ADVERTISEMENT

ಕಹಿ ಅನುಭವದ ‘ಕಿವಿ ಮಾತು’..!

ಡಿ.ಬಿ, ನಾಗರಾಜ
Published 26 ಆಗಸ್ಟ್ 2017, 19:30 IST
Last Updated 26 ಆಗಸ್ಟ್ 2017, 19:30 IST

ವಿಜಯಪುರ: ‘ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದು ಒಳ್ಳೆಯದಲ್ಲ. ಮುಖಂಡರು, ಬೆಂಬಲಿಗರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಈ ಹಿಂದೆ ಹಾಸನ, ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಜೀವನದಲ್ಲಿ ಮರೆಯಲಾಗದ ಕಹಿ ಅನುಭವಿಸಿದ್ದೇನೆ...’

ನಗರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಮನಗರ ಕ್ಷೇತ್ರದ ಜತೆಗೆ ಉತ್ತರ ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದಲೂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರಂತಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುವ ಜತೆಯಲ್ಲೇ ಉತ್ತರಿಸಿದ ಪರಿಯಿದು.

‘ನಾನು ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆ ಚುನಾವಣೆಯಲ್ಲಿ ಕನಕಪುರದ ಜನತೆ ದೇವೇಗೌಡರು ಇಲ್ಲಿಂದ ಗೆದ್ದರೂ, ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿಯೇ ಮುಂದುವರೆಯುತ್ತಾರೆ. ಇಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ ಎಂದು ‘ಕೈ’ ಹಿಡಿದರು.

ADVERTISEMENT

ಹಾಸನದಲ್ಲಿ ಜಿ.ಪುಟ್ಟಸ್ವಾಮಿಗೌಡರ ಮಗಳು, ತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ಈ ಚುನಾವಣೆಯಲ್ಲಿ ನಮ್ಮಪ್ಪ ಸೋತರೆ ಅವರನ್ನು ಕಳೆದುಕೊಂಡು ಅನಾಥಳಾಗುತ್ತೇನೆ. ಹೇಗಿದ್ದರೂ ಗೌಡ್ರು ಕನಕಪುರದಲ್ಲಿ ಗೆಲ್ತಾರೆ. ನೀವು ನಮ್ಮಪ್ಪನ್ನ ಗೆಲ್ಸಿ ಎಂದು ಹೇಳ್ಕೊಂಡು ಊರೂರು ಸುತ್ತಿದ್ರು. ಇದರ ಪರಿಣಾಮ ಎರಡೂ ಕ್ಷೇತ್ರಗಳು ‘ಕೈ’ ವಶವಾಗಿ ನಾನು ಎರಡೂ ಕಡೆ ಸೋತು ಸಂಸತ್‌ ಬದಲು ಮನೆ ಸೇರಬೇಕಾಯ್ತು.

ಈ ಕಹಿ ಅನುಭವದ ಮೇಲೆ ಕುಮಾರಸ್ವಾಮಿಗೆ, ‘ಯಾವ ಕಾರಣಕ್ಕೂ ಎರಡು ಕ್ಷೇತ್ರದಿಂದ ಸ್ಪರ್ಧಿಸಬೇಡ. ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲೂ ಬೇಡ ಎಂದು ಕಿವಿಮಾತು ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.