ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಕಸಕ್ಕಾಗಿ ಹುಡುಕಾಟ!
ಬೆಂಗಳೂರು: ಸಿಟಿ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ‘ಸ್ವಚ್ಛ ಭಾರತ’ ಅಭಿಯಾನ ಕುರಿತು ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಿದರು.

ಬಳಿಕ ಕಸ ಗುಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಚಿವ ದಿನೇಶ್‌ ಗುಂಡೂರಾವ್‌, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ್‌ ಕುಮಾರ್‌ ಅಗರವಾಲ್‌ ಸೇರಿದಂತೆ ಇತರ ಅತಿಥಿಗಳು ಮುಖಗವಸು, ಕೈಗವಸು ಹಾಗೂ ಪೊರಕೆ ಹಿಡಿದು ಸಿದ್ಧರಾದರು. ‘ಎಲ್ಲಿಂದ ಶುರು ಮಾಡುವುದು’ ಎಂದು ಸಚಿವರು ಕೇಳಿದರು. ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ‘ಸರ್‌ ಇಲ್ಲಿಂದಲೇ ಶುರು ಮಾಡೋಣ’ ಎಂದು ಹೇಳಿದರು.  ‘ಇಲ್ಲಿಂದ ಹೇಗೆ ಶುರು ಮಾಡೋದು, ಇಲ್ಲಿ ಕಸವೇ ಇಲ್ವಲ್ರಿ’ ಎಂದರು. 

ಮತ್ತೊಬ್ಬ ಅಧಿಕಾರಿ ಮಧ್ಯ ಪ್ರವೇಶಿಸಿ, ‘ಬೆಳಿಗ್ಗೆ ಸಿಬ್ಬಂದಿ ಕಸ ಗುಡಿಸಿದ್ದಾರೆ. ಹಾಗಾಗಿ ಎಲ್ಲೆಡೆ ಸ್ವಚ್ಛವಾಗಿದೆ. ಏನು ಮಾಡೋದು’ ಎಂದರು. ಇದಕ್ಕೆ ಸಚಿವರು ‘ಎಲ್ಲಾದ್ರೂ ಕಸ ಇದೆ ಏನು ನೋಡ್ರಿ’ ಎಂದರು. ಯಾರಿಂದಲೂ ಉತ್ತರ ಬರಲಿಲ್ಲ. ಈ ಮಧ್ಯೆ ಪತ್ರಕರ್ತರೊಬ್ಬರು ಬಾಯಿ ಹಾಕಿ, ‘ಸರ್‌ ಹಳಿಗಳ ಮೇಲೆ ಸಾಕಷ್ಟು ಕಸ ಬಿದ್ದಿರುತ್ತದೆ. ಅಲ್ಲಿ ಆರಂಭಿಸಬಹುದು’ ಎಂದು ಬಿಟ್ಟಿ ಸಲಹೆ ನೀಡಿದರು. ‘ಯಾಕ್ರಿ ತಮಾಷೆ ಮಾಡುತ್ತೀರಿ’ ಎಂದು ಸಚಿವರು ಮುಗುಳ್ನಕ್ಕರು.

ಇಷ್ಟರಲ್ಲೆ ಅಧಿಕಾರಿಯೊಬ್ಬರು, ‘ಸರ್‌ ಇಲ್ಲಿ ನಿಂತಿರುವ ಕಾರಿನ ಕೆಳಗಡೆ ಸಾಕಷ್ಟು ತ್ಯಾಜ್ಯ ಬಿದ್ದಿದೆ. ಕಾರು ಸರಿಸಿ ಶುರು ಮಾಡಿದರಾಯ್ತು’ ಎಂದು ಹೇಳಿದರು. ಇದಕ್ಕೆ ಸಚಿವರೂ ಸಮ್ಮತಿಸಿದರು. ನಂತರ ಆ ಕಾರಿನ ಚಾಲಕನಿಗಾಗಿ ಕೆಲಹೊತ್ತು ಹುಡುಕಾಟ ನಡೆಯಿತು. ಆತ ಸಿಗದಿದ್ದಾಗ, ಅಲ್ಲಿ ಸೇರಿದ ಜನರ ಪೈಕಿ ಕೆಲವರು ಕಾರನ್ನು ಸ್ವಲ್ಪ ದೂರ ತಳ್ಳಿದರು. ನಂತರ ಸಚಿವರು ಸೇರಿದಂತೆ ಇತರರು ಕಸ ಗುಡಿಸಿದರು. ಎಂದಿನಂತೆ ಮಾಧ್ಯಮದವರು ಛಾಯಾಚಿತ್ರ ತೆಗೆದುಕೊಂಡು ನಿರ್ಗಮಿಸಿದರು.

‘ಹೀಗೆ ಮಾಡಿದರೆ ಭಾರತ ಸ್ವಚ್ಛವಾದಂತೆ’ ಎಂದು ಅಲ್ಲಿದ್ದವರ ಪೈಕಿ ಕೆಲವರು ಗೊಣಗಿಕೊಂಡು ಹೋದರು.
- ಶಶಿಕಾಂತ ಎಸ್‌. ಶೆಂಬೆಳ್ಳಿ, ಪ್ರಕಾಶ ಕುಗ್ವೆ, ಗಣೇಶ ಚಂದನಶಿವ

ರೇಣುಕಾಚಾರ್ಯರ ‘ಪ್ರಬುದ್ಧತೆ’
ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ‘ಪ್ರಬುದ್ಧತೆ’ ಬಂದಿದೆ ಅಂತೆ. ‘ಒಮ್ಮೆ ಶಾಸಕ; ಒಮ್ಮೆ ಸಚಿವನಾಗಿದ್ದರಿಂದ ಅನುಭವಗಳು ನನಗೆ ಪಾಠ ಕಲಿಸಿವೆ; ನನಗೂ ಪ್ರಬುದ್ಧತೆ ಬಂದಿದೆ’ ಎಂದು ಹೇಳಿ ಸುದ್ದಿಗೋಷ್ಠಿಯ ಪ್ರಶ್ನೆಗಳನ್ನು ಎದುರಿಸಲಾಗದೆ ಅವರು ತಪ್ಪಿಸಿಕೊಂಡರು.

‘ಮೊದಲಿನಂತೆ ಬೇಕಾಬಿಟ್ಟಿ ಮಾತಾಡಲ್ಲ; ನಡೆದುಕೊಳ್ಳಲ್ಲ. ಯಾರ ಜತೆ ಎಷ್ಟು ಮಾತನಾಡಬೇಕು?, ಮೀಡಿಯಾದ ಮುಂದೆ ಹೇಗೆ ಮಾತಾಡಬೇಕು ಎಂಬುದೆಲ್ಲ ತಿಳಿದಿದೆ’ ಎಂದು ರೇಣುಕಾಚಾರ್ಯ ಹೇಳುತ್ತಾ ಹೋದರು. ‘ನಿಮ್ಮ ಮೇಲಿನ ಲೋಕಾಯುಕ್ತ ಪ್ರಕರಣ ಏನಾಯಿತು?’ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಇದಕ್ಕೆ ಉತ್ತರ ನೀಡಲ್ಲ; ಸಾರಿ ಬ್ರದರ್‌’ ಎಂದು ಚುಟುಕಾಗಿ ಹೇಳಿದರು.

‘ಕ್ಷೇತ್ರದ ಶಾಸಕರ ವಿರುದ್ಧ ನಿಮ್ಮ ಧ್ವನಿ ಈಚೆಗೆ ಕ್ಷೀಣವಾಗಿದೆ ಅಲ್ಲವೇ’ ಎಂಬ ಮತ್ತೊಂದು ಪ್ರಶ್ನೆಗೆ, ‘ನಮ್ಮಿಬ್ಬರ ಮಧ್ಯೆ ಯಾವುದೇ ಮ್ಯಾಚ್‌ಫಿಕ್ಸಿಂಗ್‌ ಇಲ್ಲ; ಅಭಿವೃದ್ಧಿ ದೃಷ್ಟಿಯಿಂದ ಆತ್ಮೀಯವಾಗಿದ್ದೇವೆ. ತಪ್ಪು ಕಂಡು ಬಂದರೆ ಹೋರಾಟ ಇದ್ದಿದ್ದೇ; ಇದರಾಚೆ ಏನೂ ಕೇಳಬೇಡಿ’ ಎಂದು ಕೈ ಮುಗಿದು ಸುದ್ದಿಗೋಷ್ಠಿಯಿಂದ ಎದ್ದು ಹೊರಟರು.
- ಪ್ರಕಾಶ ಕುಗ್ವೆ

‘ಶಿಕ್ಷೆ’ಯ ಚರ್ಚೆಯಲ್ಲಿ ‘ಆಣಿಮುತ್ತು’
ಕಲಬುರ್ಗಿ: ‘ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸದನ ಉಪಸಮಿತಿ’ ಇತ್ತೀಚೆಗೆ ಸಭೆ ನಡೆಸಿತು. ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಏಕೆ ಆಗುತ್ತಿಲ್ಲ ಎಂಬ ವಿಷಯದ ಕುರಿತು ಅಲ್ಲಿ ಚರ್ಚೆ ನಡೆಯಿತು.

ADVERTISEMENT

‘ಸರ್ಕಾರಿ ವಕೀಲ್ರು ಸರಿಯಾಗಿ ವಾದ ಮಂಡಿಸಾಂಗಿಲ್ಲೊ? ಕೇಸ್‌ ಸೋತ್ರ ನಮ್ಮಪ್ಪನ ಗಂಟೇನ ಹೊಕ್ಕೈತಿ ಅಂತ ಎದುರಿನ್‌ ಪಾರ್ಟಿ ಕಡೆಂದ ಹಣ ತಗೊಂಡ್‌ ಸುಮ್ನಾಗ್ತಾರೊ? ಏನ್‌ ನೀವು ಕೊಟ್ಟ ಸಾಕ್ಷಿಗಳ ಹಂಗಿರ್ತಾವೊ’ ಎಂದು ಉಪ ಸಮಿತಿಯ ಅಧ್ಯಕ್ಷ ಕೆ.ಬಿ.ಶಾಣಪ್ಪ ತಮ್ಮ ಎಂದಿನ ಶೈಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಪ್ರಶ್ನಿಸಿದರು.

ಸಭೆಯಲ್ಲಿದ್ದ ಕೆಲವರು ಪೊಲೀಸರತ್ತ, ಇನ್ನು ಕೆಲವರು ಇನ್ನಾರತ್ತಲೊ ಬೆರಳು ಮಾಡಿದರು. ಬಹುಹೊತ್ತು ಚರ್ಚೆ ನಡೆಯಿತೇ ವಿನಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಬಹುಪಾಲು ಆರೋಪಿಗಳು ಖುಲಾಸೆಯಾಗಲು ಯಾರು ಕಾರಣ ಎಂಬ ಪ್ರಶ್ನೆಗೆ ಉತ್ತರವಂತೂ ದೊರೆಯಲಿಲ್ಲ. ಇನ್ನು ಮಹಿಳಾ ಅಧಿಕಾರಿಯೊಬ್ಬರು, ‘ಬೆಂಗಳೂರಿಗೆ ಹೋದಾಗ ನಮಗೆ ಉಳಿದುಕೊಳ್ಳಲು ಮಹಿಳಾ ಭವನ ಬೇಕು’ ಎಂದು ಬೇಡಿಕೆ ಮುಂದಿಟ್ಟರು.

ವೇದಿಕೆಯಲ್ಲಿದ್ದ, ಸಮಿತಿಯ ಸದಸ್ಯರೂ ಆಗಿರುವ ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ಅವರನ್ನು ‘ಅಕ್ಕಾವ್ರು’ ಎಂದೇ ಗೌರವದಿಂದ ಕರೆಯುತ್ತಿದ್ದ ಶಾಣಪ್ಪ, ‘ನೀವು ನಿಮ್ಮ ಮಹಿಳಾ ಮಂತ್ರಿ ಉಮಾಶ್ರೀ ಅವರನ್ನ ಕೇಳಬೇಕು. ಆಕಿ ಸಿನ್ಮಾದಾಕಿ (ಉಮಾಶ್ರೀ) ಅಲ್ಲಿ  ಅದಾಳ, ಈಕಿ ಸಿನಿಮಾದಾಕಿ (ಜಯಮಾಲಾ) ಇಲ್ಲಿ ಅದಾಳ...’ ಎಂದು ಬಿಟ್ಟರು!

ಈ ‘ಆಣಿಮುತ್ತು’ ಕೇಳಿ ಸಭೆಯಲ್ಲಿದ್ದವರೆಲ್ಲ ದಂಗಾದರು. ಆಗ ಅಲ್ಲಿ ಉದ್ಭವಿಸಿದ್ದು ‘ಮಹಿಳಾ ಶೋಷಣೆ ತಡೆಯೋರು ಯಾರು’ ಎಂಬ ಪ್ರಶ್ನೆ. 
- ಗಣೇಶ ಚಂದನಶಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.