ADVERTISEMENT

ಅನುದಾನಕ್ಕೆ ನಿಮ್‌ ಹೆಸರೇಳ್ತೀನಿ ಸಾರ್‌..!

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST

ವಿಜಯಪುರ: ‘ಕೆಬಿಜೆಎನ್‌ಎಲ್‌ನ ಆಲಮಟ್ಟಿಯ ಮುಖ್ಯ ಎಂಜಿನಿಯರ್‌ ಭೇಟಿಯಾಗಿ, ನೀವು ಹೇಳಿದ್ದೀರಿ ಎಂದು ಅನುದಾನ ಕೇಳುವೆ. ಬಿಡುಗಡೆ ಮಾಡುವಂತೆ ಸೂಚಿಸಿ ಸರ್‌. ನಿಮ್‌ ಹೆಸರಲ್ಲೇ ಈ ಕೆಲ್ಸಾ ಮಾಡ್ಕೋತ್ವೀನಿ...’

ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕೆಡಿಪಿ ಸಭೆ ನಡೆಸುವ ಸಂದರ್ಭ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಾಗ ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಮ್ಮ ಇಲಾಖೆ ಎದುರಿಸುತ್ತಿರುವ ಅನುದಾನದ ಕೊರತೆಯನ್ನು ನೀಗಿಸಿಕೊಳ್ಳಲು ಕಂಡುಕೊಂಡ ಮಾರ್ಗವಿದು.

ಎಂಜಿನಿಯರ್‌ ಬೇಡಿಕೆಯಿಂದ ತಬ್ಬಿಬ್ಬಾದ ಎಂ.ಬಿ.ಪಾಟೀಲ ‘ನಮ್ದೇನು ದಾನಶೂರ ಇಲಾಖೆಯೇನ್ರೀ’ ಎಂದು ಪ್ರಶ್ನಿಸುತ್ತಿದ್ದಂತೆ, ‘ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ವಿಭಾಗದ ಹಲ ಯೋಜನೆಗಳಿಗೆ ಅನುದಾನದ ಕೊರತೆಯಿದೆ. ಕೆಬಿಜೆಎನ್‌ಎಲ್‌ನಿಂದ ಅನುದಾನ ಕೊಡ್ಸಿ ಸರ್. ಸಮಸ್ಯೆಗೆ ಶಾಶ್ವತ ಇತಿಶ್ರೀ ಹಾಕ್ತೇವೆ.

ADVERTISEMENT

ಈಗಾಗಲೇ ವಿವಿಧ ಇಲಾಖೆಗಳಿಗೆ, ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ನೀಡ್ತಿದ್ದೀರಿ. ಅದರಂತೆ ನಮ್ಗೂ ಕೊಡಿ. ನೀರಿನ ಸಮಸ್ಯೆ ಪರಿಹರಿಸ್ಕೊಂತೀವಿ’ ಎಂದು ಪರಿಪರಿಯಾಗಿ ವಿನಂತಿಸಿದರೂ ಸಚಿವರು ಸ್ಪಂದಿಸಲಿಲ್ಲ.

ತಮ್ಮ ಪಟ್ಟು ಸಡಿಲಿಸದ ಎಂಜಿನಿಯರ್ ‘ನಿಮ್ಮ ಕ್ಷೇತ್ರದ ಕೆಲ ಕಾಮಗಾರಿಗಳು ಇದರಲ್ಲಿವೆ. ನೀವು ಅನುಮತಿ ನೀಡಿದ್ದೀರಿ ಎಂದು ಸಿಇ ಬಳಿ ಹೇಳಿ ಅನುಮೋದನೆ ಪಡೆಯುವೆ’ ಎನ್ನುತ್ತಿದ್ದಂತೆ ಸಚಿವರು ಆಗಲಿ. ನಮ್ದೇ ಮತಕ್ಷೇತ್ರ. ನಾವು ಕೊಡಿಸದೆ ಇನ್ಯಾರು ಕೊಡಿಸ್ತಾರೆ ಎಂದು ಅನುಮತಿಯ ಮುದ್ರೆಯೊತ್ತುತ್ತಿದ್ದಂತೆ, ಹೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ನಮ್ಗೂ ಅನುದಾನ ಕೊಡ್ಸಿ. ₹ 8.5 ಕೋಟಿ ಬಾಕಿಯಿದೆ ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ನಗೆಗಡಲು ಉಕ್ಕಿತು.
–ಡಿ.ಬಿ.ನಾಗರಾಜ

**

ಸಿ.ಎಂ. ಕಿವಿಯಲ್ಲಿ ಗುಟ್ಟು ಹೇಳಿದ ಪುಟ್ಟರಾಜು!
ಮಂಡ್ಯ: ನಗರದಲ್ಲಿ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮೃತ್‌ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಸಿ.ಎಸ್‌.ಪುಟ್ಟರಾಜು ಯೋಜನೆಯ ಬಗ್ಗೆ ಮಾತನಾಡುತ್ತಿದ್ದರು. ಸಂಸದರ ಮಾತಿನ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಪುಟ್ಟರಾಜ, ಮಂಡ್ಯ ಜಿಲ್ಲೆಗೆ ರಾಜ್ಯ ಸರ್ಕಾರ ಏನೇನು ಕೊಟ್ಟಿದೆ ಎಲ್ಲವನ್ನೂ ಹೇಳಪ್ಪ. ಎಲ್ಲರಿಗೂ ತಿಳಿಯಲಿ’ ಎಂದು ಕಾಲೆಳೆದರು. ಅದಕ್ಕೆ ಸಂಸದರು ‘ಮುಂದೇನಾಗಬೇಕು ಎಂಬುದನ್ನು ನಿಮ್ಮ ಕಿವಿಯಲ್ಲಿ ಗುಟ್ಟು ಹೇಳುತ್ತೇನೆ’ ಎಂದು ಮಾತು ಮುಗಿಸಿದರು.

ಆನಂತರ ಮಾತನಾಡಲು ಬಂದ ಪಶು ಸಂಗೋಪನ ಸಚಿವ ಎ.ಮಂಜು, ‘ಸಂಸದ ಪುಟ್ಟರಾಜು ಅವರು ಎಲ್ಲವನ್ನೂ ಮುಖ್ಯಮಂತ್ರಿಗಳ ಕವಿಯಲ್ಲಿ ಹೇಳಿದ್ದಾರೆ. ಮುಂದೆಯೂ ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ಆನಂತರ ಮಾತಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪುಟ್ಟರಾಜ ನೋಡಲು ಒರಟಾಗಿ ಕಾಣುತ್ತಾನೆ. ಆದರೆ ಅವನ ಮನಸ್ಸು ಮಾತ್ರ ಮೃದು. ಮುಂದೆ ನೀವೆ ಮುಖ್ಯಮಂತ್ರಿಯಾಗುತ್ತೀರಿ ಎಂದು ನನ್ನ ಕಿವಿಯಲ್ಲಿ ಹೇಳಿದ್ದಾನೆ. ಬಹಿರಂಗವಾಗಿ ಹೇಳಲು ಧೈರ್ಯ ಸಾಕಾಗುತ್ತಿಲ್ಲ. ಅದಕ್ಕೆ ಕಿವಿಯಲ್ಲಿ ಹೇಳಿದ್ದಾನೆ’ ಎಂದಾಗ ಎಲ್ಲರೂ ಗೊಳ್‌ ಎಂದರು.
–ಎಂ.ಎನ್‌.ಯೋಗೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.