ADVERTISEMENT

ಸೂಟು-ಬೂಟು ತೊಟ್ಟವ ಬಳಿ ಬಂದಾಗ...

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2016, 4:52 IST
Last Updated 2 ಅಕ್ಟೋಬರ್ 2016, 4:52 IST
ಎಂ.ಟಿ.ನಾಣಯ್ಯ
ಎಂ.ಟಿ.ನಾಣಯ್ಯ   

ಸುಮಾರು 12–15 ವರ್ಷಗಳ ಹಿಂದೆ ನಡೆದ ಘಟನೆಯಿದು. ಅದೊಂದು ದಿನ 22–25 ವರ್ಷದ ತರುಣನೊಬ್ಬ ನನ್ನ ಕಚೇರಿಗೆ ಬಂದ. ಸೂಟು, ಬೂಟು ಧರಿಸಿ ಟಿಪ್‌ಟಾಪ್‌ ಆಗಿ ಬಂದ ಆ ಹುಡುಗ, ಬಂದವನೇ, ಸಾರ್‌... ಎಂದು ನನ್ನ ಕಾಲಿಗೆ ಬಿದ್ದ. ನನ್ನ ಬಳಿ ಬರುವವರೆಲ್ಲಾ ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿದವರೋ ಇಲ್ಲವೇ ಸಂತ್ರಸ್ತರೋ ಆಗಿರುತ್ತಾರೆ. ಅದರ ಯೋಚನೆಯಲ್ಲಿಯೇ ಇದ್ದ ನನಗೆ ಈ ಹುಡುಗ ಕೂಡ ಯಾವುದೋ ಪ್ರಕರಣದಲ್ಲಿ ಸಿಲುಕಿಕೊಂಡಿರುವಂತೆ ಭಾಸವಾಯಿತು.

ಅವನನ್ನು  ನಿಧಾನವಾಗಿ ಮೇಲಕ್ಕೆಬ್ಬಿಸಿ, ‘ಯಾರಪ್ಪ ನೀನು, ಏನಾಯಿತು?’ ಎಂದೆ. ಅದಕ್ಕೆ ಅವನು, ‘ಸಾರ್‌... ನಾನು... ಸುಬ್ಬು... ಗುರುತು ಸಿಗಲಿಲ್ಲವೇ?’ ಎಂದ. ಅವನನ್ನು ಅಡಿಯಿಂದ ಮುಡಿಯವರೆಗೂ ನೋಡಿದೆ. ಎಲ್ಲೋ ನೋಡಿದ ನೆನಪಾದಂತೆ ಅನ್ನಿಸಿದರೂ ಗುರುತು ಸಿಗಲಿಲ್ಲ. ‘ಇಲ್ಲಪ್ಪ, ಯಾಕೋ ನೆನಪಾಗುತ್ತಾ ಇಲ್ಲ, ಯಾರು ನೀನು...’ ಎಂದೆ. ಅದಕ್ಕವನು, ‘ಸಾರ್‌, ನಾನು ದೆಹಲಿ, ಸಿಂಗಪುರ, ವಿಡಿಯೊಗೇಮ್‌... ನನ್ನ ಆಂಟಿ ಕಂಪ್ಲೇಂಟ್‌ ಕೊಟ್ಟಿದ್ದು...’ ಎಂದ.

ಅವನು ಅಷ್ಟು ಹೇಳುತ್ತಿದ್ದಂತೆಯೇ ನನಗೆ ನೆನಪಾಯಿತು. ‘ಅರೇ ನೀನಾ? ಇದೇನು ನಿನ್ನ ವೇಷ? ಎಷ್ಟೊಂದು ಬದಲಾಗಿಬಿಟ್ಟಿದ್ದೀಯಲ್ಲಪ್ಪ’ ಎಂದು ಮತ್ತೊಮ್ಮೆ ಅವನನ್ನು ಮೇಲಿನಿಂದ ಕೆಳಕ್ಕೆ ನೋಡಿದೆ. ‘ಸಾರ್‌... ನಾನೀಗ ಬ್ಯಾಂಕ್‌ ಒಂದರಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಕೆಲಸ ಸಿಕ್ಕಿದೆ. ಅದಕ್ಕಾಗಿಯೇ ಈ ಸೂಟು– ಬೂಟು–ಕೋಟು’ ಎಂದ. ಅವನು ಇಷ್ಟೆಲ್ಲಾ ಬದಲಾಗಿದ್ದು ಕೇಳಿ, ನೋಡಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಕ್ಷಣದಲ್ಲಿ ಮಾತೂ ಹೊರಡಲಿಲ್ಲ, ಅವನನ್ನು ತಬ್ಬಿಕೊಂಡೆ. ಅವನ ಕಣ್ಣಾಲಿಗಳು ತೇವಗೊಂಡವು...

***
ಆಗ ಐದಾರು ವರ್ಷಗಳ ಹಿಂದಕ್ಕೆ ಹೋದೆ ನಾನು. ಈ ಸುಬ್ಬುಗೆ ಆಗ 18–20 ವರ್ಷ ಇರಬೇಕು. ದೆಹಲಿ ಮೂಲದವರು ಈತನ ಪೋಷಕರು. ಕಾಲೇಜಿಗೆ ಹೋಗಲು ಬೆಂಗಳೂರಿನಲ್ಲಿ ಇದ್ದ ಸಂಬಂಧಿ ಸೀತಮ್ಮ (ಅವರನ್ನು ಸುಬ್ಬು ‘ಆಂಟಿ’ ಎನ್ನುತ್ತಿದ್ದ) ಅವರ ಮನೆಯಲ್ಲಿ ಸುಬ್ಬುವನ್ನು ಬಿಟ್ಟು ಅವನ ಅಪ್ಪ–ಅಮ್ಮ ಕಾರ್ಯನಿಮಿತ್ತ ಸಿಂಗಪುರದಲ್ಲಿ ನೆಲೆಸಿದ್ದರು.

ಬಿಸಿನೆಸ್ ಟ್ರಿಪ್‌ ಎಂದೋ, ತಮ್ಮ ಕೆರಿಯರ್‌ ಎಂದೋ, ಇನ್ನಾವುದೋ ಕೆಲಸಕ್ಕೆಂದೋ ಪರದೇಶಗಳಿಗೆ ಹೋಗಿ ಮಕ್ಕಳನ್ನು ‘ಪರದೇಸಿ’ಯಾಗಿ ಮಾಡುವ ಇಂದಿನ ಹಲವು ಪೋಷಕರಂತೆಯೇ ಸುಬ್ಬುವಿನ ಅಪ್ಪ–ಅಮ್ಮನೂ ಮಾಡಿದ ಕಾರಣ, ಸುಬ್ಬು ಅಕ್ಷರಶಃ ಅನಾಥಪ್ರಜ್ಞೆಯಿಂದ ಬಳಲತೊಡಗಿದ್ದ. ಅಪ್ಪ–ಅಮ್ಮ ಇದ್ದರೂ ಯಾರೂ ಇಲ್ಲದಂತಾಗಿತ್ತು ಅವನ ಸ್ಥಿತಿ.  ಒಂಟಿಯಾಗಿದ್ದ ಅವನಿಗೆ ಜೊತೆಯಾದದ್ದು ವಿಡಿಯೊಗೇಮ್‌.  ಅಪ್ಪ–ಅಮ್ಮ ಆಗೀಗ ಕೊಟ್ಟು ಹೋಗುವ ದುಡ್ಡಿನಲ್ಲಿಯೇ ಇಂಟರ್‌ನೆಟ್‌ ಸೆಂಟರ್‌ಗೆ ಹೋಗಿ ವಿಡಿಯೊಗೇಮ್‌ ಆಡುವ ಚಟ ಶುರುವಿಟ್ಟುಕೊಂಡ.  

ಈಗಿನಂತೆ ಆಗ ಮೊಬೈಲ್ ಫೋನ್ ಕೂಡ ಇರಲಿಲ್ಲವಲ್ಲ. ಆದ್ದರಿಂದ ವಿಡಿಯೊಗೇಮ್‌ ಕೇಂದ್ರಗಳಲ್ಲಿ ದುಡ್ಡು ಕೊಟ್ಟು ಆಡತೊಡಗಿದ. ಅವನ ಈ ಚಟ ಹೆಚ್ಚು ಆಗುತ್ತಿದ್ದಂತೆಯೇ ಪೋಷಕರು ಕೊಟ್ಟು ಹೋದ ಹಣ ಕರಗುತ್ತಾ ಬಂತು. ಈ ಆಟದ ಹುಚ್ಚು ಕೂಡ ಒಂದು ರೀತಿಯಲ್ಲಿ ಧೂಮಪಾನ, ಮದ್ಯಪಾನ ಇದ್ದಂತೆಯೇ. ಒಮ್ಮೆ ಇದಕ್ಕೆ ದಾಸರಾಗಿಬಿಟ್ಟರೆ ಮುಗಿಯಿತು. ಇನ್ನಷ್ಟು, ಮತ್ತಷ್ಟು ಆಡುವ ಹಂಬಲ ಉಂಟಾಗುತ್ತದೆ. ಸುಬ್ಬುವಿಗೂ ಹಾಗೆಯೇ ಆಯಿತು.

ಪೋಷಕರು ಕೊಟ್ಟ ದುಡ್ಡೆಲ್ಲಾ ಮುಗಿದ ಮೇಲೆ ಸೀತಮ್ಮ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಹಣ ಕದಿಯಲು ಶುರುಮಾಡಿದ. ಇದನ್ನು ತಿಳಿದ ಸೀತಮ್ಮ ಒಂದೆರಡು ಬಾರಿ ಪೊಲೀಸರಲ್ಲಿ ದೂರು ಕೂಡ ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ಅವನನ್ನು ಬಂಧಿಸಿ ಬುದ್ಧಿಮಾತು ಹೇಳಿ ಬಿಟ್ಟಿದ್ದರು ಪೊಲೀಸರು. ಆದರೆ ಅದಾವುದೂ ಸುಬ್ಬುವಿಗೆ ನಾಟಲಿಲ್ಲ.

ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದುಡ್ಡಿಗಾಗಿ ಹುಡುಕಾಡಿದ ಸುಬ್ಬು. ಎಲ್ಲಿಯೂ ದುಡ್ಡು ಸಿಗಲಿಲ್ಲ. ಆಗ ಮನೆಯಲ್ಲಿದ್ದ ಟಿ.ವಿ.ಯನ್ನೇ ಮಾರಿಬಿಟ್ಟ ಅವನು! ಸೀತಮ್ಮ ಮನೆಗೆ ಬಂದಾಗ ಟಿ.ವಿ. ಇಲ್ಲದ್ದನ್ನು ನೋಡಿ ಕಂಗಾಲಾಗಿ ಹೋದರು. ನಂತರ ಅವರಿಗೆ ವಿಷಯ ತಿಳಿಯಿತು. ಅವರ ಕೋಪ ತಾರಕಕ್ಕೇರಿತು. ಪುನಃ ಸುಬ್ಬುವಿನ ವಿರುದ್ಧ ಪೊಲೀಸರಲ್ಲಿ ಕಳ್ಳತನದ ದೂರು ದಾಖಲು ಮಾಡಿದರು. ಈ ಬಾರಿ ಆತನಿಗೆ ಸರಿಯಾದ ಬುದ್ಧಿ ಕಲಿಸುವ ಪಣ ತೊಟ್ಟಿದ್ದರು ಅವರು. ಪೊಲೀಸರು ಸುಬ್ಬುವನ್ನು ಬಂಧಿಸಿ ಚೆನ್ನಾಗಿ ಹೊಡೆದು ಜೈಲಿಗೆ ದಬ್ಬಿದರು. ಹೀಗೆ ಐದಾರು ತಿಂಗಳು ಕಳೆಯಿತು.

ಎಷ್ಟೆಂದರೂ ಹೆಣ್ಣು ಹೃದಯ ಅಲ್ಲವೇ? ಸುಬ್ಬುವಿನ ಆಂಟಿಗೆ ಸುಬ್ಬುವಿನ ಸ್ಥಿತಿ ನೋಡಲು ಆಗಲಿಲ್ಲ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವ ನಿರ್ಧಾರಕ್ಕೆ ಬಂದರು. ಈ ಸಂಬಂಧ ನನ್ನ ಬಳಿ ಅವರು ಬಂದರು. ಎಲ್ಲ ವಿಷಯವನ್ನೂ ಸವಿಸ್ತಾರವಾಗಿ ತಿಳಿಸಿದರು. ಸುಬ್ಬುವಿನ ವಿರುದ್ಧ ಅವರೇ ಕಳ್ಳತನದ ದೂರು ದಾಖಲು ಮಾಡಿದ್ದ ಕಾರಣ, ಅವರೇ ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವ ಹಾಗಿರಲಿಲ್ಲ.

ADVERTISEMENT

ಆದ್ದರಿಂದ ನಾನು ಏನು ಮಾಡಬೇಕು ಎಂದು ಯೋಚನೆಯಲ್ಲಿ ಸಿಲುಕಿದೆ. ಆಗಿದ್ದು ಆಗಿ ಹೋಗಲಿ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದೆ. ದೂರು ನೀಡಿದ ಸೀತಮ್ಮನವರೇ ಜಾಮೀನು ನೀಡಲು ಮುಂದೆ ಬಂದುದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ನಾನು ನ್ಯಾಯಾಧೀಶರಿಗೆ, ‘ಸುಬ್ಬು ಇನ್ನೂ ಚಿಕ್ಕ ಹುಡುಗ. ಇವನನ್ನು ಜೈಲಿನಲ್ಲಿಯೇ ಇಟ್ಟು ಏನೂ ಪ್ರಯೋಜನ ಇಲ್ಲ. ಪೋಷಕರು ದೂರ ಆಗಿರುವ ಕಾರಣ, ಅವನ ಮನಸ್ಥಿತಿ ಹೀಗಾಗಿದೆ. ಅವನಿಗೆ ಕೌನ್ಸೆಲಿಂಗ್ ನೀಡಿದರೆ ಖಂಡಿತವಾಗಿಯೂ ಸರಿಯಾಗುತ್ತಾನೆ, ಇಲ್ಲದೇ ಹೋದರೆ ಜೈಲಿನಲ್ಲಿಯೇ ಬೇರೆಲ್ಲಾ ಅಪರಾಧಿಗಳ ಜೊತೆ ಇದ್ದು ದೊಡ್ಡ ಕ್ರಿಮಿನಲ್ ಆಗುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬೇಕು’ ಎಂದು ವಾದಿಸಿದೆ.

ಕೆಲವು ಬಾರಿ ನ್ಯಾಯಾಧೀಶರೂ ಕಾನೂನಿನ ವ್ಯಾಪ್ತಿಯ ಹೊರಕ್ಕೆ, ವಾಸ್ತವಿಕ ಅಂಶಗಳ ನೆಲೆಗಟ್ಟಿನಲ್ಲಿ ಯೋಚನೆ ಮಾಡುವುದೂ ಇದೆ. ಇಲ್ಲೂ ಹಾಗೆಯೇ ಆಯಿತು. ನನ್ನ ವಾದ ನ್ಯಾಯಾಧೀಶರಿಗೂ ಒಪ್ಪಿಗೆಯಾಯಿತು. ಜಾಮೀನು ಮಂಜೂರು ಮಾಡಿದರು.

ಸುಬ್ಬುವಿಗೆ ಜಾಮೀನು ಸಿಗುತ್ತಿದ್ದಂತೆಯೇ, ಸೀತಮ್ಮನವರನ್ನು ಕರೆದು ಅವನನ್ನು ನನ್ನ ಬಳಿ ಕಳಿಸುವಂತೆ ಹೇಳಿದೆ. ಅವನು ಬಂದಾಗ ಬುದ್ಧಿ ಹೇಳಿದೆ. ಹೀಗೆಯೇ ಕಳ್ಳತನ ಮಾಡುತ್ತಾ ಹೋದರೆ ಅವನ ಭವಿಷ್ಯ ಹೇಗೆ ಆಗಬಹುದು ಎಂಬ ಬಗ್ಗೆ ಒಂದೆರಡು ಉದಾಹರಣೆ ಸಹಿತ ವಿವರಿಸಿದೆ.  ‘ನೀನು ತುಂಬಾ ಒಳ್ಳೆಯ ಹುಡುಗ, ಹೀಗೆಲ್ಲಾ ತಪ್ಪು ದಾರಿ ಹಿಡಿಯಬೇಡ. ನನ್ನ ಕಚೇರಿಯಲ್ಲಿಯೇ ಸ್ವಲ್ಪ ದಿನ ಕೆಲಸ ಮಾಡಿಕೊಂಡು ಇರು.

ನಾನು ನಿನಗೆ ಸಂಬಳ ಕೊಡುತ್ತೇನೆ. ವಿಡಿಯೊಗೇಮ್ ಆಡಲು ಹಣವನ್ನೂ ಕೊಡುತ್ತೇನೆ’ ಅಂದೆ. ‘ಜೈಲಿನಲ್ಲಿ ಐದಾರು ತಿಂಗಳು ಕಳೆದವ ನೀನು. ಕೈದಿಗಳು ಅನುಭವಿಸುವ ಸಂಕಟ ನೀನು ಕಣ್ಣಾರೆ ನೋಡಿದ್ದಿ. ಈಗ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದೀಯ. ಇದೇ ಮುಂದುವರಿದುಬಿಟ್ಟರೆ ನಿನ್ನ ಭವಿಷ್ಯ ಏನಾಗುತ್ತದೆ ಎಂದು ಯೋಚನೆ ಮಾಡು.

ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹುಡುಗ ಎನಿಸಿಕೊಳ್ಳುತ್ತೀಯೋ ಅಥವಾ ಕಳ್ಳ ಎಂಬ ಹಣೆಪಟ್ಟಿ ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಳ್ಳುತ್ತೀಯೋ’ ಎಂದೆಲ್ಲಾ ಕೇಳಿದೆ. ನನ್ನ ಬುದ್ಧಿಮಾತು ಅವನಿಗೆ ನಾಟಿದಂತೆ ನನಗೆ ಕಾಣಿಸಲಿಲ್ಲ. ನಾನು ಹೇಳುವುದನ್ನೆಲ್ಲಾ ಕೇಳಿಸಿಕೊಂಡು ನಂತರ ‘ಸ್ವಲ್ಪ ದಿನ ಬಿಟ್ಟು ಬರುತ್ತೇನೆ’ ಎಂದು ಹೇಳಿ ಹೋದವ  ಮತ್ತೆ ನನ್ನ ಕಚೇರಿಯತ್ತ ಮುಖ ಮಾಡಲಿಲ್ಲ. ಕೆಲ ದಿನಗಳಲ್ಲಿ ನಾನೂ ಈ ವಿಷಯ ಮರೆತೆ.

ಅದಾದ ಕೆಲವೇ ತಿಂಗಳಿನಲ್ಲಿ ಸೀತಮ್ಮ ನನ್ನ ಕಚೇರಿಗೆ ಬಂದರು. ‘ಸರ್... ನೀವು ಅದೇನು ಬುದ್ಧಿಮಾತು ಸುಬ್ಬುವಿಗೆ ಹೇಳಿದ್ದಿರೋ ಗೊತ್ತಿಲ್ಲ. ಆತ ಸಂಪೂರ್ಣವಾಗಿ ಬದಲಾಗಿಬಿಟ್ಟಿದ್ದಾನೆ. 800 ರೂಪಾಯಿಗೆ ಕೆಲಸಕ್ಕೆ ಸೇರಿದ್ದಾನೆ. ಅದರಲ್ಲಿ 100 ರೂಪಾಯಿ ಮಾತ್ರ ಇಟ್ಟುಕೊಂಡು 700 ರೂಪಾಯಿ ನನಗೆ ತಂದು ಕೊಡುತ್ತಾನೆ. ಯಾವುದೇ ಕೆಟ್ಟ ಚಟ ಅಂಟಿಸಿಕೊಂಡಿಲ್ಲ.

ವಿಡಿಯೊಗೇಮ್‌ ಎಲ್ಲಾ ಮರೆತುಬಿಟ್ಟಿದ್ದಾನೆ’ ಎಂದರು. ನನಗೆ ತುಂಬಾ ಅಚ್ಚರಿಯಾಯಿತು.  ಏಕೆಂದರೆ ಅಂದು ನಾನು ಹೇಳಿದ ಬುದ್ಧಿಮಾತನ್ನು ಅವನು ನಿರ್ಲಕ್ಷಿಸಿದಂತೆ ಕಂಡಿತ್ತು. ಆದರೆ ಅದನ್ನು ಅವನು ಪಾಲಿಸಿದ್ದ. ಸೀತಮ್ಮನವರು ಕೃತಜ್ಞತೆ ಹೇಳಿ ಹೋದವರು ಮತ್ತೆ ನನಗೆ ಕಾಣಿಸಿರಲಿಲ್ಲ. ಅದಾಗಿ ಕೆಲ ವರ್ಷಗಳ ನಂತರ ಸೂಟು-ಬೂಟು-ಕೋಟು ಧರಿಸಿದ ಸುಬ್ಬು ನನ್ನ ಕಚೇರಿಗೆ ಬಂದಿದ್ದ.

ಇವೆಲ್ಲಾ ನನ್ನ ಕಣ್ಣ ಪರದೆಯ ಮೇಲೆ ಹಾದುಹೋಯಿತು. ಆಗ ಸುಬ್ಬು, ‘ಸರ್. ನೀವು ಅಂದು ಬುದ್ಧಿ ಹೇಳದೇ ಹೋಗಿದ್ದರೆ ನಾನು ಏನಾಗಿರುತ್ತಿದ್ದೆನೋ ಗೊತ್ತಿಲ್ಲ. ಅಪ್ಪ-ಅಮ್ಮ ನನ್ನನ್ನು ಬಿಟ್ಟು ಬೇರೆಲ್ಲೋ ಇರುವ ಹತಾಶೆಯಲ್ಲಿ ಹಿಡಿಯಬಾರದ ಹಾದಿ ಹಿಡಿದುಬಿಟ್ಟಿದ್ದೆ. ನನ್ನ ಆಂಟಿ ಎಷ್ಟೇ ಬುದ್ಧಿ ಹೇಳುತ್ತಿದ್ದರೂ ಅದು ನನಗೆ ನಾಟಿರಲಿಲ್ಲ. ಆದರೆ ನೀವು ಹೇಳಿದ ಮಾತುಗಳು ನನ್ನನ್ನು ನಾಟಿದವು. ಒಳ್ಳೆಯ ಮನುಷ್ಯ ಆಗಬೇಕು ಎಂದು ಅಂದೇ ಅಂದುಕೊಂಡೆ.

ಆರಂಭದಲ್ಲಿ 800 ರೂಪಾಯಿಗೆ ದುಡಿಯುವಾಗ ದುಡ್ಡಿನ ಬೆಲೆ ಗೊತ್ತಾಯಿತು. ನಂತರ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಟ್ಟು ಓದಿ ಒಳ್ಳೆಯ ಅಂಕ ಗಳಿಸಿದೆ. ಅದಕ್ಕಾಗಿ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು’ ಎಂದು ಹೇಳಿದ. ಅವನಿಗೆ ಶುಭ ಕೋರಿ ವಿದಾಯ ಹೇಳಿದೆ. ನೂರಾರು ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದಕ್ಕಿಂತ ಹೆಚ್ಚಿನ ಹೆಮ್ಮೆ, ಸಂತೋಷ, ಸಾರ್ಥಕತೆ ನನ್ನನ್ನು ಆವರಿಸಿತು.

ಹೀಗೇ ಎಷ್ಟೋ ಯುವಕರಿಗೆ, ಆರೋಪಿಗಳಿಗೆ ನಾನು ನನ್ನ ವೃತ್ತಿ ಜೀವನದಲ್ಲಿ ಬುದ್ಧಿ ಹೇಳಿದ್ದುಂಟು. ಅದು ಎಷ್ಟು ಮಂದಿಯ ತಲೆಯೊಳಕ್ಕೆ ಹೋಗುತ್ತದೋ ಗೊತ್ತಿಲ್ಲ. ಅವರು ಬದಲಾಗಿದ್ದರೂ ನಮಗೆ ತಿಳಿಯುವುದಿಲ್ಲ, ಹೇಳಿದ ಬುದ್ಧಿಮಾತುಗಳನ್ನು ಉಡಾಫೆಯಾಗಿ ತೆಗೆದುಕೊಂಡರೂ ತಿಳಿಯುವುದಿಲ್ಲ. ಆದರೆ ಸುಬ್ಬುವಿನ ಪ್ರಕರಣದಲ್ಲಿ ಹಾಗಾಗಲಿಲ್ಲ. ಆತ ಒಳ್ಳೆಯ ಮನುಷ್ಯನಾಗಿ ಕೃತಜ್ಞತೆ ಹೇಳಲು ಪುನಃ ನನ್ನನ್ನು ನೆನೆದು ಬಂದಿದ್ದ.

ಈ ಘಟನೆಯನ್ನು ಇಲ್ಲಿ ಹೇಳುತ್ತಿರುವ ಉದ್ದೇಶ ಇಷ್ಟೆ. ಪೋಷಕರು ತಮ್ಮ ಮಕ್ಕಳನ್ನು ಕಡೆಗಣಿಸಿದರೆ ಮಕ್ಕಳ ಮೇಲೆ ಯಾವ ರೀತಿಯ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವುದಕ್ಕೆ ಈ ಕೇಸು ಒಂದು ಉದಾಹರಣೆಯಷ್ಟೆ. ಅದೇ ರೀತಿ, ನಾವು, ವಕೀಲರಾದವರು ನಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಆರೋಪಿಗಳನ್ನು ನಿರಪರಾಧಿ ಮಾಡಿ ಶಿಕ್ಷೆಯಿಂದ ಮುಕ್ತಿಗೊಳಿಸುವುದು ಸರ್ವೇ ಸಾಮಾನ್ಯ. ಅವರು ಕೊಲೆ ಮಾಡಿರಲಿ, ಬಿಡಲಿ... ಒಟ್ಟಿನಲ್ಲಿ ಅವರನ್ನು ಕೋರ್ಟ್ ದೃಷ್ಟಿಯಲ್ಲಿ ನಿರಪರಾಧಿ ಮಾಡುವುದು ನಮಗೆ ಮುಖ್ಯವಾಗಿರುತ್ತದೆ.

ಪ್ರಾಸಿಕ್ಯೂಷನ್ ವೈಫಲ್ಯ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ... ಇಂಥದ್ದನ್ನೆಲ್ಲಾ ಬಂಡವಾಳ ಮಾಡಿಕೊಂಡು ನಾವು ನಮ್ಮ ಕಕ್ಷಿದಾರರನ್ನು ಬಿಡುಗಡೆಗೊಳಿಸುತ್ತೇವೆ. ಅದು ನಮ್ಮ ವೃತ್ತಿ ಧರ್ಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಸುಬ್ಬುವಿನಂಥ ಎಷ್ಟೋ ಮಕ್ಕಳು ನಮ್ಮ ಮುಂದೆ ಬರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ಅವರು ಅಪರಾಧ ಲೋಕಕ್ಕೆ ಹೋಗಿರುತ್ತಾರೆ. ಅದು ವಕೀಲರಾದ ನಮಗೂ ಗೊತ್ತಿರುತ್ತದೆ. ಆದರೆ ಅವರ ಪ್ರಕರಣ ನಮ್ಮ ಬಳಿ ಬಂದಾಗ ಅವರನ್ನು ಹೇಗೆ ಬಿಡುಗಡೆಗೊಳಿಸುವುದು ಎಂಬುದಷ್ಟನ್ನೇ ಯೋಚನೆ ಮಾಡುತ್ತೇವೆ. ಅದರಿಂದಾಚೆ ಯೋಚನೆ ಮಾಡುವ ಗೋಜಿಗೆ ನಾವು ಹೋಗುವುದಿಲ್ಲ (ಹೋಗುವಷ್ಟು ವೇಳೆಯೂ ಇರುವುದಿಲ್ಲ).

ಸುಬ್ಬವಿನಂಥ ಎಷ್ಟೋ ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಿರುತ್ತದೆ. ಅವರು ಅಪರಾಧ ಲೋಕದೊಳಕ್ಕೆ ಹೋಗಲು ಏನೆಲ್ಲಾ ಕಾರಣಗಳು ಇರುತ್ತವೆ. ಅಂಥವರಿಗಾಗಿ ನಮ್ಮ ಕೆಲವೇ ಕ್ಷಣಗಳನ್ನು ಮೀಸಲು ಇಟ್ಟರೆ ಅವರ ಉಜ್ವಲ ಭವಿಷ್ಯವನ್ನು ನಾವು ರೂಪಿಸಬಹುದಾಗಿದೆ ಅಲ್ಲವೇ? ನೂರಾರು ಆರೋಪಿಗಳನ್ನು ಬಿಡುಗಡೆಗೊಳಿಸಿ ನಮ್ಮ ವೃತ್ತಿ ಧರ್ಮವನ್ನು ಮೆರೆಯುವುದಕ್ಕಿಂತ ಇಂಥ ಒಂದೇ ಒಂದು ಪ್ರಕರಣದಲ್ಲಿ ನಾವು ಯಶಸ್ವಿಯಾದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ ಎನ್ನುವುದೇ ನನ್ನ ಭಾವನೆ.
(ಎಲ್ಲರ ಹೆಸರು ಬದಲಾಯಿಸಲಾಗಿದೆ) ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.