ADVERTISEMENT

ಹಿಂದಿ ಹೇರಿಕೆ ಬೇಕೆ?

ಮಹೇಶ್ ರುದ್ರಗೌಡರ, ವಿಜಾಪುರ
Published 27 ಡಿಸೆಂಬರ್ 2015, 19:41 IST
Last Updated 27 ಡಿಸೆಂಬರ್ 2015, 19:41 IST

ಬೆಂಗಳೂರು– ಮೈಸೂರು ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಪರಿಣಾಮವಾಗಿ, ಈ ಮಾರ್ಗದ ಮೈಲುಗಲ್ಲುಗಳಲ್ಲಿ ಇದ್ದ ಕನ್ನಡ ಭಾಷೆಯನ್ನು ತೆಗೆದುಹಾಕಿ ಹಿಂದಿ ಭಾಷೆಯನ್ನು ಹಾಕಲಾಗಿದೆ. ಕೇಂದ್ರ ಸರ್ಕಾರದ ಯಾವುದೇ ವ್ಯವಸ್ಥೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗಬೇಕು ಎಂದೇನಿಲ್ಲ, ಕರ್ನಾಟಕದಲ್ಲಿ ಕನ್ನಡ ಇಲ್ಲದಿದ್ದರೂ ಹಿಂದಿ ಇರಲೇಬೇಕು ಎಂಬುದು ಇದರರ್ಥ.

ಇದು ಹಿಂದಿಯೇತರ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಆದರೆ ಹಿಂದಿ ಭಾಷಿಕರಿಗೆ ದೇಶದ ಯಾವುದೇ ಭಾಗಕ್ಕೆ ಹೋದರೂ ಅವರ ನುಡಿಯಲ್ಲೇ ಎಲ್ಲ ವ್ಯವಸ್ಥೆ ಸಿಗುತ್ತದೆ.

ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ಕನ್ನಡಿಗರನ್ನು ಕನ್ನಡದ ಮೂಲಕ ತಲುಪಬೇಕಿರುವುದು ಸರಿಯಾದ ನಿಯಮ. ಖಾಸಗಿ ಕಂಪೆನಿಗಳೇ ‘ಕರ್ನಾಟಕದ ಗ್ರಾಹಕರನ್ನು ಕನ್ನಡದ ಮೂಲಕವೇ ತಲುಪಬೇಕು’ ಎಂಬ ಕನಿಷ್ಠ ಪ್ರಜ್ಞೆ ಹೊಂದಿರುವಾಗ ‘ಜನಹಿತಕ್ಕಾಗಿ ಜಾರಿ’ ಎಂದು ಹೇಳುವ ಕೇಂದ್ರದ  ಯೋಜನೆಗಳು ಜನರ ಭಾಷೆಯನ್ನೇ ಕಡೆಗಣಿಸಿದಂತಾಗುತ್ತದೆ. ಆದರೂ ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ರಾಜ್ಯ ಸರ್ಕಾರ ಮೌನ ವಹಿಸುವುದು ಜನ ವಿರೋಧಿ ನಿಲುವು.

ಕರ್ನಾಟಕದ ರೈಲ್ವೆ, ಅಂಚೆ, ಬ್ಯಾಂಕಿಂಗ್‌ನಂಥ ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ವ್ಯವಸ್ಥೆಗಳು ಹಿಂದಿ ಹೇರಿಕೆಯ ತಾಣಗಳಾಗಿವೆ. ಇದೆಲ್ಲದರ ಮೂಲವಾಗಿರುವ ಭಾಷಾ ನೀತಿಗೆ ತಿದ್ದುಪಡಿ ಮಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.