ADVERTISEMENT

ಅದೇ ಧೋರಣೆ; ‘ಕಾಶ್ಮೀರ’ ಎಂಬ ಗೀಳು

ಭಾರತ– ಪಾಕಿಸ್ತಾನ ಸಂಬಂಧ

ವಿವೇಕ್‌ ಕಟ್ಜು
Published 17 ಜುಲೈ 2015, 19:24 IST
Last Updated 17 ಜುಲೈ 2015, 19:24 IST

ಪಾಕಿಸ್ತಾನದ ಭದ್ರತಾ ನೀತಿಗಳನ್ನು ನಿಯಂತ್ರಿಸುವ ಸೇನಾಧಿಕಾರಿಗಳು ಭಾರತಕ್ಕೆ ಸಂಬಂಧಿಸಿದಂತೆ ಒಂದೇ ರೀತಿಯ ಧೋರಣೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಭಾರತ ಅಂದರೆ ಶಾಶ್ವತ ಬೆದರಿಕೆ ಎಂಬಂತೆ ನೋಡುವ ಅವರು ಅದಕ್ಕಾಗಿಯೇ ಅದನ್ನು ಶಾಶ್ವತ ವೈರಿಯಾಗಿ ಪರಿಗಣಿಸುತ್ತಾರೆ. ಭಾರತದ ಬೆದರಿಕೆಯ ಭೂತವನ್ನು ಜೀವಂತವಾಗಿಟ್ಟುಕೊಳ್ಳಲು ಸಂಘರ್ಷದ ಕಿಡಿಯನ್ನು ಸದಾ ಹೊತ್ತಿಸುತ್ತಲೇ ಇರುತ್ತಾರೆ.

ರಾಜಕೀಯ ತಂತ್ರದ ಭಾಗವಾಗಿ ಕೆಲಕಾಲ ಭಾರತದೊಂದಿಗೆ ಮಾತುಕತೆ ನಡೆಸಿದಂತೆ ಕಂಡರೂ ತಮ್ಮ ಮೂಲ ಧೋರಣೆಯಿಂದ ಅವರು ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ. ಪಾಕಿಸ್ತಾನದ ಜತೆ ಸಹಜ ಹಾಗೂ ಸೌಹಾರ್ದ ಸಂಬಂಧ ಹೊಂದಿರಬೇಕು ಎಂದು ಭಾರತ ಎಂದಿನಿಂದಲೂ ಆಶಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಸಣ್ಣ ಮಟ್ಟದಲ್ಲೇ ಆದರೂ ಆ ದೇಶದೊಂದಿಗೆ  ಮಾತುಕತೆ ನಡೆಸಲು ಆಸಕ್ತಿ ತೋರುತ್ತಲೇ ಇದೆ.

ಭಾರತ– ಪಾಕಿಸ್ತಾನದ ನಿಲುವುಗಳಲ್ಲಿ ಇರುವ ದ್ವಂದ್ವದಿಂದಾಗಿ  ಉಭಯ ದೇಶಗಳ ನೀತಿಗಳು ಗೊಂದಲಕಾರಿಯಾಗಿ ಹಾಗೂ ಪ್ರತಿಕ್ರಿಯಾತ್ಮಕವಾಗಿ ಇರುತ್ತವೆ. ಮುಖ್ಯವಾಗಿ ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಈ ಸಂಬಂಧ ಇದೇ ರೀತಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಪಾಕಿಸ್ತಾನಕ್ಕೆ ಸಂಬಂಧಿಸಿದ ನೀತಿಯಲ್ಲಿ ನಿಕಟಪೂರ್ವ ಪ್ರಧಾನಿ ಸಿಂಗ್‌ ರೀತಿಯಲ್ಲಿ ಅಸ್ಥಿರತೆ ಪ್ರದರ್ಶಿಸುತ್ತಿದ್ದಾರೆ.

ರಷ್ಯಾದ ಉಫಾದಲ್ಲಿ ನರೇಂದ್ರ ಮೋದಿ ಹಾಗೂ ಪಾಕ್‌ ಪ್ರಧಾನಿ ಮಧ್ಯೆ ಮಾತುಕತೆ ನಡೆದ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್‌ ಸಮ್ಮೇಳನಕ್ಕೆ ನೀಡಲಾದ ಆಹ್ವಾನವನ್ನು ಮೋದಿ ಒಪ್ಪಿದ್ದಾರೆ ಎಂದು ಹೇಳಲಾಯಿತು. ಕೇವಲ ಸಾರ್ಕ್‌ ಸಮ್ಮೇಳನಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದು ಮೋದಿ ಅವರಿಗೆ ತೃಪ್ತಿ ತರಲಿದೆಯೇ ಅಥವಾ ಇದೊಂದು ಐತಿಹಾಸಿಕ ಭೇಟಿಯಾಗಲಿ ಎಂದು ಅವರು ಆಶಿಸುತ್ತಿದ್ದಾರೆಯೇ? ಎರಡನೆಯದು ಆಗಬೇಕು ಎಂದಾದಲ್ಲಿ, ಸಾರ್ಕ್‌ ಜತೆ ಸಂಪೂರ್ಣ ದ್ವಿಪಕ್ಷೀಯ ಮಾತುಕತೆಗೆ ದಾರಿ ಮಾಡಿಕೊಡುವ ಪ್ರವಾಸ ಇದಾಗಲಿದೆ.

ಪಾಕಿಸ್ತಾನದ ಸೇನಾಧಿಕಾರಿಗಳು  ಈ ಆಶಯವನ್ನು ನಮ್ಮ ದೌರ್ಬಲ್ಯ ಎಂದು ಪರಿಗಣಿಸುತ್ತಾರೆಯೇ ಎಂಬುದು ಮುಂದಿರುವ ಪ್ರಶ್ನೆ. ಒಂದೊಮ್ಮೆ ಅವರು ಹಾಗೆ ಪರಿಗಣಿಸಿದಲ್ಲಿ, ಗಡಿಯಾಚೆಗಿನ   ಭಯೋತ್ಪಾದನೆ, ಅಂತರರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡು ಹಾರಿಸಲು ಇದೊಂದು ಒಳ್ಳೆಯ ಅವಕಾಶ ಎಂದುಕೊಳ್ಳುತ್ತಾರೆ. ಇಂತಹ ದಾಳಿಗೆ ಭಾರತ ಪ್ರತಿಕ್ರಿಯಿಸುವುದಿಲ್ಲ ಎಂಬ ನಿರೀಕ್ಷೆಯೂ ಅವರಿಗಿರುತ್ತದೆ. ಎರಡೂ ಸೇನೆಗಳ ಮಹಾನಿರ್ದೇಶಕರ ನಡುವೆ ಶೀಘ್ರವೇ ಮಾತುಕತೆ ನಡೆಯಲಿದ್ದು, ಆಗ ಈ ಬಗ್ಗೆ ಸೂಚನೆ ದೊರಕಲಿದೆ.

ಉಫಾ ಸಭೆಯ ನಂತರ ಸಿಕ್ಕಿರುವ ಸೂಚನೆಗಳು ಶುಭದಾಯಕವಾಗಿಲ್ಲ. ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್‌,  ಮುಂಬೈ ದಾಳಿಗೆ ಸಂಬಂಧಿಸಿದಂತೆ ವಿಚಾರಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ವಚನದಿಂದ ಹಿಂದೆ ಸರಿದಿದ್ದಾರೆ. ಹಿಂದೆ ಹೇಳಿದಂತೆ ಪಾಕ್‌ ಸರ್ಕಾರ ವಿಚಾರಣೆ ತ್ವರಿತಗೊಳಿಸಲು ಪುರಾವೆ ನೀಡುವಂತೆ ಕೇಳಿದೆ. ಸತ್ಯ ಏನೆಂದರೆ ಅದು ತನ್ನ ಆಶಯ ಈಡೇರಿಸಿಕೊಳ್ಳಲು ‘ಲಷ್ಕರ್‌–ಏ–ತೈಯಬಾ’ವನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ ಪಾಕ್‌ ಸೇನೆ ಎಂದಿಗೂ ಅದರ ಕೈಬಿಡುವುದಿಲ್ಲ.

ಝಕಿವುರ್‌ ರೆಹಮಾನ್‌ ಲಖ್ವಿ ತರಹದವರಿಗೆ ಶಿಕ್ಷೆ ವಿಧಿಸಲು ಪಾಕ್‌ ಸರ್ಕಾರ ಉತ್ಸುಕವಾಗಿಲ್ಲ ಎಂಬುದು ಅಚ್ಚರಿ ಹುಟ್ಟಿಸುವುದಿಲ್ಲ. ಆತನಿಗೆ ಜಾಮೀನು ದೊರಕಿದ್ದರಲ್ಲಿಯೂ ಆಶ್ಚರ್ಯವಿಲ್ಲ. ಆದರೆ, ತನ್ನ ಬಾಸ್‌ ಹಫೀಜ್‌ ಸಯೀದ್‌ ತರಹ ಲಖ್ವಿ ಮುಕ್ತವಾಗಿ ತಿರುಗಾಡುವಂತಿಲ್ಲ. ಉಫಾ ಹೇಳಿಕೆಯಲ್ಲಿ ಕಾಶ್ಮೀರದ ವಿಚಾರವನ್ನು ನೇರವಾಗಿ ಪ್ರಸ್ತಾಪಿಸಿಲ್ಲ. ಇದೇ ಕಾರಣಕ್ಕೆ ನವಾಜ್‌ ಷರೀಫ್‌ ಅವರನ್ನು ಪಾಕಿಸ್ತಾನದಲ್ಲಿ ಹಿಗ್ಗಾಮುಗ್ಗಾ ಟೀಕಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಜೀಜ್‌, ಕಾಶ್ಮೀರ ವಿಚಾರ ಪ್ರಸ್ತಾಪಿಸಲಾಗುವುದು ಎಂದಿದ್ದಾರೆ.

ಎಲ್ಲ ವಿವಾದಾತ್ಮಕ ಅಂಶಗಳನ್ನು ಚರ್ಚಿಸಲು ಉಭಯ ಪ್ರಧಾನಿಗಳು ಸಿದ್ಧರಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಹಜವಾಗಿ ಅದು ಕಾಶ್ಮೀರ ವಿಚಾರವನ್ನು  ಒಳಗೊಂಡಿರುತ್ತದೆ. ಈ ವಿವಾದಾತ್ಮಕ ಅಂಶಗಳ ಜತೆ ತಳಕು ಹಾಕಿಕೊಂಡಿರುವ ಶಾಂತಿ ಮತ್ತು ಅಭಿವೃದ್ಧಿಯ ವಿಷಯಗಳನ್ನು ಚರ್ಚಿಸಲಾಗುವುದು ಎಂದೂ ಪರೋಕ್ಷವಾಗಿ ಹೇಳಲಾಗಿದೆ. ಇದು ಪಾಕಿಸ್ತಾನದ ಮಾಮೂಲಿ ನಿಲುವು. ಅದರ ಸೈನಿಕರು ಗಡಿಯಲ್ಲಿ ಭಾರತೀಯ ಮಹಿಳೆಯನ್ನು ಕೊಂದಿದ್ದಾರೆ. ಕಳೆದ ವರ್ಷ ಇಂತಹ ದಾಳಿಗೆ ಕಠಿಣವಾಗಿ ಪ್ರತಿಕ್ರಿಯಿಸುವಂತೆ ಭಾರತೀಯ ಪಡೆಗಳಿಗೆ ನಿರ್ದೇಶಿಸಲಾಗಿತ್ತು. ಆದರೆ, ಈಗ ಸೈನಿಕರಿಗೆ ಬೇರೆ ರೀತಿ ಸೂಚನೆ ನೀಡಲಾಗಿದೆ. ಪಾಕ್‌ ಎಲ್ಲಿ ದಾಳಿ ನಡೆಸುತ್ತಿದೆಯೋ ಅಲ್ಲಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಲು ಹೇಳಲಾಗಿದೆ.

ಭಾರತ, ಉಫಾ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವ ಆಶಯ ಹೊಂದಿದೆ. ಆದರೆ, ಪಾಕಿಸ್ತಾನದ ಸೇನಾಧಿಕಾರಿಗಳು ಈ ಪ್ರಕ್ರಿಯೆಗೆ ಅಷ್ಟೊಂದು ಬದ್ಧರಾಗಿಲ್ಲ. ಉಫಾ ಸಭೆಯಲ್ಲಿ ಉಭಯ ರಾಷ್ಟ್ರಗಳ ವಶದಲ್ಲಿರುವ ಮೀನುಗಾರರನ್ನು ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಇದೊಂದು ಒಳ್ಳೆಯ ನಿರ್ಧಾರ. ಅಲ್ಲದೆ ಪಾಕ್‌ ವಶದಲ್ಲಿರುವ ಬಹುತೇಕ ಮೀನುಗಾರರು ಗುಜರಾತ್‌ ರಾಜ್ಯಕ್ಕೆ ಸೇರಿದವರಾಗಿದ್ದರಿಂದ ಪ್ರಧಾನಿ ಮೋದಿ ಅವರಿಗೆ ಈ ವಿಚಾರ ಬಹುಪ್ರಿಯವಾಗಿದೆ.  ಆದರೆ ಮೀನುಗಾರರು, ಕೈದಿಗಳು ಹಾಗೂ  ಅರಿವಿಲ್ಲದೇ ಗಡಿ ದಾಟುವರರ ಸಮಸ್ಯೆ ಬಗೆಹರಿಸಲು ಶಾಶ್ವತ ಪರಿಹಾರ ರೂಪಿಸಬೇಕಾದ ಅಗತ್ಯವಿದೆ. ಉಭಯ ದೇಶಗಳ ಮಾನವ ಹಕ್ಕುಗಳ ಆಯೋಗಕ್ಕೆ ಈ ವಿಚಾರವನ್ನು ಒಪ್ಪಿಸುವ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಬಹುದಾಗಿದೆ.

ವಿದೇಶ ಪ್ರವಾಸಕ್ಕೆ ತೆರಳಿದಾಗಲೆಲ್ಲ ಸಾಂಸ್ಕೃತಿಕ ಸಂಬಂಧಕ್ಕೆ ಉತ್ತೇಜನ ನೀಡುವ ಮೋದಿ, ದೇವಾಲಯಗಳಿಗೂ ಭೇಟಿ ನೀಡುತ್ತಾರೆ.  ಹಾಗಾಗಿ, ಪಾಕಿಸ್ತಾನದ ಹಿಂದೂ ಯಾತ್ರಾ ಸ್ಥಳಗಳಿಗೆ ಧಾರ್ಮಿಕ ಪ್ರವಾಸಕ್ಕೆ ಉತ್ತೇಜನ ನೀಡುವ ನಿರ್ಧಾರದಲ್ಲಿ ಆಶ್ಚರ್ಯವೇನೂ ಕಾಣುವುದಿಲ್ಲ. ಆದರೆ, ಪಾಕಿಸ್ತಾನದ ಮೂಲಭೂತವಾದಿಗಳು ಹಿಂದೂ ಯಾತ್ರಿಗಳಿಗೆ ಅವಕಾಶ ಮಾಡಿಕೊಡುತ್ತಾರೆಯೇ? ದೇವಾಲಯಗಳ ಜೀರ್ಣೋದ್ಧಾರಕ್ಕೆ ಒಪ್ಪಿಗೆ ನೀಡುತ್ತಾರೆಯೇ ಎಂಬ ಪ್ರಶ್ನೆ ಏಳುತ್ತದೆ.

ಸಿಖ್‌ ಯಾತ್ರಿಗಳಿಗೆ ಕಿರುಕುಳ ನೀಡಲು ಸದಾ ಕಾದಿರುವ ಪಾಕ್‌ ಬೇಹುಗಾರಿಕಾ ಸಂಸ್ಥೆಗಳಿಗೆ ಹಿಂದೂ ಯಾತ್ರಿಗಳು ಬೃಹತ್‌ ಸಂಖ್ಯೆಯಲ್ಲಿ ಬರುವುದು ಪಥ್ಯವಾಗಲಿಕ್ಕಿಲ್ಲ. ಮೋದಿ ಈ ಹಿಂದೆ ಸ್ಪಷ್ಟ ಗೆರೆ ಎಳೆದು ಪಾಕಿಸ್ತಾನಕ್ಕೆ ಅದರ ಮಿತಿಯನ್ನು ತೋರಿಸಿಕೊಟ್ಟಿದ್ದರು.  ಕಾಶ್ಮೀರ ವಿಚಾರದಲ್ಲಿ ಹುರಿಯತ್‌ ಕಾನ್ಫರೆನ್ಸ್‌ ಅನ್ನು ಮೂರನೇ ಬಣವಾಗಿ ಪರಿಗಣಿಸುತ್ತಿರುವ, ಭಾರತ– ಪಾಕ್‌ ಮಾತುಕತೆಗೆ ಮುನ್ನ ಅವರ ಸಲಹೆ ಕೇಳುವ ಹಾಗೂ ಮಾತುಕತೆಯ ನಂತರ  ಅವರಿಗೆ ಮಾತುಕತೆಯ ಮಾಹಿತಿ ನೀಡುವ ಪಾಕ್‌ಗೆ ತಕ್ಕ ಪಾಠ ಕಲಿಸಲಾಗಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂದಿನ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಇಸ್ಲಾಮಾಬಾದ್‌ಗೆ ಭೇಟಿ ನೀಡಬೇಕಿತ್ತು. ಇದಕ್ಕೂ ಮುನ್ನ ದೆಹಲಿಯಲ್ಲಿರುವ ಪಾಕಿಸ್ತಾನದ ಹೈ ಕಮಿಷನರ್‌ ಹುರಿಯತ್‌ ನಾಯಕರನ್ನು ಭೇಟಿಯಾದ ಕಾರಣಕ್ಕೆ ಆ ಭೇಟಿಯನ್ನು ಭಾರತ ದಿಢೀರನೆ ರದ್ದುಗೊಳಿಸಿತ್ತು. ಆದರೆ, ಭಾರತ ಎಳೆದಿದ್ದ ಆ ಗೆರೆ ಈಗ ಮಸುಕಾದಂತೆ ಕಾಣುತ್ತಿದೆ. ದೊಡ್ಡ ದೇಶಗಳು ತಾವೇ ಹಾಕಿದ್ದ ಷರತ್ತುಗಳನ್ನು ಕಡೆಗಣಿಸಿದಾಗ ಅವುಗಳ ವಿಶ್ವಾಸಾರ್ಹತೆಗೆ ಭಂಗ ಬರುತ್ತದೆ. ಗೊಂದಲ ಹಾಗೂ ಚಂಚಲ ನಿಲುವು ಪಾಕಿಸ್ತಾನ ಕುರಿತ ನೀತಿಗೆ ಉತ್ತಮ ಆಧಾರವಾಗಲಾರದು ಎಂಬುದನ್ನು ಮೋದಿ ಅರಿಯುವರೇ?

ಉಫಾ ಹೇಳಿಕೆಯಲ್ಲಿ ಪ್ರಕಟಿಸಿದ್ದಕ್ಕಿಂತ ಹೆಚ್ಚಿನ ಯಾವುದೇ ಅಂಶಗಳಿಗೆ ಭಾರತ ಸಮ್ಮತಿ ಸೂಚಿಸಿಲ್ಲ ಎಂದು ನಮ್ಮ  ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಾರೆ. ಇದು ಸತ್ಯವಾಗಿರುವಂತೆ ಕಾಣುತ್ತದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತೆರೆಮರೆಯ ಮಾತುಕತೆ ಆರಂಭಿಸಲು ಒಪ್ಪಿಕೊಳ್ಳಲಾಗಿದೆ ಎಂದು ಪಾಕ್‌ ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್‌ ಹೇಳಿರುವುದರಿಂದ ಈ ಬಗ್ಗೆ ಭಾರತ ತನ್ನ ನಿಲುವು ಸ್ಪಷ್ಟಪಡಿಸುವುದು ಅಗತ್ಯ.

ಸದ್ಯಕ್ಕೆ ಭಾರತ ಪೂರ್ಣ ಪ್ರಮಾಣದ ಮಾತುಕತೆಗೆ ಸಿದ್ಧವಾಗಿರುವಂತೆ ಕಾಣುತ್ತಿಲ್ಲ. ಆದರೆ, ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳಿಗಷ್ಟೇ ಬದ್ಧವಾಗಿದೆ. ಪಾಕಿಸ್ತಾನ ಮಾತುಕತೆಯಲ್ಲಿ ಇತರ ವಿಚಾರಗಳನ್ನು ಪ್ರಸ್ತಾಪಿಸಲು ಯತ್ನಿಸಬಹುದು. ಆದರೆ, ಭಾರತ ಅಂತಹ ಯತ್ನಗಳನ್ನು ವಿರೋಧಿಸಬೇಕು. 
ಸಹಕಾರ ತತ್ವದ ಅಡಿ ಸಂಬಂಧ ಬೆಳೆಸಲು ಪಾಕಿಸ್ತಾನ ಆಸಕ್ತಿ ತೋರುತ್ತಿಲ್ಲ. ಅದರ ಬದಲು ವಿವಾದಾತ್ಮಕವಾದ ಕಾಶ್ಮೀರ  ವಿಚಾರ ಚರ್ಚಿಸಲು ಅದು ಉತ್ಸುಕವಾಗಿರುತ್ತದೆ. ಅದರ ಈ ಗೀಳು ಎಂದಿಗೂ ಬದಲಾಗದು.
*
ವಿಭಜನೆಯ ಹಾದಿ...
• 1906: ಢಾಕಾದಲ್ಲಿ  ಅಖಿಲ ಭಾರತ ಮುಸ್ಲಿಂ ಲೀಗ್ ಅಸ್ತಿತ್ವಕ್ಕೆ. ಆಲಂ ಇಕ್ಬಾಲ್‌ ಅವರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ.

• 1940: ಮುಸ್ಲಿಂ ಲೀಗ್‌ನ ಲಾಹೋರ್ ಅಧಿವೇಶನದಲ್ಲಿ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟ ಮೊಹಮ್ಮದ್‌ ಅಲಿ ಜಿನ್ನಾ. ಕಾಂಗ್ರೆಸ್‌ ವಿರೋಧ.
• 1946 ಆಗಸ್ಟ್ :  ಕೋಲ್ಕತ್ತದಲ್ಲಿ ಹಿಂದೂ–ಮುಸ್ಲಿಮರ ಘರ್ಷಣೆ. ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಿ ಜಿನ್ನಾ ಅವರು ಘೋಷಿಸಿದ್ದ ‘ಡೈರೆಕ್ಟ್ ಆ್ಯಕ್ಷನ್ ಡೇ’ (ನೇರ ಕಾರ್ಯಾಚರಣೆ) ಸಂದರ್ಭದಲ್ಲಿ 5೦೦೦ ಜನರ ಬಲಿ. ದೇಶ ವಿಭಜನೆ ಕೂಗು ತಾರಕಕ್ಕೆ.
• 1947 ಫೆಬ್ರುವರಿ:  ವೈಸ್‌ರಾಯ್‌ ಲಾರ್ಡ್‌ ವಾವೆಲ್‌ ಅವರಿಂದ ಸ್ಥೂಲ ಗಡಿ ರೇಖೆ ವಿನ್ಯಾಸ 
• 1947  ಜೂನ್ 3:  ಭಾರತ ವಿಭಜನೆ ಘೋಷಿಸಿದ ಗವರ್‍ನರ್ ಜನರಲ್ ಲಾರ್ಡ್ ಮೌಂಟ್‌ ಬ್ಯಾಟನ್.
•  1947 ಜುಲೈ 18: ಬ್ರಿಟನ್‌ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರ್ಯ ಕಾಯ್ದೆ ಜಾರಿ. 
• 1947  ಆಗಸ್ಟ್‌ 15 : ಭಾರತದ ಸ್ವಾತ್ರಂತ್ರ್ಯ ಕಾಯ್ದೆ ಅನ್ವಯ ದೇಶ ಇಬ್ಭಾಗ.  ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನಗಳ (ಬಾಂಗ್ಲಾದೇಶ) ಉದಯ. ಭಾರತ  ಸ್ವತಂತ್ರ ರಾಷ್ಟ್ರವಾಗಿ ಘೋಷಣೆ. 
• ಪ್ರಧಾನಿಯಾಗಿ ಜವಾಹರ ಲಾಲ್ ನೆಹರೂ ರೇಡಿಯೊದಲ್ಲಿ ‘ಟ್ರಿಸ್ಟ್ ವಿಥ್ ಡೆಸ್ಟಿನಿ’ ಐತಿಹಾಸಿಕ ಭಾಷಣ.
• 1947: ವಿಭಜನೆ ನಂತರ ಜನರ ವಲಸೆ ಆರಂಭ. ಭಾರತದಿಂದ 72 ಲಕ್ಷ ಮುಸ್ಲಿಮರು ಪಾಕ್‌ಗೆ, 72 ಲಕ್ಷ ಹಿಂದೂಗಳು, ಸಿಖ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ.  ಲಕ್ಷಾಂತರ ಜನರ ಮಾರಣಹೋಮ.
• ಗಡಿ ಗುರುತಿಸಲು ಬ್ರಿಟಿಷ್ ಸರ್ಕಾರದಿಂದ ಸಿರಿಲ್ ರಾಡ್‌ಕ್ಲಿಫ್ ನಿಯೋಜನೆ. ರಾಡ್‌ಕ್ಲಿಫ್‌ ರೇಖೆ ಭಾರತ– ಪಾಕ್‌ ನಡುವಣ ಗಡಿ ರೇಖೆಯಾಯಿತು. ಭಾರತ ಒಕ್ಕೂಟಕ್ಕೆ ಜುನಾಗಡ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್ ಸಂಸ್ಥಾನ ಸೇರಿ 562 ಸಂಸ್ಥಾನಗಳ ಸೇರ್ಪಡೆ ಕಾರ್ಯ ಆರಂಭ.
*
ಚುಕ್ಕಾಣಿ ಹಿಡಿದ ವಲಸಿಗ ನಾಯಕರು


ದೇಶ ವಿಭಜನೆ ಸಂದರ್ಭದಲ್ಲಿ ವಲಸೆಗೆ ಮುಂದಾದವರು ಭಾರತ– ಪಾಕಿಸ್ತಾನದ  ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಪಶ್ಚಿಮ ಪಂಜಾಬಿನ ಸಿಖ್ ಕುಟುಂಬಕ್ಕೆ ಸೇರಿದ್ದರೆ, ಇಂದ್ರ ಕುಮಾರ್ ಗುಜ್ರಾಲ್ ಪಾಕಿಸ್ತಾನದ ಝೇಲಂ ನಗರದಲ್ಲಿ ಹುಟ್ಟಿದ ಪಂಜಾಬಿ ಹಿಂದೂ. ಅವರ ಕುಟುಂಬಗಳು ಸ್ವಾತಂತ್ರ್ಯಾ ನಂತರ ಭಾರತಕ್ಕೆ ವಲಸೆ ಬಂದಿದ್ದವು. ಬಿಜೆಪಿ ನಾಯಕ ಅಡ್ವಾಣಿ ಕರಾಚಿ ನಗರದಲ್ಲಿ ಜನಿಸಿದ ಸಿಂಧಿ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಪೂರ್ವ ಬಂಗಾಳದಿಂದ ವಲಸೆ ಬಂದ ಕುಟುಂಬಕ್ಕೆ ಸೇರಿದವರು. ಪಾಕ್‌ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ದೆಹಲಿಯ ದರಿಯಾ ಗಂಜ್ ಪ್ರದೇಶದಲ್ಲಿ ಜನಿಸಿದವರು. ಪಾಕಿಸ್ತಾನದ ಪ್ರಥಮ ಪ್ರಧಾನಿ ಲಿಯಾಕತ್ ಅಲಿ ಖಾನ್ ಹರಿಯಾಣದ ಕರ್ನಾಲ್‌ನಲ್ಲಿ ಹುಟ್ಟಿದವರು. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳಿಂದ ಹೋದವರನ್ನು ಅಲ್ಲಿ ‘ಮುಹಾಜಿರ್’ಗಳು ಎನ್ನುತ್ತಾರೆ. ಆಂತರಿಕ ಸಂಘರ್ಷಕ್ಕೆ ಕಾರಣವಾಗಿರುವ ‘ಮುತ್ತಾಹಿದ ಖ್ವಾಮಿ ಮೂವ್‌ಮೆಂಟ್‌– ಎಂಕ್ಯುಎಂಗೆ (ಹಿಂದಿನ ಮುಹಾಜಿರ್‌ ಖ್ವಾಮಿ ಮೂವ್‌ಮೆಂಟ್‌) ಭಾರತೀಯ ಸೇನೆ, ಬೇಹುಗಾರಿಕೆ ದಳ ‘ರಾ’ ಬೆಂಬಲ ನೀಡುತ್ತಿವೆ ಎಂಬುದು ಪಾಕ್‌ ಆರೋಪ.
*
ಸಮರ ಮೀರಿ ಬೆಳೆದ ಕ್ರಿಕೆಟ್‌

ADVERTISEMENT

ಭಾರತ ಹಾಗೂ ಪಾಕಿಸ್ತಾನದ  ಸಂಬಂಧದಲ್ಲಿ ಕ್ರಿಕೆಟ್‌ನ ಪಾತ್ರ ಪ್ರಮುಖವಾದುದು
1987: ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಪಾಕ್‌ ಪ್ರಧಾನಿ ಜಿಯಾ ಉಲ್ ಹಕ್, ಮೊಹಾಲಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದರು. ಆ ಮೂಲಕ ಎರಡು ರಾಷ್ಟ್ರಗಳ ನಡುವಿನ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಯತ್ನಿಸಿದರು.

1989: ಕ್ರಿಕೆಟ್ ಸರಣಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪಯಣ ಬೆಳೆಸಿತು.
1990: ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ  ಪಾಕ್‌ ತರಬೇತಿ ನೀಡುತ್ತಿದೆ ಎಂಬ ಭಾರತದ ಆರೋಪದಿಂದ ಎರಡು ರಾಷ್ಟ್ರಗಳ ನಡುವಿನ ಕ್ರಿಕೆಟ್‌ ಪಂದ್ಯ ಸ್ಥಗಿತ.
1993: ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಿಂದ ಪಾಕ್‌ ಜತೆ ಕ್ರಿಕೆಟ್‌ ಸಂಬಂಧ ಕಡಿದುಕೊಂಡ ಭಾರತ.
1997: ಎಂಟು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡ ಭಾರತ.
1999: ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ನಡುವೆ ಶಾಂತಿಗಾಗಿ ಮಾತುಕತೆ. 1987ರ ನಂತರ ಮೊದಲ ಬಾರಿ ಭಾರತಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡ ಪಾಕ್‌ ತಂಡ
1999: ಕಾರ್ಗಿಲ್‌ ಯುದ್ಧದಿಂದ ಮತ್ತೆ ಹಳಸಿದ ಕ್ರಿಕೆಟ್‌ ಸಂಬಂಧ.
2004: ಪಾಕಿಸ್ತಾನಕ್ಕೆ 1989ರ ನಂತರ ಮೊದಲ ಬಾರಿಗೆ ಕ್ರಿಕೆಟ್ ಪ್ರವಾಸ ಕೈಗೊಂಡ ಭಾರತ. ‘ಸೌಹಾರ್ದ ಸರಣಿ’ ಎಂದು ಇದನ್ನು ಕರೆಯಲಾಯಿತು.
2005: ಭಾರತಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡ ಪಾಕ್‌ ತಂಡ.  ಪಂದ್ಯ ವೀಕ್ಷಿಸಲು ಪಾಕ್‌ ಅಧ್ಯಕ್ಷ ಪರ್ವೇಜ್ ಮುಷರಫ್‌ ಅವರನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮನಮೋಹನ್ ಸಿಂಗ್.
2006: ಭಾರತ ತಂಡದಿಂದ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ.
2008: ಪಾಕ್‌ ಭಯೋತ್ಪಾದಕರಿಂದ ಮುಂಬೈಯಲ್ಲಿ ನರಮೇಧ.  ಮುರಿದುಬಿದ್ದ  ಸಂಬಂಧ
2011: ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಗಿಲಾನಿ ಅವರಿಗೆ ಮನಮೋಹನ್ ಸಿಂಗ್ ಆಹ್ವಾನ.
*

ನಾಲ್ಕು ದಾಯಾದಿ ಕಲಹ
ವಿಭಜನೆಯ ನಂತರ ಅಸ್ತಿತ್ವಕ್ಕೆ ಬಂದ ಭಾರತ ಮತ್ತು ಪಾಕಿಸ್ತಾನ ನಾಲ್ಕು ಯುದ್ಧಗಳನ್ನು ಸೆಣಸಿವೆ.
•  1947–48: ಪ್ರಥಮ ಕಾಶ್ಮೀರ ಕದನ.  ಕಾಶ್ಮೀರ ವಶಪಡಿಸಿಕೊಳ್ಳಲು ಪಾಕ್‌ ದಾಳಿ. ಭಾರತೀಯ ಸೇನೆ ಈ ದಾಳಿಯನ್ನು ಹಿಮ್ಮೆಟ್ಟಿಸಿತು.

•  1965: ಭಾರತ-ಪಾಕಿಸ್ತಾನ ದ್ವಿತೀಯ ಕಾಶ್ಮೀರ ಯುದ್ಧ.
•  ಕಾಶ್ಮೀರದ ವಿಲೀನ ಪ್ರಶ್ನಿಸಿ ವಿಶ್ವಸಂಸ್ಥೆಯಲ್ಲಿ ಪಾಕ್‌ ದಾವೆ.
•  ಯುದ್ಧ ಸ್ಥಗಿತಕ್ಕೆ ವಿಶ್ವಸಂಸ್ಥೆ ಆದೇಶ. ಕೆಲ ಭಾಗ ಪಾಕಿಸ್ತಾನದ ವಶಕ್ಕೆ. ಇದೇ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)
•  1971 ಡಿಸೆಂಬರ್‌ 3:  ಬಾಂಗ್ಲಾ ವಿಮೋಚನೆ ಯುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾಯಿತು.
• ಯುದ್ಧ ಆರಂಭವಾಗಿ ಎರಡು ವಾರ ತುಂಬುವ ಮೊದಲೇ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗುಬಡಿಯಿತು. ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಝಿ 1971, ಡಿಸೆಂಬರ್ 16ರಂದು ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಬಾಂಗ್ಲಾದೇಶ ಸೃಷ್ಟಿಯಾಯಿತು. ಈ ಯುದ್ಧ ಜಾಗತಿಕ ಮಟ್ಟದಲ್ಲಿ ಭಾರತದ ಘನತೆಯನ್ನೂ ಹೆಚ್ಚಿಸಿತು.
•  ಪಾಕಿಸ್ತಾನದ 93 ಸಾವಿರ ಸೈನಿಕರು ಯುದ್ಧ ಕೈದಿಗಳಾಗಿ ವಶ. ಅಮೆರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಮಧ್ಯಪ್ರವೇಶ. ಭಾರತದಿಂದ ಕದನ ವಿರಾಮ ಘೋಷಣೆ.  ಶಿಮ್ಲಾ ಒಪ್ಪಂದಕ್ಕೆ ಉಭಯ ರಾಷ್ಟ್ರಗಳಿಂದ ಸಹಿ. 
• 1974: ಪೋಖ್ರಾನ್‌ನಲ್ಲಿ ಇಂದಿರಾಗಾಂಧಿ ಸರ್ಕಾರದಿಂದ ಮೊದಲ ಅಣ್ವಸ್ತ್ರ  ಪರೀಕ್ಷೆ.
• 1992: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದ ಮತ್ತೆ ವೈಮನಸ್ಸು.
• 1993: ಮುಂಬಯಿಯಲ್ಲಿ ಸರಣಿ ಸ್ಫೋಟ. 250ಕ್ಕೂ ಹೆಚ್ಚು ಜನರ ಸಾವು. ಪಾಕಿಸ್ತಾನದ ಕೈವಾಡ ಎಂದು ಭಾರತ ಟೀಕೆ.
•  1998:  ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಿಂದ ಪೋಖ್ರಾನ್‌ನಲ್ಲಿ ಎರಡನೇ ಅಣ್ವಸ್ತ್ರ  ಪರೀಕ್ಷೆ.  ಇದಕ್ಕೆ ಪ್ರತಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಸೆಡ್ಡು ಹೊಡೆದ ಪಾಕ್‌.  ಮತ್ತೆ ಉದ್ವಿಗ್ನ ಪರಿಸ್ಥಿತಿ.
•   1999: ಲಾಹೋರ್ ಘೋಷಣೆಗೆ ಉಭಯ ರಾಷ್ಟ್ರಗಳ ಅಂಕಿತ.  ಕಾಶ್ಮೀರ ಸಂಘರ್ಷಕ್ಕೆ ಶಾಂತಿಯುತ, ದ್ವಿಪಕ್ಷೀಯ ಪರಿಹಾರ ಕಂಡುಕೊಳ್ಳುವ ಭರವಸೆ. ಸೌಹಾರ್ದದ ಪ್ರತೀಕವಾಗಿ ಲಾಹೋರ್‌ಗೆ ನೇರ ಬಸ್ ಸಂಚಾರ.
•  1998-1999: ‘ಆಪರೇಷನ್  ಬದರ್‌’ ಮೂಲಕ ಚಳಿಗಾಲದಲ್ಲಿ ಪಾಕಿಸ್ತಾನದ ಸೇನೆ ಭಯೋತ್ಪಾದಕರಿಗೆ ತರಬೇತಿ ನೀಡಿ ಭಾರತದೊಳಗೆ ನುಸುಳಿಸಿತು.
•  1999: ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ನಡುವೆ ಶಾಂತಿಗಾಗಿ ಮಾತುಕತೆ.
• 1999: ಕಾರ್ಗಿಲ್ ಯುದ್ಧ. ಮತ್ತೆ ಕವಿದ ಕಾರ್ಮೋಡ.  ಕಡಿದಾದ ಹಿಮಾಚ್ಛಾದಿತ  ಕಾರ್ಗಿಲ್‌ ಪರ್ವತದಲ್ಲಿ ಮೂರು ತಿಂಗಳು ನಡೆದ ಕಾರ್ಗಿಲ್‌ ಯುದ್ಧ.  ಏಸಿಯಾನ್ ಪ್ರಾದೇಶಿಕ ವೇದಿಕೆ, ಜಿ–8 ರಾಷ್ಟ್ರಗಳು ಭಾರತದ ನಿಲುವನ್ನು ಬೆಂಬಲಿಸಿದವು. ಐರೋಪ್ಯ ಒಕ್ಕೂಟವೂ ಪಾಕಿಸ್ತಾನದ ನೀತಿಯನ್ನು ವಿರೋಧಿಸಿತು.
•  2001: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಾಜಪೇಯಿ ಹಾಗೂ ಪರ್ವೇಜ್ ಮುಷರಫ್‌ ನಡುವೆ ಆಗ್ರಾದಲ್ಲಿ ಮಾತುಕತೆ ವಿಫಲ.
•   2005 ಜನವರಿ: ಪಾಕ್‌ಗೆ ಭೇಟಿ ನೀಡಿದ್ದ ಬಿಜೆಪಿ ಧುರೀಣ ಎಲ್‌.ಕೆ.ಅಡ್ವಾಣಿ ಅವರು ಮಹಮ್ಮದ್‌ ಅಲಿ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸುವ ಮೂಲಕ ಪಕ್ಷದಲ್ಲಿಯೇ ಪೇಚಿಗೆ ಸಿಲುಕಿದರು.
•  2013: ಪಾಕ್‌ ಯೋಧರಿಂದ ಭಾರತೀಯ ಯೋಧನ ಶಿರಚ್ಛೇದ.  ಮತ್ತೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ.  
•  2014 ಮೇ 26: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾದ ಪಾಕ್‌ ಅಧ್ಯಕ್ಷ ನವಾಜ್‌ ಷರೀಫ್‌. ಪರಸ್ಪರ ಕೊಡುಗೆ ವಿನಿಮಯ
• 2015: ಮುರಿದುಬಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆ.  ಸಾರ್ಕ್‌ ಶೃಂಗಸಭೆಯಲ್ಲಿ ಬಿಗುಮಾನ ಪ್ರದರ್ಶಿಸಿದ ಮೋದಿ–ಷರೀಫ್‌.

ಮಾಹಿತಿ ಸಂಗ್ರಹ: ಗವಿ ಬ್ಯಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.