ADVERTISEMENT

ನಮ್ಗೂ ಎರಡೆರಡು ಹೊಣೆ ಇವೆ!

ಮಲ್ಲೇಶ್ ನಾಯಕನಹಟ್ಟಿ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಯಾದಗಿರಿ: ಬೆಂಗಳೂರಿನಿಂದ ಹೈದರಾಬಾದಿಗೆ ಹೆಲಿಕಾಪ್ಟರ್‌ ಮೂಲಕ ಬಂದಿಳಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲೆಗೆ ತಲುಪಿದಾಗ ಇಳಿಸಂಜೆಯಾಗಿತ್ತು. ಇಡೀ ದಿನ ರಣಬಿಸಿಲಿನ ಝಳ, ಧಗೆಯಲ್ಲಿ ಕಾದಿದ್ದ ಕಿರಿಯ ಅಧಿಕಾರಿಗಳು ಕೊನೆಗೂ ಎ.ಸಿ ಕೋಣೆಯಲ್ಲಿ ಸುಖಾಸೀನರಾಗಿ ನಿಟ್ಟುಸಿರು ಬಿಟ್ಟರು.
 
‘ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿಲ್ಲ. ಸರ್ಕಾರ ಕೊಟ್ಟ ಅನುದಾನ ಬಳಕೆಯಾಗಿಲ್ಲ. ನೀವೆಲ್ಲಾ ಏನ್‌ ಮಾಡ್ತಾ ಇದೀರಿ’ ಎಂದು ಉಸ್ತುವಾರಿ ಕಾರ್ಯದರ್ಶಿ ಅಧಿಕಾರಿಗಳಿಗೆ ಚಾಟಿ ಬೀಸಿದರು.
 
ಹನಿ ನೀರೂ ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸರ್ಕಾರ ಕೊಟ್ಟಿರುವ ₹18 ಲಕ್ಷದಲ್ಲಿ ಬಿಡಿಗಾಸೂ ಬಳಕೆಯಾಗದಿರುವುದನ್ನು ಕಂಡು ಅವರು ಕೆಂಡಾಮಂಡಲವಾದರು. 
 
‘ಅಲ್ರಿ, ಜನಕ್ಕೆ ಕುಡಿಯುವ ನೀರು ಕೊಡದೆ ನೀವು ಮತ್ತೇನ್‌ ಕೊಡ್ಬೇಕು ಅನ್ಕಂಡಿದ್ದೀರಿ?  ಹೀಗೆ ಕೆಲಸ ಮಾಡಿದರೆ ಸರ್ಕಾರಕ್ಕೆ ನಾ ಏನ್‌ ಉತ್ತರ ಕೊಡಬೇಕು. ಛೆ!ಛೆ! ಇದು ಸರಿಯಲ್ಲ ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸಿದರು. 
 
ಪಕ್ಕದಲ್ಲೇ ಕುಳಿತಿದ್ದ, ಪ್ರಭಾರ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ, ‘ನಾನು ಎರಡೆರಡು ಹೊಣೆ ನಿಭಾಯಿಸಬೇಕು. ಹಾಗಾಗಿ, ವಿಳಂಬ ಆಗಿದೆ’ ಎಂದು ಸಮಜಾಯಿಷಿ ನೀಡಿದರು. ಅಧಿಕಾರಿ ತಣ್ಣಗೆ ಮಜ್ಜಿಗೆ ಕುಡಿದು ಮೇಲೆದ್ದರು. ಹಲವು ವರ್ಷಗಳಿಂದ ಎರಡೆರಡು ಇಲಾಖೆಗಳ ಹೊಣೆ ಹೊತ್ತಿರುವ ಕಿರಿಯ ಅಧಿಕಾರಿಗಳು ಗುಸುಗುಸು ನಕ್ಕಿದ್ದು ಸಿಇಒಗೆ ಕೇಳಿಸದೇ ಇರಲಿಲ್ಲ! 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.