ADVERTISEMENT

ಬಿಜೆಪಿಗೆ ಅರ್ಹತೆಯಿಲ್ಲ!

ಕೆ.ಎನ್.ಭಗವಾನ್
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಗೌರಿ ಲಂಕೇಶ್ ಜನ್ಮದಿನದ ಕಾರ್ಯಕ್ರಮ ‘ಗೌರಿ ಅವರ ಕೊಡುಗೆ ಮತ್ತು ಅವರ ಕೊಲೆಗಾರರನ್ನು ಪತ್ತೆ ಹಚ್ಚುವುದರಲ್ಲಿ ವಿಳಂಬವೇಕೆ ಎಂದು ಚರ್ಚಿಸುವುದರ ಬದಲು, ಬಿಜೆಪಿಯನ್ನು ಖಂಡಿಸುವ ವೇದಿಕೆಯಾಗಿತ್ತು’ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಟೀಕಿಸಿದ್ದಾರೆ (ಪ್ರ.ವಾ., ಜ 31).

ಈ ವಿಚಾರದಲ್ಲಿ ಬಿಜೆಪಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಬೇಕಾಗಿದೆ: ಗೌರಿ ಕೊಲೆಯಾದಾಗ ಸಂಭ್ರಮಪಟ್ಟಿದ್ದು ಯಾರು? ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುವುದನ್ನು ಗೌರಿ ಅವರು ಖಂಡಿಸುತ್ತಿದ್ದಾಗ, ಅವರನ್ನು ಜರಿಯುತ್ತಿದ್ದವರು ಯಾರು? ಗೌರಿ ಮತ್ತು ‘ಗೌರಿ ಲಂಕೇಶ್‌ ಪತ್ರಿಕೆ’ಯನ್ನು ತಮ್ಮ ವಿರೋಧಿ ಎಂದು ಭಾವಿಸುತ್ತಿದ್ದವರಾರು? ಗೌರಿಯವರ ಕಗ್ಗೊಲೆ ವಿಶ್ವದೆಲ್ಲೆಡೆ ಸುದ್ದಿಯಾಗಿ, ಅದು ಪ್ರಜಾಸತ್ತಾತ್ಮಕ ವಾಕ್ ಸ್ವಾತಂತ್ರ್ಯದ ಕೊಲೆ ಎಂದು ಮಾರ್ದನಿಸಿದರೂ, ‘ಹೌದು ಇದು ಗೌರಿಯವರ ದೇಹಕ್ಕೆ ಬಿದ್ದ ಗುಂಡಲ್ಲ ಬದಲಾಗಿ ವಾಕ್ ಸ್ವಾತಂತ್ರ್ಯಕ್ಕೆ, ಪತ್ರಿಕಾಧರ್ಮಕ್ಕೆ ಬಿದ್ದ ಗುಂಡು’ ಎಂದು ಬಿಜೆಪಿಯ ಒಬ್ಬರಾದರೂ ಉಸಿರೆತ್ತಿದರೇ?

ಗೌರಿಯನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದವರಲ್ಲಿ ಯಾರೂ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಹೀಗಿದ್ದರೂ ಬಿಜೆಪಿಯವರು ಅವರ ಮಾತುಗಳನ್ನು ಖಂಡಿಸುವುದೇಕೆ? ಈಗಲೂ ಬಿಜೆಪಿಯ ಇಬ್ಬಗೆಯ ನೀತಿ, ಸ್ವಾತಂತ್ರ್ಯ ಹರಣದ ರೀತಿ, ಫ್ಯಾಸಿಸ್ಟ್ ನೀತಿಗಳನ್ನು ಖಂಡಿಸಿದರೆ, ಆರೋಪಗಳಿಗೆ ಉತ್ತರಿಸುವ ಬದಲು ಬಿಜೆಪಿ ನಾಯಕರು ಅಪ್ರಸ್ತುತ ವಿಷಯಗಳನ್ನು ಪ್ರಸ್ತಾಪಿಸುವುದೇಕೆ?

ADVERTISEMENT

ದೇಶದ ಇಂದಿನ ಸ್ಥಿತಿಗೆ ಕಾರಣವಾದ ಬಿಜೆಪಿಯನ್ನು ಖಂಡಿಸುವ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಬಿಜೆಪಿಗೆ ಅರ್ಹತೆ ಇದೆಯೇ? ‘ವಿರೋಧ ಮುಕ್ತ ಭಾರತ’ ನಿರ್ಮಿಸುವ ಬಿಜಿಪಿಯ ನಿಲುವು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ? ಈ ಬಿಜೆಪಿಯೇತರರು ಹೇಗೆ, ಯಾವುದರ ಬಗ್ಗೆ, ಏಕೆ ಮಾತನಾಡಬೇಕೆಂದು ನಿರ್ಣಯಿಸುವ ಹಕ್ಕನ್ನು ಬಿಜೆಪಿಗೆ ಕೊಟ್ಟವರಾರು?

ದೇಶದ ಸಾರ್ವಭೌಮತ್ವ, ಸಂವಿಧಾನದ ಸಂರಕ್ಷಣೆ ಹಾಗೂ ವಾಕ್ ಸ್ವಾತಂತ್ರ್ಯದ ಉಳಿವಿಗಾಗಿ ಧ್ವನಿ ಎತ್ತುತ್ತಿರುವ ದೊರೆಸ್ವಾಮಿ, ಪ್ರಕಾಶ್ ರೈ, ತೀಸ್ತಾ ಸೆಟಲ್ವಾಡ್ ಮುಂತಾದವರು ಸ್ತುತ್ಯರ್ಹರು. ಅವರನ್ನು ಖಂಡಿಸುವ ಅರ್ಹತೆ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.