ಥಾಪಿಸುವುದಲ್ಲ.
-ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT