ADVERTISEMENT

ಕಾಡುತ್ತಿದೆ ಒತ್ತುವರಿ ಭೂತ

ಕೆರೆ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 1 ಮೇ 2015, 19:30 IST
Last Updated 1 ಮೇ 2015, 19:30 IST

ಹುಬ್ಬಳ್ಳಿ: ಕೆರೆಗಳ ಒತ್ತುವರಿ ಕೇವಲ ಬೆಂಗಳೂರಿನಂತಹ ಮೆಟ್ರೊ ನಗರಗಳಿಗೆ ಸೀಮಿತವಾಗಿಲ್ಲ. ಹುಬ್ಬಳ್ಳಿ–ಧಾರವಾಡದಲ್ಲೂ ಸಾಕಷ್ಟು ಭಾಗವನ್ನು ಅತಿಕ್ರಮಿಸಲಾಗಿದ್ದು, ಅದರ ತೆರವಿಗೆ ಆಗಾಗ್ಗೆ ಕಾರ್ಯಾಚರಣೆ ನಡೆಯುತ್ತಲೇ ಇದೆ.

ಅವಳಿ ನಗರದ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಕೆರೆಗಳ ಪೈಕಿ ಜಿಲ್ಲಾಡಳಿತವು ಈವರೆಗೆ ಕೆಲವು ಕೆರೆಗಳ ಅತಿಕ್ರಮಣವನ್ನು ತಡೆಗಟ್ಟಿ, ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿದೆ. ಇನ್ನೂ ಏಳು ಕೆರೆಗಳಲ್ಲಿ ಇನ್ನಷ್ಟೇ ಕಾರ್ಯಾಚರಣೆ ನಡೆಯಬೇಕಿದೆ.

ಕೆರೆಗಳ ಆಸುಪಾಸಿನಲ್ಲಿ ಸಾಕಷ್ಟು ಮಂದಿ ಪುಟ್ಟ ಮನೆ, ಗುಡಿಸಿಲುಗಳನ್ನು ಕಟ್ಟಿಕೊಂಡಿದ್ದಾರೆ. ಇವುಗಳನ್ನು ತೆರವುಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಹೊಸ ಯಲ್ಲಾಪುರದ ಕೆರೆಯಲ್ಲಿ ಸುಮಾರು 35 ಗುಂಟೆಗಳಷ್ಟು ಪ್ರದೇಶವನ್ನು ಈಚೆಗಷ್ಟೇ ತೆರವು ಮಾಡಲಾಗಿದೆ.

ನಗರದ ಹೊರವಲಯ, ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಸುತ್ತ ಇಟ್ಟಿಗೆ ತಯಾರಿಕೆ ಕಾರ್ಖಾನೆಗಳಿಂದ ಸಾಕಷ್ಟು ಭೂಮಿ ಅತಿಕ್ರಮಣವಾಗಿರುವುದಾಗಿ ವರದಿಗಳು ಹೇಳುತ್ತವೆ. ಹುಬ್ಬಳ್ಳಿಯ ಕೆಂಪಕೆರೆ ಒಂದು ಕಾಲಕ್ಕೆ ಇಟ್ಟಿಗೆ ಗೂಡುಗಳಿಂದಲೇ ತುಂಬಿಹೋಗಿತ್ತು.

ಪರಿಸರಪ್ರಿಯರ ಒತ್ತಡದಿಂದಾಗಿ ಜಿಲ್ಲಾಡಳಿತ ಎಲ್ಲ ಭಟ್ಟಿಗಳನ್ನೂ ಎತ್ತಂಗಡಿ ಮಾಡಿದ್ದು, ಇದೀಗ ಕೆರೆಯ ಸುತ್ತ ಕಾಂಪೌಂಡ್‌ನ ಕೋಟೆ ಕಟ್ಟಿ ಭದ್ರಪಡಿಸಲಾಗಿದೆ. ಈ ಮೂಲಕ ಸಾಕಷ್ಟು ಜಮೀನು ಸರ್ಕಾರದ ವಶಕ್ಕೆ ಸಿಕ್ಕಿದೆ. ಗೋಕುಲ ಗ್ರಾಮಕ್ಕೆ ಸಮೀಪದ ಕೆರೆಯಲ್ಲೂ ಇಟ್ಟಿಗೆ ಗೂಡು ತೆರವುಗೊಳಿಸಲಾಗಿದೆ. ತೋಳನಕೆರೆ ಅಕ್ಕಪಕ್ಕ ಸ್ಥಳೀಯರಿಂದ ಭೂ ಅತಿಕ್ರಮಣ ತಪ್ಪಿಸುವ ಸಲುವಾಗಿ ಇಡೀ ಕೆರೆಗೆ ಕಾಂಪೌಂಡ್‌ ನಿರ್ಮಿಸಲಾಗಿದೆ.

ಧಾರ್ಮಿಕ ಕಾರ್ಯಕ್ಕೂ ಒತ್ತುವರಿ: ಹುಬ್ಬಳ್ಳಿ ತಾಲ್ಲೂಕಿನ ತಾರಿಹಾಳ ಗ್ರಾಮದ ಕಲ್ಮೇಶ್ವರ ದೇವಸ್ಥಾನಕ್ಕೆ ಮುಖ್ಯರಸ್ತೆಯಿಂದ ನೇರವಾಗಿ ರಸ್ತೆ ನಿರ್ಮಿಸಿ, ತೇರು ಎಳೆಯುವ ಸಲುವಾಗಿ ಸುಮಾರು ನಾಲ್ಕು ಎಕರೆಯಷ್ಟು ವಿಸ್ತಾರವಾದ ಕೆರೆಯನ್ನು ಮುಚ್ಚಿಹಾಕಲಾಗಿದೆ. ಗ್ರಾಮಸ್ಥರೇ ಈ ಕಾರ್ಯಕ್ಕೆ ಮುಂದಾಗಿದ್ದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಜಿಲ್ಲಾಡಳಿತ ಈ ಬಗ್ಗೆ ಇನ್ನಷ್ಟೇ ಕ್ರಮ ಜರುಗಿಸಬೇಕಿದೆ.
ಜಿಲ್ಲೆಯಲ್ಲಿನ ಒಟ್ಟಾರೆ ಕೆರೆಗಳ ಒತ್ತುವರಿಯನ್ನು ಗಮನಿಸಿದರೆ ಈಗ ನಡೆದಿರುವ ತೆರವು ಕಾರ್ಯಾಚರಣೆ ಅತ್ಯಲ್ಪ ಎನಿಸುತ್ತದೆ. ಅತಿಕ್ರಮಣದಿಂದಾಗಿ ಕೆಲವು ಕೆರೆಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ.

‘ಬಹುತೇಕ ಕಡೆ ಒತ್ತುವರಿಯನ್ನು ತೆರವು ಮಾಡಲಾಗುತ್ತಿದೆ. ಇನ್ನೂ ಕೆಲವು ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾರ್ಯಾಚರಣೆ ನಡೆಸುತ್ತೇವೆ’ ಎನ್ನುತ್ತಾರೆ ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌.
ಸಂಗ್ರಹ: ಆರ್‌.ಜಿತೇಂದ್ರ

ಕೆರೆಗಳ ವಿವರ
168 ಧಾರವಾಡ ಜಿಲ್ಲೆಯಲ್ಲಿ ಒತ್ತುವರಿಯಾದ ಕೆರೆಗಳು, 21 ಅವಳಿ ನಗರದಲ್ಲಿ ಒತ್ತುವರಿಯಾದ ಕೆರೆಗಳು, 14 ಅಸ್ತಿತ್ವ ಕಳೆದುಕೊಂಡಿವೆ, 14 ತೆರವುಗೊಂಡಿವೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.