ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 19 ಜೂನ್ 2016, 9:01 IST
Last Updated 19 ಜೂನ್ 2016, 9:01 IST

ಬಾರದ ಯಡಿಯೂರಪ್ಪ; ನಿಲ್ಲದ ಸುದ್ದಿಗೋಷ್ಠಿ
ಬಳ್ಳಾರಿ:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಳ್ಳಾರಿಗೆ ಬರಲಿದ್ದಾರೆ ಎಂದು ತಿಳಿಯುತ್ತಲೇ ಗಣಿ ಉದ್ಯಮಿ ಟಪಾಲ್‌ ಗಣೇಶ್‌ ನಗರದಲ್ಲಿ ಇತ್ತೀಚೆಗೆ ಬೆಳಿಗ್ಗೆ 9ಕ್ಕೇ ಸುದ್ದಿಗೋಷ್ಠಿ ಕರೆದಿದ್ದರು.

ಸಕ್ಕರಿ ಕರಡೆಪ್ಪನವರ ದ್ವಿಶತಮಾನೋತ್ಸವದ ಉದ್ಘಾಟನೆಗೆ ಯಡಿಯೂರಪ್ಪ ಅವರು ಬರಬೇಕಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ನ ಯಾರೇ ಪ್ರಮುಖರು ನಗರಕ್ಕೆ ಬಂದರೂ ಅಕ್ರಮ ಗಣಿಗಾರಿಕೆ ಪ್ರಸ್ತಾಪಿಸಿ ಸುದ್ದಿಗೋಷ್ಠಿ ನಡೆಸುವುದನ್ನು ರೂಢಿಸಿಕೊಂಡಿರುವ ಗಣೇಶ್‌, ಈ ಸಂದರ್ಭವನ್ನೂ ಬಳಸಿಕೊಳ್ಳಲು ನಿರ್ಧರಿಸಿದ್ದರು.

ಅಕ್ರಮ ಗಣಿಗಾರಿಕೆ ತನಿಖೆ ಕುರಿತ ತಮ್ಮ ಅಸಮಾಧಾನವನ್ನು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದರೆ, ಪತ್ರಕರ್ತರು ಸಂಜೆ ಯಡಿಯೂರಪ್ಪನವರ ಮುಂದೆ ಅವೇ ಪ್ರಶ್ನೆಗಳನ್ನು ಕೇಳುತ್ತಾರೆ; ವಿವಾದದ ಕುರಿತು ಚರ್ಚೆ ಆರಂಭವಾಗಲಿ, ಸುದ್ದಿಯೂ ಆಗಲಿ ಎಂಬುದು ಅವರ ಉದ್ದೇಶವಾಗಿತ್ತು.

ಆದರೆ ಯಡಿಯೂರಪ್ಪ ಬಳ್ಳಾರಿಗೆ ಬರುವುದಿಲ್ಲ ಎಂಬುದು ಹಿಂದಿನ ರಾತ್ರಿಯೇ ಗೊತ್ತಾಗಿತ್ತು. ಹಾಗಾಗಿ ಅವರ ಉದ್ದೇಶ ಈಡೇರಲೇ ಇಲ್ಲ.

‘ಯಡಿಯೂರಪ್ಪನವರು ಬರುತ್ತಿಲ್ಲ. ನೀವು ಸುದ್ದಿಗೋಷ್ಠಿ ನಡೆಸುವಿರೋ ಇಲ್ಲವೋ’ ಎಂದು ಅವರ ಉದ್ದೇಶವನ್ನು ಅರಿತಿದ್ದ ಕೆಲ ಪತ್ರಕರ್ತರು ಕಿಚಾಯಿಸುವಂತೆ ಕೇಳಿದಾಗ, ‘ನಾನ್ಯಾಕೆ ಸುದ್ದಿಗೋಷ್ಠಿ ರದ್ದು ಮಾಡಲಿ. ಅವರು ಬರದೇ ಇದ್ರೆ ಏನಂತೆ’ ಎಂದ ಗಣೇಶ್, ತಮ್ಮ ಹಳೆ ಪ್ರಶ್ನೆಗಳನ್ನು ಪತ್ರಕರ್ತರ ಮುಂದಿಟ್ಟರು.

‘ಗಣಿ ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆ ತನಿಖೆ ನಿಮಗೆ ಮಾತ್ರ ಬೇಕಾಗಿರುವಂತೆ ಕಾಣುತ್ತದೆ. ಜಿಲ್ಲೆಯ ಬೇರೆ ಯಾರೂ ಆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ’ ಎಂಬ ಪತ್ರಕರ್ತರ ಆಕ್ಷೇಪಕ್ಕೂ ಅವರು, ‘ಬೇರೆ ಯಾರೂ ಪ್ರಶ್ನಿಸದಿದ್ದರೆ ನಾನೂ ಪ್ರಶ್ನಿಸಬಾರದೇ’ ಎಂದು ಪ್ರಶ್ನೆಯ ಮೂಲಕವೇ ಉತ್ತರಿಸಿದರು.

ಇರುವ ಸ್ಥಾನ ಹೋಗದಿದ್ದರೆ ಸಾಕು!
ದಾವಣಗೆರೆ:
ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರ ಹುಟ್ಟುಹಬ್ಬದ ಅಂಗವಾಗಿ ಅವರ ಅನುಯಾಯಿಯೊಬ್ಬರು 56 ಜೋಡಿ ಸಾಮೂಹಿಕ ವಿವಾಹ ಏರ್ಪಡಿಸಿದ್ದರು.

ಮುಹೂರ್ತಕ್ಕೆ ಸರಿಯಾಗಿ ಮದುವೆ ಎಂದು ಮೊದಲೇ ಘೋಷಿಸಲಾಗಿತ್ತು. ಆ ರಾಜಕಾರಣಿ ವೇದಿಕೆಗೆ ಬರುವಾಗಲೇ ಒಂದು ಗಂಟೆ ತಡವಾಗಿತ್ತು. ಅವರು ಬರುತ್ತಿದ್ದಂತೆ ಗಟ್ಟಿಮೇಳ ಮೊಳಗಿಸಲಾಯಿತು.

ನಂತರ ಆರಂಭವಾಗಿದ್ದು ಜನ್ಮದಿನದ ಆಚರಣೆ. ಕೇಕ್‌ ಕತ್ತರಿಸಲಾಯಿತು; ಸನ್ಮಾನವೂ ನಡೆಯಿತು. ಆಯೋಜಕರಿಗೇ ಬೆಳ್ಳಿ ಖಡ್ಗ, ಕಳಸ ನೀಡಲಾಯಿತು. ಆದರೆ, ಆ ರಾಜಕಾರಣಿ ಬಿಟ್ಟು ಯಾರೊಬ್ಬರೂ ನೂತನ ದಂಪತಿಗೆ ಶುಭ ಹಾರೈಸಿ ಮಾತನಾಡಲಿಲ್ಲ.

ಪಾಲ್ಗೊಂಡಿದ್ದ ಸ್ವಾಮೀಜಿಗಳು ಪೈಪೋಟಿ ಮೇಲೆ ಆ ರಾಜಕಾರಣಿಯನ್ನು ಹೊಗಳಲು ಆರಂಭಿಸಿದರು. ಒಬ್ಬರು ದೇವರಿಗೆ, ಇನ್ನೊಬ್ಬರು ಭೀಷ್ಮನಿಗೆ ಹೋಲಿಸಿದರು. ಮತ್ತೊಬ್ಬರಂತೂ ‘ಈ ಕಿಂಗ್‌ಮೇಕರ್‌ಗೆ ಈ ಸಲ ಉಪ ಮುಖ್ಯಮಂತ್ರಿ ಹುದ್ದೆ ನೀಡಲೇಬೇಕು. ವೇದಿಕೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸುತ್ತಿದ್ದೇನೆ.

ಸಂಪುಟ ಪುನರ್‌ ರಚನೆಯಲ್ಲಿ ಅವರನ್ನು ಡಿಸಿಎಂ ಮಾಡಲೇಬೇಕು’ ಎಂದು ದೊಡ್ಡ ದನಿಯಲ್ಲಿ ಒತ್ತಾಯಿಸಿದರು. ತಕ್ಷಣವೇ ‘ಪುಣ್ಯ, ಈಗಿರುವ ಸಚಿವ ಸ್ಥಾನ ಕಿತ್ತುಕೊಳ್ಳದಿದ್ದರೆ ಸಾಕು’ ಎಂಬ ಸಣ್ಣ ದನಿಯೊಂದು ಪ್ರೇಕ್ಷಕರ ಸಾಲಿನಿಂದ ಕೇಳಿಬಂತು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.