ADVERTISEMENT

ಮೋರಿ ಕ್ಲೀನ್‌ ಮಾಡ್ಸಿ ಅಷ್ಟೇ ಸಾಕು..!

ನಾಗರಾಜ ಚಿನಗುಂಡಿ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಯಾದಗಿರಿ: ‘ಕನಸಿನ ಯಾದಗಿರಿ’ ನಿರ್ಮಾಣಕ್ಕೆ ಸಲಹೆ, ಸೂಚನೆ ನೀಡಿ ಎಂದು ನಗರಸಭೆ ಟಾಂ ಟಾಂ ಹೊಡೆಸುತ್ತಿದ್ದಂತೆ ಗುರುವಾರ ಸಭೆಯಲ್ಲಿ ಜನರು ಕಿಕ್ಕಿರಿದು ಸೇರಿದರು.

ಮುಂಗಡ ಪತ್ರ ಮಂಡಿಸಲು ಸಾರ್ವಜನಿಕರಿಂದ ಮುಂದಾಲೋಚನೆಯ ಸಲಹೆ ಪಡೆಯುವ ಉದ್ದೇಶ ನಗರ ಸಭೆಯದ್ದಾಗಿತ್ತು. ಅದಕ್ಕೆ ಜನರ ಅಭಿಪ್ರಾಯ ಸಂಗ್ರಹಿಸಲು ಅದು ಸಭೆ ಆಯೋಜಿಸಿತ್ತು.

ಸಭೆಯಲ್ಲಿ ಜನರ ಸಹಭಾಗಿತ್ವ ಕಂಡು ಪೌರಾಯುಕ್ತರ ಮುಖ ಅರಳಿತು. ‘ಯಾದಗಿರಿಯ ಅಭಿವೃದ್ಧಿ ಕನಸು ಅರಳಿಸುವುದು ಹೇಗೆ?’ ಎಂದು ಭಾಷಣಕಾರರಾಗಿದ್ದ ಪೌರಾಯುಕ್ತರು ಅರ್ಧತಾಸು ಜನರಿಗೆ ಪುಕ್ಕಟೆ ಸಲಹೆ ಕೊಟ್ಟರು. ಸಲಹೆ ಪಡೆಯಲು ಕರೆದು ಇವರೇ ಸಲಹೆ ನೀಡುತ್ತಿದ್ದಾರಲ್ಲ ಎಂದು ನೆರೆದವರು ಮುಖಮುಖ ನೋಡಿಕೊಂಡರು.

ADVERTISEMENT

ಅಷ್ಟರಲ್ಲಿ ನಗರಸಭೆ ಸಿಬ್ಬಂದಿ ಕಳೆದ ವರ್ಷದ ಮುಂಗಡಪತ್ರ ತಂದು ಜನರ ಕೈಗಿತ್ತರು. ಅದರಲ್ಲಿ ಹೋದ ವರ್ಷ ಸಂಗ್ರಹವಾಗಿದ್ದ ಆದಾಯದಲ್ಲಿ ಅರ್ಧದಷ್ಟನ್ನೂ ನಗರಸಭೆ ಖರ್ಚು ಮಾಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಜನರು, ‘ರೀ, ಪೌರಾಯುಕ್ತರೆ, ನಿಮ್ ಹಣೆಬರಹರಕ್ಕೆ ನಗರದಲ್ಲಿನ ಮೋರಿ ಕ್ಲೀನ್‌ ಮಾಡ್ಸಿ ಅಷ್ಟೇ ಸಾಕು!’ ಎನ್ನುತ್ತಿದ್ದಂತೆ ಪೌರಾಯುಕ್ತರ ಮುಖ ಹುಳ್ಳಗಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.