ADVERTISEMENT

ಗಾಂಧಿ ಟೋಪಿಗೆ ತಿಲಾಂಜಲಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST

ವಿಜಯಪುರ: ಕೇಂದ್ರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ರಾಜ್ಯ ಸಚಿವ ರಮೇಶ ಜಿಗಜಿಣಗಿ ನಾಲ್ಕೈದು ದಶಕಗಳಿಂದ ನಿತ್ಯವೂ ಧರಿಸುತ್ತಿದ್ದ ಗಾಂಧಿ ಟೋಪಿಗೆ ಇದೀಗ ತಿಲಾಂಜಲಿ ಇಟ್ಟಿದ್ದಾರೆ...!

ರಾಜಕೀಯ ಜೀವನದ ಆರಂಭದಿಂದಲೂ, ಶಾಸಕ, ಸಚಿವ, ಸಂಸದರಾದ ಬಳಿಕವೂ ಜಿಗಜಿಣಗಿ ಗಾಂಧಿ ಟೋಪಿ ಧರಿಸಿಯೇ ಎಲ್ಲೆಡೆ ಪಾಲ್ಗೊಳ್ಳುತ್ತಿದ್ದರು. ಆದರೆ ಕಳೆದ ಜುಲೈನಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಅದನ್ನು ಧರಿಸುವುದನ್ನೇ ಬಿಟ್ಟಿದ್ದಾರೆ.

ನಗರದಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರನ್ನು ಪತ್ರಕರ್ತರೊಬ್ಬರು ಟೋಪಿ ಧರಿಸದಿರುವುದಕ್ಕೆ ಕಾರಣ ಕೇಳುತ್ತಿದ್ದಂತೆ, ತಮ್ಮ ಎಂದಿನ ಶೈಲಿಯಲ್ಲಿ ಕೈಮುಗಿದು ಮುಗುಳ್ನಕ್ಕು ಮೌನಕ್ಕೆ ಶರಣಾದರು.

ADVERTISEMENT

‘ಗಾಂಧಿ ಟೋಪಿ ಧರಿಸದಂತೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೇನಾದರೂ ಸೂಚನೆ ನೀಡಿದ್ದಾರಾ’ ಎಂದು ಮರು ಪ್ರಶ್ನಿಸುತ್ತಿದ್ದಂತೆ, ಮತ್ತೆ ಮುಗುಳ್ನಕ್ಕು ‘ಕೊಂಚ ಬದಲಾವಣೆ ಮಾಡಿಕೊಂಡಿದ್ದೇನೆ’ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.

ಆಗ ಪತ್ರಕರ್ತರ ವಲಯ, ‘ಸಚಿವರಾದ ಮೇಲೆ ಯಾರಿಗೆ ನಿಮ್ಮ ಟೋಪಿ ಹಾಕಿದಿರಿ? ಜನ ನಿಮ್ಮಿಂದ ಚೇಂಜ್‌ ಕೇಳಿದರಾ?’ ಎಂದು ಕಾಲೆಳೆಯಲು ಆರಂಭಿಸುತ್ತಿದ್ದಂತೆ   ‘ಯಪ್ಪಾ ಮುಂದಿನ ಪ್ರೆಸ್‌ಮೀಟ್‌ನಲ್ಲಿ ಎಲ್ರೂ ಮತ್ತೆ ಭೇಟಿಯಾಗೋಣ. ನನಗೊಂದಿಷ್ಟು ತುರ್ತಿದೆ’ ಎಂದು ಜಿಗಜಿಣಗಿ ಸುದ್ದಿಗೋಷ್ಠಿಯಿಂದ ಕಾಲ್ಕಿತ್ತರು. 

ಅಬಾರ್ಷನ್ ಆದ್ರೆ ದುಡ್ಡು ವಾಪಸ್ಸಾ?

ತುಮಕೂರು: ‘ಪ್ರಧಾನಿ ನರೇಂದ್ರ ಮೋದಿ ಗರ್ಭಿಣಿಯರಿಗೆ ಆರು ಸಾವಿರ ರೂಪಾಯಿ ಧನಸಹಾಯ ಪ್ರಕಟಿಸಿದ್ದಾರೆ. ಗರ್ಭ ಧರಿಸಿದ ಆರಂಭದಲ್ಲಿಯೇ ಹಣ ನೀಡುತ್ತಾರೆ. ಒಂದು ವೇಳೆ ಐದು ತಿಂಗಳಿಗೆ ಅಬಾರ್ಷನ್ ಆದರೆ ಆ ದುಡ್ಡು ವಾಪಸ್‌ ಕೊಡಬೇಕಾ?’

ಹೀಗೆ ಪತ್ರಕರ್ತರನ್ನೇ ಕೇಳಿದ್ದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ. ತಾವು ನಡೆಸಿದ ಹೊಸ ವರ್ಷದ ಮೊದಲ ಸುದ್ದಿಗೋಷ್ಠಿಯನ್ನು ಅವರು ಕೇಂದ್ರ ಸರ್ಕಾರದ ವಿರುದ್ಧ ಕತ್ತಿ ಝಳಪಿಸಲು ಮೀಸಲಿಟ್ಟರು.

‘ಚಿಕ್ಕಬಳ್ಳಾಪುರ ಪ್ರವಾಸದಲ್ಲಿದ್ದೆ. ಮೋದಿ ಭಾಷಣ (ಡಿ. 31) ಕೇಳಲು  ತರಾತುರಿಯಲ್ಲಿ ಬಂದೆ. ಆದರೆ ಅದರಲ್ಲಿ ಜನ ನಿರೀಕ್ಷಿಸಿದ್ದು ಏನೂ ಇರಲಿಲ್ಲ. ಬರೀ ಒಣ ಭಾಷಣ. ಇವರು ಫಾರಿನ್ನಿಗೆ ಹೋದರೂ ಅದೇ ಭಾಷಣ ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಈ ವೇಳೆ ಪತ್ರಕರ್ತರು ‘ಜಯಚಂದ್ರ ಮನೆಯಲ್ಲಿ ಸಿಕ್ಕಿದ್ದು ಯಾರ ದುಡ್ಡು’ ಎಂದು ಒತ್ತಿ ಒತ್ತಿ ಕೇಳಿದರು. ‘ಏ ಸುಮ್ಮನಿರಪ್ಪ. ಪದೇ ಪದೇ ಜಯಚಂದ್ರ, ಜಯಚಂದ್ರ ಅನ್ನಬೇಡಿ. ಚೀಫ್‌ ಇಂಜಿನಿಯರ್ ಜಯಚಂದ್ರ ಅಂತ ಹೇಳಿ’ ಎಂದು ಗಂಭೀರ ಮುಖಭಾವ ತೋರಿದರು. 

ಶ್ರದ್ಧಾಂಜಲಿ ಸಭೆ ಅರ್ಥಾತ್...

ಮೈಸೂರು: ಅದು ಸಹಕಾರ ಸಚಿವರಾಗಿದ್ದ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಾಗಿತ್ತು. ಶುರುವಾಗುವ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಜನತಾ ದರ್ಶನ ನಡೆಸಿದರು. ಜತೆಗೆ, ಸೆಲ್ಫಿ ಕೇಳಿದವರೊಂದಿಗೆ ಮುಗುಳ್ನಗುತ್ತ ನಿಂತು ಪೋಸು ಕೊಟ್ಟರು. ಆಮೇಲೆ ವೇದಿಕೆ ಮೇಲೆ ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಏಳಲಾಗದೆ ಒದ್ದಾಡುತ್ತಿದ್ದಾಗ ಸಚಿವರು ಕೈ ನೀಡಿ ಮೇಲೆಬ್ಬಿಸಲು ಯತ್ನಿಸಿದರು. ಅವರು ಏಳದೆ ಸಚಿವರೇ ಮುಗ್ಗರಿಸಿದಾಗ ನೆರೆದಿದ್ದವರು ಮುಗುಳ್ನಕ್ಕರು. ‘ಎಬ್ಬಿಸಲಾಗದು’ ಎಂದು ಸಚಿವರು ನಕ್ಕು ಕೈಬಿಟ್ಟರು.

ಇಷ್ಟಕ್ಕೂ ಶ್ರದ್ಧಾಂಜಲಿ ಸಭೆ ನಡೆದಿದ್ದು ಇಲ್ಲಿನ ಪುರಭವನದ ನಾಟಕದ ಸೀನರಿಗಳ ನಡುವೆ. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಅವರ ಸ್ಮರಣಾರ್ಥ ‘ಗ್ರಾಮೀಣ ನಾಟಕೋತ್ಸವ’ ಆಯೋಜಿಸಲಾಗಿತ್ತು. ಈ ಪ್ರಯುಕ್ತ ಜಯಪುರ ಹೋಬಳಿಯ ಕಡಕೋಳದ ಸೋಮೇಶ್ವರ ಹಾಗೂ ಕಾಳಿಬೀರೇಶ್ವರ ನಾಟಕ ಮಂಡಳಿಯ ಕಲಾವಿದರು ‘ಭಕ್ತ ಪ್ರಹ್ಲಾದ’ ಪೌರಾಣಿಕ ನಾಟಕ ಆಡಬೇಕಿತ್ತು. ಇದಕ್ಕೂ ಮೊದಲು ಉದ್ಘಾಟನಾ ಸಮಾರಂಭ ನಡೆಯಬೇಕಿತ್ತು. ಎಲ್ಲಕ್ಕೂ ತಾತ್ಕಾಲಿಕವಾಗಿ ಬ್ರೇಕ್‌ ಬಿತ್ತು.

ವೇದಿಕೆ ಮೇಲೆ ಶ್ರದ್ಧಾಂಜಲಿ ಸಭೆ ನಡೆಯುತ್ತಿದ್ದರೆ, ಅತ್ತ ಕಲಾವಿದರು ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಅವರಲ್ಲಿ ಕೆಲವರು, ‘ನಾವು ಬಣ್ಣ ಹಚ್ಚಿಕೊಂಡು ನಾಟಕ ಮಾಡ್ತೀವಿ. ಇವ್ರು (ರಾಜಕಾರಣಿಗಳು) ಬಣ್ಣ ಹಚ್ಚಿಕೊಳ್ಳದೆ ನಾಟಕ ಮಾಡ್ತಾರೆ’ ಎಂದು ನಗಾಡಿಕೊಂಡರು. 

ಇದೇನು ಟ್ರೈನಿಂಗ್‌ ಸೆಂಟ್ರಾ...?

ಯಾದಗಿರಿ: ನಾನಾ ಕಾರಣಗಳಿಂದ ಮುಂದೂಡುತ್ತಲೇ ಇದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಇತ್ತೀಚೆಗೆ ಒಂದು ದಿನ ಕಾಯಂ ಆಗಿ ನಿಗದಿಯಾಯಿತು. ಅನುಪಾಲನಾ ವರದಿಯೊಂದಿಗೆ ಶುರುವಾದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯೂ ಆರಂಭಗೊಂಡಿತು. ಇಲಾಖೆಯ ವರದಿ ಒಪ್ಪಿಸಬೇಕಿದ್ದ ಕೆಲ ಅಧಿಕಾರಿಗಳು ಬರಿಗೈಯಲ್ಲಿ ಬಂದಿದ್ದರು. ಕಾರ್ಯಭಾರ ಒತ್ತಡದ ನೆಪ ಹೇಳುವ ಕಾರ್ಯ  ಸುಪ್ರಭಾತದಂತೆ ಶುರುವಾಯಿತು. ಪ್ರತಿಬಾರಿ ಇದನ್ನು ಕೇಳಿ ನೋಡಿ, ಸಾಕುಬೇಕೆನಿಸಿದ್ದ ಅಧ್ಯಕ್ಷರು ಗರಂ ಆಗಿ, ‘ಇಲಾಖೆಯ ಪ್ರಗತಿ ವರದಿ ಇಲ್ಲದ್‌ ಮ್ಯಾಲೆ ಇಲ್ಯಾಕ್‌ ಬಂದೀರಿ. ಸರ್ಕಾರ ಜಿಲ್ಲೆಗೆ ಸರಿಯಾಗಿ ಸಿಬ್ಬಂದಿ ಕೊಡವಲ್ದು. ನೀವು ನೆಪ ಹೇಳೋದು ನಿಲ್ಲವಲ್ದು. ಎಸ್‌.ಪಿ, ಡಿ.ಸಿ, ಸಿ.ಎಸ್‌ ಎಲ್ಲಾರೂ ಆಡೋ ಮಕ್ಕಳ ಥರಾ ಇದ್ದಾರೆ. ಇಡೀ ಜಿಲ್ಲ್ಯಾಗ ಅಭಿವೃದ್ಧಿ ಕಾಣವಲ್ದು. ಇವರೆಲ್ಲಾ ಇಲ್ಲೇನು ಟ್ರೈನಿಂಗ್‌ ತಗೋಂಡ್‌ ಹೋಗಾಕ ಬಂದಾರೇನ್‌ ಮತ್ತ. ಯಾದಗಿರಿ ಏನ್‌ ಟ್ರೈನಿಂಗ್‌ ಸೆಂಟ್ರಾ?’ ಎಂದು ಗದರುತ್ತಾ ಉದ್ದನೆಯ ನಿಟ್ಟುಸಿರು ಬಿಟ್ಟರು.

ಅಧ್ಯಕ್ಷರ ಕೋಪಕ್ಕೆ ಕಾರಣ ನಾವಲ್ಲ ಎಂಬಂತೆ ಸಿಬ್ಬಂದಿ ಒಳಗೊಳಗೇ ನಕ್ಕಿದ್ದನ್ನು ಅವರು ಗಮನಿಸಲೇ ಇಲ್ಲ. ಆದರೆ, ‘ಅಜೆಂಡಾ ಇಲ್ದಂಗ್‌ ಹೇಂಗ್ ಸಭೆ ನಡಿಸ್ತೀರಿ’ ಎಂದು ಪಂಚಾಯಿತಿ ಸದಸ್ಯರು ತಮ್ಮನ್ನೇ ತರಾಟೆಗೆ ತೆಗೆದುಕೊಂಡಾಗ ಮಾತ್ರ ಅಧ್ಯಕ್ಷರು ಒಳಗೇ ಮುಜುಗರ ಅನುಭವಿಸುವಂತಾಯಿತು ಆದರೂ ಸಭೆ ಮಾತ್ರ ಸಾಂಗವಾಗಿ ನಡೆಯಿತು. 

- ಡಿ.ಬಿ.ನಾಗರಾಜ, ಡಿ.ಎಂ.ಕುರ್ಕೆ ಪ್ರಶಾಂತ, ಗಣೇಶ ಅಮೀನಗಡ, ಮಲ್ಲೇಶ್ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.