ADVERTISEMENT

ಅಂಕೆಯಿಲ್ಲದ ಸ್ವಾತಂತ್ರ್ಯ ಅಂಕುಶ ಎಂದು?

ತಲಾಖ್‌ ದುರ್ಬಳಕೆ ತಡೆ ಹೇಗೆ?

​ಪ್ರಜಾವಾಣಿ ವಾರ್ತೆ
Published 20 ಮೇ 2016, 19:41 IST
Last Updated 20 ಮೇ 2016, 19:41 IST
ಅಂಕೆಯಿಲ್ಲದ ಸ್ವಾತಂತ್ರ್ಯ  ಅಂಕುಶ ಎಂದು?
ಅಂಕೆಯಿಲ್ಲದ ಸ್ವಾತಂತ್ರ್ಯ ಅಂಕುಶ ಎಂದು?   

ಕೇವಲ ಮೂರು ಬಾರಿ ‘ತಲಾಖ್‌’ ಎಂದು ಉಸುರಿ ವೈವಾಹಿಕ ಬಂಧಕ್ಕೆ ಅಂತ್ಯ ಹಾಡುವುದನ್ನು ನಿಷೇಧಿಸುವಂತೆ ಆಗ್ರಹಿಸಿ ಉತ್ತರಾಖಂಡದ ಶಾಯರಾ ಬಾನು ಎಂಬುವವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದನ್ನು ಹಲವು ಪ್ರಭಾವಿ ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ. ಇಸ್ಲಾಂ ರಾಷ್ಟ್ರಗಳಲ್ಲೇ ನಿಷೇಧಕ್ಕೆ ಒಳಗಾಗಿರುವ ತಲಾಖ್‌, ಭಾರತೀಯ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಇನ್ನೂ ಜೀವಂತವಾಗಿದೆ. ಮಹಿಳೆಯರ ಶೋಷಣೆಗೆ ಕಾರಣವಾಗುವ ಈ ವಿವಾದಾತ್ಮಕ ಪದ್ಧತಿಯನ್ನು ಕೋರ್ಟ್‌ ನಿಷೇಧಿಸುವುದೇ ಅಥವಾ ಮುಸ್ಲಿಂ ಸಂಘಟನೆಗಳ ಬೇಡಿಕೆಗೆ ಮಣಿಯುವುದೇ ಎಂಬುದು ಕುತೂಹಲ ಹುಟ್ಟಿಸಿದೆ.

ಭಾರತದ ಮಹಿಳೆಯರಿಗೆ ಕುಟುಂಬ ವ್ಯವಸ್ಥೆಯಲ್ಲಿ ಸಮಾನತೆ ಎನ್ನುವುದು ಇಂದಿಗೂ ನಿಲುಕದ ಸಂಗತಿ. ಮದುವೆ, ವಿಚ್ಛೇದನ, ಪೂರ್ವಿಕರ ಆಸ್ತಿ ಹಕ್ಕು ಪಡೆಯುವುದು, ದತ್ತು ಪ್ರಕ್ರಿಯೆಗಳು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೊಳಪಟ್ಟಿವೆ. ವಿಚ್ಛೇದನ, ಮಕ್ಕಳ ಪಾಲನಾ ಹಕ್ಕು, ಜೀವನಾಂಶಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ಕಾಣುತ್ತಿರುವ ಪ್ರಕರಣಗಳು, ಧರ್ಮದ ಆಧಾರದಲ್ಲಿ ರೂಪಿಸಿರುವ ವೈಯಕ್ತಿಕ ಕಾನೂನುಗಳಲ್ಲಿ ಅಂತರ್ಗತವಾಗಿರುವ ಅಸಮಾನತೆಗೆ ಸಾಕ್ಷಿಯಾಗಿವೆ.

ಮಕ್ಕಳ ಪಾಲನೆಯ ಹಕ್ಕು, ವಿವಾಹ, ವಿಚ್ಛೇದನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಿಂದೂ ವೈಯಕ್ತಿಕ ಕಾನೂನುಗಳಿಗೆ ಒಂದು ಹಂತದ ಸುಧಾರಣೆ ತಂದು ಪುರುಷರಿಗೆ ಸಮಾನವಾದ ಹಕ್ಕನ್ನು ಮಹಿಳೆಗೆ ನೀಡಲಾಗಿದೆ– ಕನಿಷ್ಠಪಕ್ಷ ಕಾನೂನು ಪುಸ್ತಕದಲ್ಲಿ. ಆದರೆ, ದುರದೃಷ್ಟದ ಸಂಗತಿಯೆಂದರೆ ಹಿಂದೂ ವೈಯಕ್ತಿಕ ಕಾನೂನಿನಲ್ಲಿ ಆಗಿರುವ ಬದಲಾವಣೆಯ ಪ್ರಮಾಣ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಆಗಿಲ್ಲ. 

‘ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಇರುವ ಮೂರು ಬಾರಿ ತಲಾಖ್‌ ಹೇಳುವ ಪದ್ಧತಿಯು ತಾರತಮ್ಯದಿಂದ ಕೂಡಿದೆ. ಹಾಗಾಗಿ ಅದು ಅಸಾಂವಿಧಾನಿಕವೂ ಹೌದು’ ಎಂದು ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ಬಾರಿ ತಲಾಖ್‌ ಹೇಳುವ ಪದ್ಧತಿಯನ್ನು ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಇದೇ ಮೊದಲು. ಹಾಗಾಗಿ ಈಗ ಕಂಡುಬಂದಿರುವ ಬೆಳವಣಿಗೆ ಆಶಾದಾಯಕ.

ಈ ಅರ್ಜಿ ಸಲ್ಲಿಸಿರುವ ಶಾಯರಾ ಬಾನು ಅವರು ತಮ್ಮ ಪತಿಯಿಂದ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾದವರು. ಅಲ್ಲದೆ, ತಮ್ಮ ಮದುವೆ ಯಾವಾಗ ಬೇಕಿದ್ದರೂ ಮುರಿದುಬೀಳಬಹುದು ಎಂಬ ಭೀತಿಯಲ್ಲಿದ್ದವರು. ಮದುವೆಯಾದ ಹದಿನೈದು ವರ್ಷಗಳ ನಂತರ ಶಾಯರಾ ಪತಿ, ತಲಾಖ್‌ ಹೇಳಿ ಕಾರಣವೇ ಇಲ್ಲದೆ ವಿಚ್ಛೇದನ ನೀಡಿದರು. ಈ ಪ್ರಕರಣದ ಬಗ್ಗೆ ಹೆಚ್ಚು ತಿಳಿಯುವ ಮೊದಲು, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಮಹಿಳೆಯ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಲಯಗಳು ಹೇಗೆ ನಿರ್ವಹಿಸಿವೆ ಎಂಬುದನ್ನು ಅರಿಯಬೇಕು.

ಮುಸ್ಲಿಂ ಮಹಿಳೆಯರು ಜೀವನಾಂಶಕ್ಕಾಗಿ ನ್ಯಾಯಾಲಯಗಳಲ್ಲಿ ನಡೆಸಿರುವ ಹೋರಾಟಗಳು, ಮಹಿಳೆಯರಿಗೆ ರೂಪಿಸಿರುವ ವಿವಿಧ ಕಾನೂನುಗಳನ್ನು ಪ್ರಗತಿಪರ ನೆಲೆಯಲ್ಲಿ ಅರ್ಥೈಸಲು ಕಾರಣವಾದವು. ಸುಧಾರಣೆಗೆ ಕಾರಣವಾದ ಮೊದಲ ಪ್ರಕರಣಗಳಲ್ಲಿ ಶಾಬಾನು ಪ್ರಕರಣ ಕೂಡ ಒಂದು. ಇದರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ‘ವಿಚ್ಛೇದಿತ ಮಹಿಳೆ ಕೂಡ ಜೀವನಾಂಶ ಕೋರಬಹುದು’ ಎಂದು ಹೇಳುವ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 125ನೇ ಸೆಕ್ಷನ್ ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ಹೇಳಿತು.

ತಲಾಖ್‌ ಹೇಳುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಕಾರಣವೇ ಇಲ್ಲದೆ ವಿಚ್ಛೇದನ ನೀಡಲಾಗುತ್ತಿದೆ, ಹಾಗಾಗಿ ಕಾನೂನಿನಲ್ಲಿ ಸುಧಾರಣೆ ಬರಬೇಕು ಎಂದು ಇದೇ ಪ್ರಕರಣದಲ್ಲಿ ಕೋರ್ಟ್‌ ಹೇಳಿತು. ‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಪ್ರಭುತ್ವ ಕ್ರಮ ಕೈಗೊಳ್ಳಬೇಕು’ ಎಂದು ಹೇಳುವ ಸಂವಿಧಾನದ 44ನೇ ವಿಧಿಯನ್ನು ನೆಲೆಯಾಗಿಟ್ಟುಕೊಂಡು ಪೀಠವು, ‘ಅಸಮಾನತೆ ಹಾಗೂ ತಾರತಮ್ಯ ಇರದಂತೆ ನೋಡಿಕೊಳ್ಳಲು ಸರ್ಕಾರವು ಏಕರೂಪ ಸಂಹಿತೆ ತರಲು ಕ್ರಮ ಜರುಗಿಸಬೇಕು.

ವೈಯಕ್ತಿಕ ಕಾನೂನುಗಳ ನಡುವಿನ ಬಿರುಕು ಮುಚ್ಚಲು ನ್ಯಾಯಾಲಯಗಳ ಆದೇಶವೊಂದೇ ಸಾಕಾಗದು. ಏಕರೂಪ ನಾಗರಿಕ ಸಂಹಿತೆ ಬೇಕು’ ಎಂದು ಹೇಳಿತು. ಆದರೆ, ‘ಮುಸ್ಲಿಂ ಮಹಿಳೆಯರ (ವಿಚ್ಛೇದನದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆ– 1986’ನ್ನು ಜಾರಿಗೊಳಿಸುವ ಮೂಲಕ ಈ ತೀರ್ಪನ್ನು ಬುಡಮೇಲು ಮಾಡಲಾಯಿತು. ಮುಸ್ಲಿಂ ಮಹಿಳೆಯರಿಗೆ ಕೊಡಬೇಕಿರುವ ಜೀವನಾಂಶವು 1986ರ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಇವರ ಜೀವನಾಂಶವು ಸಿಆರ್‌ಪಿಸಿಯ 125ನೇ ಸೆಕ್ಷನ್‌ ವ್ಯಾಪ್ತಿಗೆ ಬಾರದು ಎಂದು ಕಾಯ್ದೆ ಹೇಳುತ್ತದೆ.

ಈ ಕಾಯ್ದೆಯ ಅನ್ವಯ, ಪತಿಯು ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ಇದ್ದತ್‌ ಅವಧಿಗಾಗಿ ಮಾತ್ರ ಕೊಟ್ಟರೆ ಸಾಕು. ಕಾಯ್ದೆಯ 3 ಮತ್ತು 4ನೇ ಸೆಕ್ಷನ್‌ಗಳಲ್ಲಿ ಹೇಳಿರುವ ಈ ಮಾತನ್ನು ಮುಸ್ಲಿಂ ಕಾನೂನು ತಜ್ಞ ಡಾ. ಡೇನಿಯಲ್ ಲತಿಫಿ ಅವರು 2001ರಲ್ಲಿ ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 1986ರ ಕಾಯ್ದೆಗೆ ಅತ್ಯಂತ ಪ್ರಗತಿಪರವಾದ ವ್ಯಾಖ್ಯಾನ ನೀಡಿತು. ‘ಮುಸ್ಲಿಂ ಪತಿಯು, ವಿಚ್ಛೇದಿತ ಪತ್ನಿಯ ಭವಿಷ್ಯಕ್ಕೆ ನ್ಯಾಯಸಮ್ಮತವಾದ ನೆರವು ಒದಗಿಸಬೇಕು. ಜೀವನಾಂಶವನ್ನು ಇದ್ದತ್‌ ಅವಧಿಗೆ ಮಾತ್ರ ನೀಡುವುದಲ್ಲ.

ಆ ಮೊತ್ತವನ್ನು ಆಕೆಯ ಇಡೀ ಜೀವನಕ್ಕಾಗಿ ಕೊಡಬೇಕು. ಜೀವನಾಂಶವನ್ನು ಇದ್ದತ್ ಅವಧಿಯೊಳಗೆ ನೀಡಬೇಕು’ ಎಂದು ನ್ಯಾಯಮೂರ್ತಿ ರಾಜೇಂದ್ರಬಾಬು ಅವರು ತೀರ್ಪಿನಲ್ಲಿ ಹೇಳಿದರು. ಮದುವೆಯ ವ್ಯವಸ್ಥೆಯಲ್ಲಿ ಸಮಾನ ಹಕ್ಕುಗಳಿಗಾಗಿ ಮುಸ್ಲಿಂ ಮಹಿಳೆಯರು ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಶಾಯರಾ ಬಾನು ಸಲ್ಲಿಸಿರುವ ಅರ್ಜಿ ಮಹತ್ವ ಪಡೆದಿದೆ. ಮುಸ್ಲಿಂ ಪತಿಯು ತಲಾಖ್‌ ಎನ್ನುವುದನ್ನು ಕಾಲಕಾಲಕ್ಕೆ ಹೇಳಿ, ನಂತರ ಅದನ್ನು ಬರವಣಿಗೆ ರೂಪದಲ್ಲಿ ನೀಡಿಯೂ ವಿಚ್ಛೇದನ ಕೊಡಬಹುದು.

ಆದರೆ ಈ ರೀತಿ ಮೂರು ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡುವ ಹಕ್ಕು ಮಹಿಳೆಗೆ ಇಲ್ಲ. ಆಕೆ ವಿಚ್ಛೇದನ ಪಡೆಯಲು ಇರುವ ಮಾರ್ಗ ‘ಖುಲಾ’ ಮಾತ್ರ. ‘ಖುಲಾ’ಕ್ಕೆ ಪತಿ ಒಪ್ಪಬೇಕು. ‘ಮೆಹ್ರ್‌’ನ ಒಂದು ಅಂಶವನ್ನು ಕೊಡಲು ಒಪ್ಪಬೇಕು. ಅಥವಾ ಮುಸ್ಲಿಂ ವಿವಾಹ ವಿಸರ್ಜನಾ ಕಾಯ್ದೆ 1939ರ ಆಶಯಗಳಿಗೆ ಅನುಗುಣವಾಗಿ ಆಗಬೇಕು. ಹಾಗಾಗಿ, ಮೂರು ಬಾರಿ ತಲಾಖ್‌ ಹೇಳಿ ವಿಚ್ಛೇದನ ನೀಡುವ ಪದ್ಧತಿ ಅತ್ಯಂತ ತಾರತಮ್ಯದಿಂದ ಕೂಡಿದೆ. ವಿವಾಹ ವ್ಯವಸ್ಥೆಯೊಳಗೆ ಕಾಲಿಟ್ಟ ಹೆಣ್ಣು ವಿಚ್ಛೇದನದ ಭೀತಿಯಲ್ಲಿ ಯಾವತ್ತೂ ಇರುವಂತಾಗಿದೆ.

ವಿಚ್ಛೇದನಗೊಂಡರೆ ತಮ್ಮ ಜೀವನ ಮುಂದುವರಿಸಲು ಸಾಮರ್ಥ್ಯ ಇಲ್ಲದ ಮಹಿಳೆಯರು ಕೌಟುಂಬಿಕ ಹಿಂಸೆಗೆ ಸದಾ ಗುರಿಯಾಗುತ್ತಾರೆ. ಮೂರು ಬಾರಿ ತಲಾಖ್‌ ಹೇಳುವ ಪದ್ಧತಿಯನ್ನು ಮೂಲ ಪ್ರಶ್ನೆಯಾಗಿರಿಸಿಕೊಂಡು ಈ ಹಿಂದೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ಕೆಲವು ಹೈಕೋರ್ಟ್‌ಗಳು ಈ ಹಿಂದೆ, ‘ಇಂಥ ವ್ಯವಸ್ಥೆ ಸೂಕ್ತವಾದುದಲ್ಲ’ ಎಂಬ ಮಾತುಗಳನ್ನಾಡಿವೆ. ‘ಮುಸ್ಲಿಂ ಪತಿಯು ತನ್ನ ಪತ್ನಿಗೆ ಇಚ್ಛಾನುಸಾರ ವಿಚ್ಛೇದನ ನೀಡುವಂತಿಲ್ಲ. ವಿಚ್ಛೇದನಕ್ಕೆ ಸರಿಯಾದ ಕಾರಣ ಇರಬೇಕು’ ಎಂದು 1993ರಲ್ಲಿ ಜೀನತ್ ಫಾತಿಮಾ ರಷೀದ್‌ ಪ್ರಕರಣದಲ್ಲಿ ಗುವಾಹಟಿ ಹೈಕೋರ್ಟ್‌ ಹೇಳಿದೆ.

ಇದೇ ರೀತಿ, ‘ಒಂದೇ ಬಾರಿಗೆ ಮೂರು ಬಾರಿ ತಲಾಖ್‌ ಎಂದು ವಿಚ್ಛೇದನ ನೀಡುವುದು ನ್ಯಾಯವಲ್ಲ’ ಎಂದು 1994ರಲ್ಲಿ ಅಲಹಾಬಾದ್‌ ಹೈಕೋರ್ಟ್‌, ರಹ್ಮತ್ ಉಲ್ಲಾ ಪ್ರಕರಣದಲ್ಲಿ ಹೇಳಿದೆ. ತಲಾಖ್‌ ಹೇಳುವ ಪದ್ಧತಿಯು ಪತಿಗೆ ಅಂಕೆಯಿಲ್ಲದ ಸ್ವಾತಂತ್ರ್ಯ ನೀಡುತ್ತದೆ. ಕಾರಣವೇ ಇಲ್ಲದೆ ಪತ್ನಿಗೆ ವಿಚ್ಛೇದನ ನೀಡುವ ಅವಕಾಶ ಪತಿಗೆ ಲಭ್ಯವಾಗುತ್ತದೆ. ಈ ಹಂತದವರೆಗೆ ‘ಮೂರು ಬಾರಿ ತಲಾಖ್‌’ ಎನ್ನುವ ಪದ್ಧತಿಯು ಷರಿಯಾ ಕಾನೂನಿನ ಅಡಿ ಮಾನ್ಯತೆ ಪಡೆಯುವುದಿಲ್ಲ ಎಂದು ಕೋರ್ಟ್‌ ಹೇಳಿದೆ. 

ತಾರತಮ್ಯಕ್ಕೆ ಎಡೆ ಮಾಡಿಕೊಡುವ ಇಂಥ ಕಾನೂನುಗಳ ಜಾರಿಗೆ ನ್ಯಾಯಾಲಯಗಳು ಸ್ಪಷ್ಟವಾಗಿ ವಿರೋಧ ದಾಖಲಿಸಿದ್ದರೂ, ನಮ್ಮಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿಲ್ಲ. ಅದು ಜಾರಿಗೆ ಬಂದಿದ್ದರೆ, ಯಾವುದೇ ಧರ್ಮದ ಮಹಿಳೆಗೆ ವಿವಾಹ ವ್ಯವಸ್ಥೆಯಲ್ಲಿ ರಕ್ಷಣೆ ಸಿಗುತ್ತಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಈ ಇತಿಹಾಸದ ನೆಲೆಯಲ್ಲಿ, ಆ ಕಾನೂನುಗಳ ಸುಧಾರಣೆಗೆ ನ್ಯಾಯಾಲಯಗಳು ಇಟ್ಟ ಹೆಜ್ಜೆಯ ನೆಲೆಯಲ್ಲಿ ನೋಡಿದಾಗ, ಮುಸ್ಲಿಂ ಮಹಿಳೆಯರ ಸಮಾನತೆಗಾಗಿನ ಹೋರಾಟದ ಪುಟಗಳಲ್ಲಿ ಶಾಯರಾ ಅವರು ಸಲ್ಲಿಸಿರುವ ಅರ್ಜಿ ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತದೆ.

ಮಹಿಳೆಯರು ಎದುರಿಸುತ್ತಿರುವ ಅಸಮಾನತೆ, ತಾರತಮ್ಯದ ಹಿನ್ನೆಲೆಯಲ್ಲಿ ತಲಾಖ್‌ ಪದ್ಧತಿಯನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸುತ್ತದೆ, ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರ್ಕಾರಕ್ಕೆ ಸೂಚನೆ ನೀಡುತ್ತದೆ ಎಂದು ಆಶಿಸೋಣ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪನ್ನು ಸ್ತ್ರೀವಾದಿಗಳು, ಸಂವಿಧಾನ ತಜ್ಞರು ಕಾತರದಿಂದ ಕಾಯುತ್ತಿದ್ದಾರೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್‌ ಸಮೀಕ್ಷೆಯ ವಿವರ: ಸಮೀಕ್ಷೆಗೆ ಒಳಪಟ್ಟ ರಾಜ್ಯಗಳು
* ರಾಜಸ್ತಾನ
* ಗುಜರಾತ್‌
* ಕರ್ನಾಟಕ
* ಮಧ್ಯಪ್ರದೇಶ
* ಜಾರ್ಖಂಡ್‌
* ಬಿಹಾರ
* ಪ.ಬಂಗಾಳ
* ಒಡಿಶಾ
* ಮಹಾರಾಷ್ಟ್ರ
* ತಮಿಳುನಾಡು
(2013ರ ಜುಲೈ– ಡಿಸೆಂಬರ್‌ನಲ್ಲಿ ನಡೆದ ಸಮೀಕ್ಷೆಯ ವಿವರ 2015ರ ಆಗಸ್ಟ್‌ನಲ್ಲಿ ಬಿಡುಗಡೆ)

ಸಮೀಕ್ಷೆ ಏನು ಹೇಳುತ್ತದೆ?
10  ರಾಜ್ಯಗಳಲ್ಲಿ ಸಮೀಕ್ಷೆ

4710  ಮುಸ್ಲಿಂ ಮಹಿಳೆಯರ ಸಂದರ್ಶನ

92.1% ಮಹಿಳೆಯರಿಂದ ತಲಾಖ್ ನಿಷೇಧಕ್ಕೆ ಆಗ್ರಹ

ADVERTISEMENT

91.7% ಮಹಿಳೆಯರಿಂದ ಬಹುಪತ್ನಿತ್ವಕ್ಕೆ ವಿರೋಧ

73% ಮಂದಿ ಬಡ ಕುಟುಂಬಗಳಿಗೆ ಸೇರಿದವರು

₹50 ಸಾವಿರಕ್ಕಿಂತ ಕಡಿಮೆ ವಾರ್ಷಿಕ ವರಮಾನ ಈ ಕುಟುಂಬಗಳದು

55% ಮಹಿಳೆಯರು 18 ವರ್ಷ ತುಂಬುವ ಮೊದಲೇ ಮದುವೆಯಾದವರು

82% ಮಂದಿಯ ಹೆಸರಿನಲ್ಲಿ ಯಾವುದೇ ಆಸ್ತಿಪಾಸ್ತಿ ಇಲ್ಲ

78% ಮಂದಿ ಗೃಹಿಣಿಯರು

53% ಮಂದಿ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ

93% ಮಹಿಳೆಯರು ವಿಚ್ಛೇದನಕ್ಕೆ ಮುನ್ನ ಪಂಚಾಯ್ತಿ ನಡೆಸಬೇಕೆಂಬ ಒಲವು ವ್ಯಕ್ತಪಡಿಸಿದ್ದಾರೆ

83.3% ಮಹಿಳೆಯರಿಗೆ ‘ಮುಸ್ಲಿಂ ಕೌಟುಂಬಿಕ ನ್ಯಾಯ’ ನೀತಿಸಂಹಿತೆ ರಚನೆಯಿಂದ ನ್ಯಾಯ ಪಡೆಯುವ ನಿರೀಕ್ಷೆ

88.5% ಮಹಿಳೆಯರು ಮೌಖಿಕ ವಿಚ್ಛೇದನಕ್ಕೆ ನೋಟಿಸ್‌ ಕಳುಹಿಸುವ ಮೌಲ್ವಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ

96% ಮಹಿಳೆಯರು ತಮ್ಮ ಮಾಜಿ ಗಂಡಂದಿರು ಮಕ್ಕಳ ನಿರ್ವಹಣೆ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.