ADVERTISEMENT

ಆತ್ಮವಿಶ್ವಾಸಕ್ಕೆ ಪೆಟ್ಟು

ಅಂತರಾಳ

ಗವಿ ಬ್ಯಾಳಿ
Published 7 ಜನವರಿ 2017, 6:54 IST
Last Updated 7 ಜನವರಿ 2017, 6:54 IST
ಆತ್ಮವಿಶ್ವಾಸಕ್ಕೆ ಪೆಟ್ಟು
ಆತ್ಮವಿಶ್ವಾಸಕ್ಕೆ ಪೆಟ್ಟು   
ಖಾಸಗಿ  ವಲಯದ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಿದ್ದ ಕನ್ನಡಿಗರಿಗೆ ರಾಜ್ಯ ಸರ್ಕಾರದ ನಿರ್ಧಾರ ಸಹಜವಾಗಿ ಸಂತಸ ತಂದಿದೆ. ಆದರೆ, ಉದ್ಯಮ ವಲಯದಲ್ಲಿ ಮಾತ್ರ ಆತಂಕ ಆವರಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವರ್ಷಾಂತ್ಯಕ್ಕೆ ಕನ್ನಡಿಗರಿಗೆ ನೀಡಿದ ಶುಭ ಸುದ್ದಿ ಸಂಭ್ರಮದ ಜತೆಗೆ ಚರ್ಚೆಗೂ ಕಾರಣವಾಗಿದೆ. ‘ಕೌಶಲ’ದ ಕೊರತೆ ನೆಪ ಮುಂದಿಟ್ಟುಕೊಂಡು ಉದ್ಯಮವು ಸರ್ಕಾರದ ನಿರ್ಧಾರದ ವಿರುದ್ಧ ಹರಿಹಾಯುತ್ತಿದ್ದರೆ, ಕಾರ್ಮಿಕ ವಲಯವು ಈ ನಿರ್ಧಾರದ ಸಮರ್ಥನೆಗೆ ನಿಂತಿದೆ. 
 
ಮಾಹಿತಿ ತಂತ್ರಜ್ಞಾನ (ಐ.ಟಿ),  ಜೈವಿಕ ತಂತ್ರಜ್ಞಾನ (ಬಿ.ಟಿ) ಹೊರತುಪಡಿಸಿ ಉಳಿದ ಎಲ್ಲ ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿ ನೀಡುವ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರ ಹಲವು ಹೊಸ ವಾಖ್ಯಾನ, ವಿರೋಧಗಳನ್ನು ಹುಟ್ಟು ಹಾಕಿದೆ. ನಿಯಮ ಪಾಲಿಸದಿದ್ದರೆ  ಕೈಗಾರಿಕೆಗಳಿಗೆ ನೀಡುವ ಸಬ್ಸಿಡಿ ಹಾಗೂ ಇನ್ನಿತರ ಸಹಾಯ, ಸೌಲಭ್ಯಗಳಿಗೆ ಕತ್ತರಿ ಹಾಕುವುದಾಗಿ  ಸರ್ಕಾರ ಹೇಳಿರುವುದು ಉದ್ಯಮಗಳ ಮುನಿಸಿಗೆ ಕಾರಣವಾಗಿದೆ. ಸರ್ಕಾರ ಈ ರೀತಿ ಬೆದರಿಕೆ ಒಡ್ಡುವ ಮೂಲಕ ಅರ್ಹ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವ ಖಾಸಗಿ ವಲಯದ ಸ್ವಾತಂತ್ರ್ಯ ಕಸಿಯಲು ಯತ್ನಿಸುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.   
 
ತಂತ್ರಜ್ಞಾನದಿಂದ ಇಡೀ ವಿಶ್ವವೇ ಒಂದು ಜಾಗತಿಕ ಹಳ್ಳಿಯಾಗಿ ಪರಿವರ್ತನೆಯಾಗಿರುವ  ಕಾಲಘಟ್ಟದಲ್ಲಿ  ಉದ್ಯೋಗದಲ್ಲಿ ಮೀಸಲಾತಿಯ ಪ್ರಸ್ತಾಪ ಮಾಡುವುದೇ ಅಪ್ರಸ್ತುತ. ಖಾಸಗಿ ವಲಯದಲ್ಲಿ ಕೌಶಲ, ಪ್ರತಿಭೆ, ಅನುಭವ ಆಧರಿಸಿ ಉದ್ಯೋಗ ನೀಡಲಾಗುತ್ತದೆಯೇ ಹೊರತು ಭಾಷೆ, ಜಾತಿ, ಧರ್ಮ, ಬಣ್ಣ, ಪ್ರದೇಶ ಆಧರಿಸಿ ನೀಡಲಾಗದು ಎನ್ನುವುದು ಉದ್ಯಮಿಗಳ ನಿಲುವು. ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು ಎನ್ನುವ ಪ್ರಸ್ತಾಪ  ಸಂವಿಧಾನದಲ್ಲಿ ಎಲ್ಲಿಯೂ ಇಲ್ಲ. ಆದರೂ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಹೊರಟಿರುವುದು ಅವಾಸ್ತವಿಕ ಎನ್ನುವುದು ಕೈಗಾರಿಕಾ ಮತ್ತು ವಾಣಿಜ್ಯ ಸಂಘ, ಸಂಸ್ಥೆಗಳ ವಾದ.   
‘ಡ್ರೈವಿಂಗ್‌ ಗೊತ್ತಿಲ್ಲದವರನ್ನು ಚಾಲಕರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸಾಧ್ಯವೇ’ ಎನ್ನುವ ಒಂದೇ ಸಾಲಿನ ಪ್ರಶ್ನೆಯ ಮೂಲಕ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎಂ.ಸಿ.ದಿನೇಶ್‌ ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ‘ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಲಯದಲ್ಲಿ ಸಾಕಷ್ಟು ಕೆಲಸಗಳು ಇನ್ನೂ ಖಾಲಿ  ಉಳಿದಿವೆ. ಎಲ್ಲ ಕಾರ್ಖಾನೆ ಮತ್ತು ಕಂಪೆನಿಗಳ ಎದುರು ‘ಬೇಕಾಗಿದ್ದಾರೆ’ ಎಂಬ ಫಲಕಗಳು ನೇತಾಡುತ್ತಿವೆ. ಕನ್ನಡಿಗರಿಗೆ ಮಾತ್ರವಲ್ಲ, ಎಲ್ಲ ಭಾಷಿಕರಿಗೂ ಕೊಡುವಷ್ಟು ಉದ್ಯೋಗಗಳಿವೆ. ಕೆಲಸಕ್ಕೆ ಬೇಕಾದ ವೃತ್ತಿ ಕೌಶಲ, ಅನುಭವವುಳ್ಳ ಅಭ್ಯರ್ಥಿಗಳು ಸಿಗುತ್ತಿಲ್ಲ.  ಅರ್ಹ ಅಭ್ಯರ್ಥಿಗಳಿದ್ದರೆ ಶೇ 100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಲು ಸಿದ್ಧ. ಆದರೆ, ವಾಸ್ತವದಲ್ಲಿ ಇದು ಅಸಾಧ್ಯ’ ಎನ್ನುವುದು ಅವರ ಕೊರಗು. 
 
‘ಮೂಲಸೌಕರ್ಯ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕೆಲಸಗಳನ್ನು ಮಾಡಲು ಸ್ಥಳೀಯರು ತಯಾರಿಲ್ಲ. ಕನ್ನಡಿಗರು ಕೇವಲ ಮಾಲ್‌, ಎಟಿಎಂ  ಗಾರ್ಡ್‌ ಕೆಲಸಗಳಿಗೆ ಸೇರುತ್ತಿದ್ದಾರೆ. ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಿ ಎಂದು ಹೇಳುವ ಬದಲು ಆದ್ಯತೆ ನೀಡಿ ಎಂದು ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳಬೇಕು. ಐ.ಟಿ– ಬಿ.ಟಿ.ಯಂಥ ಬೃಹತ್‌ ಕ್ಷೇತ್ರಗಳನ್ನು ಪ್ರಶ್ನಿಸುವ ಧೈರ್ಯ ಸರ್ಕಾರಕ್ಕೆ ಏಕೆ ಇಲ್ಲ’ ಎಂದು ಪ್ರಶ್ನಿಸುತ್ತಾರೆ. 
 
‘ಉಳಿದ ರಾಜ್ಯಗಳು ಕರ್ನಾಟಕದ ಮಾದರಿಯನ್ನೇ ಅನುಸರಿಸಿದರೆ  ಅಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಗತಿ ಏನು? ಮುಂದೊಂದು ದಿನ ಕೆಲಸ ಅರಸಿ ಇನ್ನಿತರ ರಾಜ್ಯಗಳಿಗೆ  ವಲಸೆ ಹೋಗುವುದು ಕಷ್ಟವಾಗಲಿದೆ. ಇದರಿಂದ ದೇಶದ ಒಳಗೆ ಪ್ರತ್ಯೇಕ ದೇಶಗಳ ನಿರ್ಮಾಣವಾಗುತ್ತದೆ. ಬಿಹಾರ, ಪಶ್ಚಿಮ ಬಂಗಾಳ ಸರ್ಕಾರಗಳು ಒಳ್ಳೆಯ ಅವಕಾಶ ನೀಡುತ್ತಿರುವ ಕಾರಣ ಅಲ್ಲಿಯ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳುತ್ತಿದ್ದಾರೆ. ಮುಂದೆ ಕೆಲಸಕ್ಕೆ ಕಾರ್ಮಿಕರೇ ಸಿಗದ ಸ್ಥಿತಿ ನಿರ್ಮಾಣವಾಗಲಿದೆ. ಮೀಸಲಾತಿ ಅಡಿ ಉದ್ಯೋಗ ಪಡೆದವರು ನಿರೀಕ್ಷೆಯಂತೆ ಕೆಲಸ ಮಾಡದಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ’ ಎಂದು ‘ಕಾಸಿಯಾ’ ಅಧ್ಯಕ್ಷ ಪದ್ಮನಾಭ ಪ್ರಶ್ನಿಸುತ್ತಾರೆ.
 
‘ಸರ್ಕಾರ ಖಾಸಗಿ ವಲಯಗಳಿಗೆ  ಸೌಲಭ್ಯ, ಸಬ್ಸಿಡಿ ನೀಡುವುದಕ್ಕಿಂತ ಹೆಚ್ಚಿನ ವರಮಾನವನ್ನು ಮರಳಿ ಅವುಗಳಿಂದ  ಪಡೆಯುತ್ತಿದೆ. ಕೃಷಿಯ ನಂತರ ಅತಿಹೆಚ್ಚು ಉದ್ಯೋಗಗಳನ್ನು  ಸಣ್ಣ , ಅತಿಸಣ್ಣ ಕೈಗಾರಿಕೆಗಳು ನೀಡಿವೆ.  ಸ್ಥಳೀಯರನ್ನು ಮೆಚ್ಚಿಸುವ ಸರ್ಕಾರದ ಈ ರಾಜಕೀಯ ನಿರ್ಧಾರದಿಂದ ಕೈಗಾರಿಕೆಗಳ ಆತ್ಮವಿಶ್ವಾಸಕ್ಕೆ ಕೊಡಲಿಪೆಟ್ಟು ಬೀಳಲಿದೆ’ ಎನ್ನುವುದು ಅವರ ಆತಂಕ. 
 
‘ಈಗಾಗಲೇ ಹೆಚ್ಚಿನ ಕಾರ್ಖಾನೆಗಳಲ್ಲಿ  ಶೇ 40ರಿಂದ 60ರಷ್ಟು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಉದ್ಯೋಗ ಕೌಶಲ ಕೇಂದ್ರಗಳನ್ನು ತೆರೆದರೆ ಸಹಜವಾಗಿ ಕನ್ನಡಿಗರಿಗೆ ಬೆಂಗಳೂರಿನಲ್ಲಿನ ಜಾಗತಿಕ ಕಂಪೆನಿಗಳಲ್ಲಿ ಕೆಲಸ ದೊರೆಯುತ್ತದೆ’ ಎನ್ನುವುದು ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಸಿಐಸಿ) ಅಧ್ಯಕ್ಷ ತ್ಯಾಗು ವಳ್ಳಿಯಪ್ಪ ಅಭಿಮತ. 
 
‘ಕರ್ನಾಟಕದ ಆರ್ಥಿಕತೆಗೆ ಬೆಂಗಳೂರೊಂದೇ ಅಂದಾಜು ₹ 5.56 ಲಕ್ಷ ಕೋಟಿ ಪಾಲು ನೀಡುತ್ತಿದೆ. ಬಹುಸಂಸ್ಕೃತಿಯ  ನಗರವಾಗಿ ಬೆಳೆದಿರುವುದರಿಂದಲೇ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿಗೆ ಬರುತ್ತಿವೆ. ಒಂದು ವೇಳೆ ಉದ್ಯೋಗದಲ್ಲಿ ಮೀಸಲಾತಿ ಜಾರಿಯಾದರೆ ಬೆಂಗಳೂರಿನ ಬಹು ಸಂಸ್ಕೃತಿ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಶೇ 12ರಷ್ಟು ಪ್ರಗತಿ ಸಾಧನೆ ಗುರಿ ಹೊಂದಿರುವ ರಾಜ್ಯದ ಹೊಸ ಕೈಗಾರಿಕಾ ನೀತಿಯ ಆಶಯಕ್ಕೆ ಈ ಮೀಸಲಾತಿ ನೀತಿ ವಿರುದ್ಧವಾಗಿದೆ. ಬಂಡವಾಳ ಹೂಡಿಕೆ, ಹೊಸ  ಉದ್ಯಮ ಸ್ಥಾಪನೆಗೆ ಹಿನ್ನಡೆಯಾಗಲಿದೆ’ ಎನ್ನುತ್ತಾರೆ.
 
ಅನ್ಯ ರಾಜ್ಯಗಳ ವಲಸಿಗ ಕೆಲಸಗಾರರು ಕಡಿಮೆ ವೇತನಕ್ಕೆ ಕೆಲಸ ಮಾಡುವುದಷ್ಟೇ ಅಲ್ಲದೆ ರಜೆಗಾಗಿ ಪೀಡಿಸುವುದಿಲ್ಲ. ಕಾರ್ಮಿಕ ಸಂಘಟನೆಯ ಗೋಜಿಗೆ ಹೋಗುವುದಿಲ್ಲ. ಪ್ರತಿಭಟನೆ  ನಡೆಸುವುದಿಲ್ಲ. ದೇಶದ ಯಾವ ಮೂಲೆಯಲ್ಲಿ, ಎಂತಹ ಪರಿಸ್ಥಿತಿಯಲ್ಲಾದರೂ ಕೆಲಸ ಮಾಡುತ್ತಾರೆ ಎಂಬಂತಹ ರಹಸ್ಯ ಒಳಸುಳಿಗಳನ್ನು ಕೆಲವು ಉದ್ಯಮಿಗಳು ಮುಂದಿಟ್ಟರು. 
 
ಐ.ಟಿ., ಬಿ.ಟಿ ವಲಯದಿಂದ ಕನ್ನಡಿಗರಿಗೆ ಯಾವುದೇ ಲಾಭವಾಗಿಲ್ಲ. ಬದಲಾಗಿ ಜನಸಾಮಾನ್ಯರಿಗೆ ಮನೆ ಬಾಡಿಗೆ, ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂಬ ಭಾವನೆ ಸ್ಥಳೀಯರಲ್ಲಿ ಮನೆ ಮಾಡಿದೆ. ‘ದೊಡ್ಡ ಕೈಗಾರಿಕೆಗಳಿಗೆ ಇಲ್ಲಿಯ ನೆಲ, ನೀರು, ಗಾಳಿ, ಬೆಳಕು ಬೇಕು. ಉದ್ಯೋಗಕ್ಕೆ ಮಾತ್ರ ಸ್ಥಳೀಯರು ಬೇಡ. ನಾವೇನು ದೊಡ್ಡ ಹುದ್ದೆಯಲ್ಲಿ ಪಾಲು ಕೇಳುತ್ತಿಲ್ಲ. ‘ಸಿ’, ‘ಡಿ’ ವರ್ಗದಲ್ಲಿ ಕೇಳುತ್ತಿದ್ದೇವೆ’ ಎನ್ನುವುದು ಕಾರ್ಮಿಕ ವಲಯದ ವಾದ.  
 
‘ಈ ಹುದ್ದೆಗಳಿಗೆ ಅದೆಂಥ ಕೌಶಲ ಬೇಕು? ಕನ್ನಡಿಗರಲ್ಲಿ ಕೌಶಲ ಇಲ್ಲ ಎನ್ನುವುದು ಕುಂಟು ನೆಪ ಮಾತ್ರ. ಯಾರೂ  ಹುಟ್ಟುತ್ತಲೇ ಅನುಭವ ಗಳಿಸಿ ಬರುವುದಿಲ್ಲ. ಕೆಲಸ ಕೊಟ್ಟರೆ ಅನುಭವ ತಾನಾಗಿಯೇ ಬರುತ್ತದೆ. ಅನ್ಯ ಭಾಷಿಕರು ಕರ್ನಾಟಕದಲ್ಲಿ ಸುಲಭವಾಗಿ  ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಆಗ ಇಲ್ಲದ ಕೌಶಲ, ಅನುಭವ, ನೂರೆಂಟು ಕುಂಟು ನೆಪಗಳು ಕನ್ನಡಿಗರಿಗೆ ಕೆಲಸ ಕೊಡುವಾಗ ಮಾತ್ರ ಹುಟ್ಟಿಕೊಳ್ಳುತ್ತಿವೆ’ ಎಂದು ಕಾರ್ಮಿಕ ಸಂಘಟನೆಗಳು ದೂರುತ್ತವೆ.
 
**
ಭಾಷೆಯ ಆಧಾರದ ಮೇಲೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಒಕ್ಕೂಟ ವ್ಯವಸ್ಥೆಗೆ ಮಾರಕ. ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸರ್ಕಾರದ ನಿರ್ಧಾರ ಜಾರಿಯಾಗುವುದಿಲ್ಲ. 
-ಪದ್ಮನಾಭ,
ಅಧ್ಯಕ್ಷ, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ (ಕಾಸಿಯಾ) 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.