ADVERTISEMENT

ಹೆಸರಿನಲ್ಲೇನಿದೆ?

ಚಂದನ್, ಬೆಂಗಳೂರು
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಮೊನ್ನೆ ಆಹ್ವಾನ ಪತ್ರಿಕೆಯೊಂದನ್ನು ಅಚ್ಚಿಗೆ ಕಳುಹಿಸುವಾಗ ಚರ್ಚೆಗೆ ಆಸ್ಪದ ನೀಡಿದ್ದು ವೈಸ್ ಚಾನ್ಸಲರ್ ಪದದ ಕನ್ನಡ ಅನುವಾದ. ಕುಲಪತಿ ಎಂಬುದು ಕರಡು ಸಿದ್ಧಪಡಿಸುತ್ತಿದ್ದವರ ಅನುವಾದವಾಗಿತ್ತು. ನನ್ನ ವಾದ ಚಾನ್ಸಲರ್ ಅಂದರೆ ಕುಲಪತಿ, ಅದು ರಾಜ್ಯಪಾಲರು.

ಉಪಕುಲಪತಿ ಎಂಬುದು ವೈಸ್ ಚಾನ್ಸಲರ್ ಪದದ ಸರಿಯಾದ ಅನುವಾದ. ಆದರೆ ಜಾತಿ, ವರ್ಗ ವ್ಯವಸ್ಥೆಗಳಿಗೆ ಒಗ್ಗಿ ಹೋಗಿರುವ ನಮ್ಮ ಮನಸ್ಸುಗಳಿಗೆ ‘ಉಪ’ಕುಲಪತಿ ಎಂಬುದು ಸ್ವಲ್ಪ ಕೆಳಹಂತದ್ದು ಎಂದು ಭಾಸವಾಗಿರಬಹುದು. ಆದ್ದರಿಂದ ಚಾನ್ಸಲರ್ ಅನ್ನು ಕುಲಾಧಿಪತಿಗಳೆಂದೂ, ವೈಸ್ ಚಾನ್ಸಲರ್ ಅನ್ನು ಕುಲಪತಿಗಳೆಂದೂ ಸುಖಾಸುಮ್ಮನೆ ಉನ್ನತೀಕರಿಸಿ ನಮ್ಮ ಪೊಳ್ಳು ‘ಅಹಂ’ ಅನ್ನು ಪೋಷಣೆ ಮಾಡುತ್ತಿದ್ದೇವೆ.

ಪಿಎಚ್.ಡಿ. ಪಡೆದು ಪ್ರಾಧ್ಯಾಪಕರಾದವರನ್ನು ಡಾಕ್ಟರ್ ಎಂದು ಸಂಬೋಧಿಸಬೇಕೋ, ಪ್ರೊಫೆಸರ್ ಎಂದೋ ಎಂಬುದು ಯಾರಿಗೂ ತಿಳಿಯದ ಗೊಂದಲ. ಮುಂಬೈ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದಕ್ಕೆ ಹೋದಾಗ ಅವರು ಈ ಗೊಂದಲಕ್ಕೆ ಕಂಡುಕೊಂಡಿದ್ದ ಪರಿಹಾರ ಕೌತುಕದ್ದು. ವೇದಿಕೆಯಲ್ಲಿದ್ದವರನ್ನೆಲ್ಲ ನಿರೂಪಕರು ಸಂಬೋಧಿಸುತ್ತಿದ್ದುದು ‘ಡಾಕ್ಟರ್ ಪ್ರೊಫೆಸರ್ ಕಾಂಬಳೆ’ ಇತ್ಯಾದಿಯಾಗಿ. ಎರಡರಲ್ಲಿ ಒಂದನ್ನೇ ಹೇಳಿದರೆ ಇನ್ನೊಂದು ಸಾಧನೆ ಮರೆಮಾಚಿದಂತಾಗುತ್ತದೆ ಎಂಬುದು ಇದರ ಹಿಂದಿನ ಉದ್ದೇಶವಿರಬಹುದು.

ಇನ್ನು ಸಹ/ ಸಹಾಯಕ ಪ್ರಾಧ್ಯಾಪಕರುಗಳೆಲ್ಲ ತಮ್ಮನ್ನು ತಾವು ‘ಪ್ರೊಫೆಸರ್’ಗಳೆಂದೇ ಸಂಬೋಧಿಸಿಕೊಳ್ಳುವುದು ಮತ್ತೊಂದು ವಿಚಿತ್ರ. ಪದವಿಪೂರ್ವ ಮತ್ತು ಪದವಿ ಕಾಲೇಜಿನ ಬಹುತೇಕ ಬೋಧಕರು ತಮ್ಮನ್ನು ತಾವು ‘ಮೇಷ್ಟ್ರು’ ಎಂದು ಪರಿಚಯಿಸಿಕೊಳ್ಳಲು ಹಿಂದೇಟು ಹಾಕುವುದು ಮತ್ತು ಮುಜುಗರ ಪಟ್ಟುಕೊಳ್ಳುವುದು ಯಾಕೋ ತಿಳಿಯದು. ನಮಗೆ ನಿಜವಾದ ಮನ್ನಣೆ, ಗೌರವ ಸಿಗುವುದು ನಾವು ಮಾಡುವ ಕೆಲಸದಿಂದಲೇ ಹೊರತು ಈ ಬಗೆಯ ಪದವಿಗಳಿಂದಲ್ಲ ಎಂಬುದು ಅರಿವಾಗುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.