ADVERTISEMENT

ಮೂರು ತೀರ್ಪುಗಳ ಕತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2014, 14:28 IST
Last Updated 8 ಸೆಪ್ಟೆಂಬರ್ 2014, 14:28 IST

ಸುಪ್ರೀಂ ಕೋರ್ಟ್‌ ಮತ್ತು ಹೈ­ಕೋರ್ಟ್‌­­­ಗಳಿಗೆ ನ್ಯಾಯ­ಮೂರ್ತಿಗಳನ್ನು ‘ಕೊಲಿ­ಜಿಯಂ’ ಮೂಲಕ ನೇಮಕ ಮಾಡ­ಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ 1993ರಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ‘ಕೊಲಿಜಿಯಂ’ ಮೂಲಕ ಆಗಬೇಕು ಎಂದು ಹೇಳಿತು.

ಭಾರತದ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಕೊಲಿಜಿಯಂ ಮೂಲಕ ಆಗಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಹಂತಹಂತವಾಗಿ. ಇದೊಂದು ವಿಕಸನದ ಕತೆ. ಕಾರ್ಯಾಂ­ಗವು ನ್ಯಾಯಾಂ­ಗದ ಜೊತೆ ಸಂಘರ್ಷಕ್ಕೆ ಮುಂದಾ­ದಾಗ ರಕ್ಷಣಾತ್ಮಕ ಕ್ರಮವಾಗಿ ‘ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು ಎಂಬ ವಾದ ಇದೆ. ಕೊಲಿಜಿಯಂ ವ್ಯವಸ್ಥೆ ವಿಕಸನ ಹೊಂದಲು ಮೂಲ, ಕೇಂದ್ರ ಕಾನೂನು ಸಚಿವರು ಹೊರಡಿ­ಸಿದ ಒಂದು ಸುತ್ತೋಲೆ ಎಂದು ತಜ್ಞರು ಹೇಳುತ್ತಾರೆ.

‘ಯಾವುದೇ ರಾಜ್ಯದ ಹೈಕೋರ್ಟ್‌ನ ಶೇಕಡ 33ರಷ್ಟು ನ್ಯಾಯಮೂರ್ತಿಗಳು ಹೊರ ರಾಜ್ಯ­ಗಳಿಗೆ ಸೇರಿದವರಾಗಿದ್ದರೆ ಉತ್ತಮ. ದೇಶದಲ್ಲಿ ಏಕತೆ ಮೂಡಿಸಲು ಇದು ನೆರವಾಗುತ್ತದೆ’ ಎಂಬ ಮಾತಿ­ನೊಂದಿಗೆ 1981ರಲ್ಲಿ ಹೊರಡಿಸಿದ್ದ ಸುತ್ತೋಲೆ ಆರಂಭವಾಗುತ್ತದೆ. ಪಂಜಾಬ್‌ನ ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ರವಾನಿಸಿದ ಸುತ್ತೋಲೆ ಇದು. ನಂತರ ಈ ಸುತ್ತೋಲೆಯಲ್ಲಿ ಒಂದು ಮಾತು ಬರುತ್ತದೆ.

‘ನಿಮ್ಮ ರಾಜ್ಯಗಳ ಹೈಕೋರ್ಟ್‌ನಲ್ಲಿ ಹೆಚ್ಚು­ವರಿ ನ್ಯಾಯಮೂರ್ತಿ ಯಾಗಿ ಕೆಲಸ ಮಾಡು­ತ್ತಿರು­ವವರಿಂದ, ಬೇರೆ ರಾಜ್ಯಗಳ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ವರ್ಗಾವಣೆ ಹೊಂದಲು ಒಪ್ಪಿಗೆ ಪತ್ರ ಪಡೆದುಕೊಳ್ಳಿ’ ಎಂಬ ಸಂದೇಶ ಅದರಲ್ಲಿ ಇತ್ತು. ಇದು ನ್ಯಾಯಾಂಗದ ಮೇಲೆ ರಾಜಕೀಯ ಹಿಡಿತ ಸಾಧಿಸುವ ಯತ್ನ ಎಂಬ ಆರೋಪಗಳು ಆ ಸಂದರ್ಭ­ದಲ್ಲಿ ಕೇಳಿಬಂದವು. ಕಾನೂನು ಸಚಿವರ ಸುತ್ತೋಲೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾದವು. ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1981ರ ಡಿಸೆಂಬರ್‌ನಲ್ಲಿ ‘ಎಸ್‌.ಪಿ. ಗುಪ್ತ ಮತ್ತು ಭಾರತದ ರಾಷ್ಟ್ರಪತಿ’ ನಡುವಿನ ಪ್ರಕರಣದಲ್ಲಿ ಒಂದು ತೀರ್ಪು ನೀಡಿತು.

ನ್ಯಾಯಾಂಗದ ನೇಮಕಾತಿಗಳಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ಪರಮಾಧಿಕಾರ ಇಲ್ಲ ಎಂದು ಸುಪ್ರೀಂ ಪೀಠ ಹೇಳಿತು. ‘ಈ ತೀರ್ಪು ನೀಡಿದ ವಿಭಾಗೀಯ ಪೀಠದ ಬಹುಪಾಲು ನ್ಯಾಯಮೂರ್ತಿಗಳು, ನ್ಯಾಯಾಂ­ಗಕ್ಕೆ ನಡೆಯುವ ನೇಮಕಾತಿಗಳಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು’ ಎಂದು ವಕೀಲೆ ಜಿಯಾ ಮೋದಿ ಅವರು ‘ಭಾರತವನ್ನು ಬದಲಿಸಿದ 10 ತೀರ್ಪು­ಗಳು’ (Ten Judgements that Changed India) ಕೃತಿಯಲ್ಲಿ ಹೇಳಿದ್ದಾರೆ. ಈ ತೀರ್ಪು ಬಂದ ಒಂದು ದಶಕದವರೆಗೆ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಎರಡನೆಯ ಪ್ರಕರಣ: 1980ರ ದಶಕದಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆಯಿತು. ವಕೀಲ ಸುಭಾಷ್‌ ಶರ್ಮ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿವಿಧ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡುವಂತೆ ಕೋರಿದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಎಸ್‌.ಪಿ. ಗುಪ್ತ ಪ್ರಕರಣ­ದಲ್ಲಿ ನೀಡಿದ ತೀರ್ಪಿನ ಪುನರ್‌ ಪರಿಶೀಲನೆ­ಯನ್ನು ವಿಸ್ತೃತ ಪೀಠವೊಂದು ನಡೆಸಬೇಕು ಎಂಬ ಅಭಿಪ್ರಾಯಕ್ಕೆ ಬಂತು. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಸ್ತೃತ ಪೀಠ ನಡೆಸಿದ ವಿಚಾರಣೆ ‘ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ’ ಎಂದೇ ಖ್ಯಾತ­ವಾಗಿದೆ.

ಈ ಪ್ರಕರಣದಲ್ಲಿ 1993ರಲ್ಲಿ ನೀಡಿದ ತೀರ್ಪಿನ ಅನ್ವಯ, ನ್ಯಾಯಾಂ­ಗದ ನೇಮಕಾತಿಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಅಧಿಕಾರ ದೊರೆಯಿತು. ನ್ಯಾಯ­ಮೂರ್ತಿಗಳ ನೇಮಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯವರು ತನ್ನ ಇಬ್ಬರು ಅತ್ಯಂತ ಹಿರಿಯ ಸಹೋ­ದ್ಯೋಗಿ­ಗಳ (ನ್ಯಾಯಮೂರ್ತಿಗಳು) ಜೊತೆ ಸಮಾಲೋಚಿಸಬೇಕು ಎಂಬ ನಿಯಮ ಚಾಲ್ತಿಗೆ ಬಂತು. ಸಿಜೆಐ ತನ್ನ ಹಿರಿಯ ಸಹೋದ್ಯೋಗಿಗಳ ಜೊತೆ ಚರ್ಚಿಸಿ ನೇಮಕಾತಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದಾಗಿನಿಂದ ’ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು.

ಈ ತೀರ್ಪಿನ ಕಾರಣ, ಎಸ್‌.ಪಿ. ಗುಪ್ತ ಪ್ರಕರಣದಲ್ಲಿ ನೀಡಿದ ತೀರ್ಪು ಬದಿಗೆ ಸರಿಯಿತು. ನ್ಯಾಯಾಂಗದ ನೇಮಕಾತಿಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ನ್ಯಾಯಾಂಗಕ್ಕೇ ದೊರೆ­ಯಿತು. ಆದರೆ ನೇಮಕಾತಿಗಳಲ್ಲಿನ ಅಧಿಕಾರ­ವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ, ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಮಾತ್ರವಲ್ಲದೆ, ಆಯಾ ನ್ಯಾಯಾಲಯಗಳ ಕನಿಷ್ಠ ಇಬ್ಬರು ಹಿರಿಯ ನ್ಯಾಯಮೂರ್ತಿಗಳಿಗೂ ನೀಡಿತು. ನೇಮಕಾತಿ ಅಧಿಕಾರವನ್ನು ಅಷ್ಟರ­ಮಟ್ಟಿಗೆ ವಿಕೇಂದ್ರೀಕರಣ ಮಾಡಲಾಯಿತು ಎನ್ನುತ್ತಾರೆ ಜಿಯಾ ಮೋದಿ.

ಆದರೆ ಈ ತೀರ್ಪಿನ ಕುರಿತು ಸಾಕಷ್ಟು ಟೀಕೆ­ಗಳೂ ಇವೆ. ಸುಪ್ರೀಂ ಕೋರ್ಟ್‌, ನ್ಯಾಯಾಂ­ಗದ ನೇಮಕಾತಿಗಳಲ್ಲಿ ಸಿಜೆಐ ಜೊತೆ ‘ಸಮಾಲೋಚನೆ’ ನಡೆಸಬೇಕು ಎಂಬುದನ್ನು ಸಿಜೆಐ ‘ಸಮ್ಮತಿ’ ಬೇಕು ಎನ್ನುವ ಮೂಲಕ ಈ ತೀರ್ಪು, ಸಂವಿಧಾನದ ಕೆಲವು ಅಂಶಗಳನ್ನು ತಿದ್ದಿತು ಎಂಬ ಮಾತೂ ಇದೆ. ಈ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಮುಂಚೂಣಿಯಲ್ಲಿ ನಿಂತು ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ಅವರು ತಮ್ಮ ಆತ್ಮಕಥೆ ‘ನೆನಪು ಮಾಸುವ ಮುನ್ನ’ (Before Memory Fades) ಪುಸ್ತಕದಲ್ಲಿ: ‘ಈ ಪ್ರಕರಣದಲ್ಲಿ ನಾನು ಸೋಲಬೇಕಿತ್ತು. ಆದರೆ ಗೆದ್ದುಬಿಟ್ಟೆ’ ಎಂದು ಬರೆದಿದ್ದಾರೆ.

ಮೂರನೆಯ ಪ್ರಕರಣ: 1997–98ರಲ್ಲಿ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಎಂ.ಎಂ. ಪುಂಚಿ ಅವರು ಐವರನ್ನು ನ್ಯಾಯ­ಮೂರ್ತಿ­ಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿ­ದರು. ಆದರೆ ಇವರ ಅರ್ಹತೆ ಕುರಿತ ಪ್ರಶ್ನೆ­ಗಳನ್ನು ಎತ್ತಿದ ಕಾರ್ಯಾಂಗ, ನೇಮಕ ಮಾಡಲು ನಿರಾಕರಿಸಿತು. ಇದರ ಪರಿಣಾಮವಾಗಿ, ಅಂದಿನ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು, ಒಂಬತ್ತು ಪ್ರಶ್ನೆಗಳ ಕುರಿತು ಉತ್ತರ ಕಂಡು­ಕೊಳ್ಳು­ವಂತೆ ಸೂಚಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

‘ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ...’ ಪ್ರಕರಣ­ದಲ್ಲಿ ನೀಡಿದ ತೀರ್ಪನ್ನು ಸಮರ್ಥಿಸಿಕೊಂಡ ಸುಪ್ರೀಂ ಕೋರ್ಟ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಸಣ್ಣ ಪ್ರಮಾಣದ ಬದಲಾವಣೆ ತಂದಿತು. ನೇಮ­ಕಾತಿ ಶಿಫಾರಸು ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯವರು, ತಮ್ಮ  ನಾಲ್ವರು ಹಿರಿಯ ಸಹೋ­ದ್ಯೋಗಿ ನ್ಯಾಯಮೂರ್ತಿಗಳ ಜೊತೆ ಸಮಾ­ಲೋಚನೆ ನಡೆಸಬೇಕು ಎಂದು ಹೇಳಿತು. ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಸಂದರ್ಭ­ದಲ್ಲಿ ಸಿಜೆಐ ಅವರು ನಾಲ್ವರು ಹಿರಿಯ ಸಹೋದ್ಯೋಗಿಗಳ ಜೊತೆ ಸಮಾಲೋಚಿಸುವ ಪದ್ಧತಿ 1993ರಿಂದ ಜಾರಿಯಲ್ಲಿದೆ.

‘ಪೊಲಿಟಿಕಲ್‌ ಆರ್ಮಿ’ಯಿಂದ ನಿಯಂತ್ರಣ ಬೇಡ

ನ್ಯಾಯಮೂರ್ತಿಗಳನ್ನು ನೇಮಿಸುವ  ಕೊಲಿಜಿಯಂ ವ್ಯವಸ್ಥೆ ರದ್ದುಗೊಳಿಸಿದರೆ, ಭಾರತದ ಸ್ಥಿತಿ ಪಾಕಿಸ್ತಾನಕ್ಕಿಂತಲೂ ಹದಗೆಡುವ ಸಾಧ್ಯತೆ ಇದೆ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ನ್ಯಾಯಾಂಗ ವ್ಯವಸ್ಥೆಯನ್ನು ‘ಪೊಲಿಟಿಕಲ್‌ ಆರ್ಮಿ’ ನಿಯಂತ್ರಿಸುವಂತಾಗಲಿದೆ. ದೇಶದಲ್ಲಿ ಎಲ್ಲ ಕಡೆ ಭ್ರಷ್ಟಾಚಾರ ಹಾಸುಹೊಕ್ಕಿರುವಾಗ ನ್ಯಾಯಾಂಗ ವ್ಯವಸ್ಥೆ ಈ ಕೊಳೆಯನ್ನು ಮೈಗೆ ಅಂಟಿಸಿಕೊಳ್ಳದೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ರಾಜಕೀಯ ಮುಖಂಡರ ಹಸ್ತಕ್ಷೇಪಕ್ಕೆ ಅವಕಾಶ ನೀಡಿದರೆ, ನ್ಯಾಯಾಂಗದ ಸ್ಥಿತಿ ಕೈಕಾಲು ಕಟ್ಟಿ ನೀರಿನಲ್ಲಿ ಮುಳುಗಿಸಿದಂತಾಗಲಿದೆ. ಆಡಳಿತಾರೂಢ  ಪಕ್ಷದವರು ತಮಗೆ ಬೇಕಾದವರನ್ನು ನೇಮಿಸಿಕೊಳ್ಳುವ ಅಪಾಯವಿದೆ. ಕೊಲಿಜಿಯಂ ವ್ಯವಸ್ಥೆಯನ್ನೇ ಮುಂದುವರಿಸಬೇಕು.
–ನೀತಾ ಪೋತದಾರ, ವಕೀಲರು, ಬೆಳಗಾವಿ


ನ್ಯಾಯಮೂರ್ತಿಗಳ ಅಭಿಪ್ರಾಯವೇ ಅಂತಿಮ


ನ್ಯಾಯಾಂಗ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಮಾತ್ರ ಸೂಕ್ತ ನ್ಯಾಯಮೂರ್ತಿ­ಗಳನ್ನು ಆಯ್ಕೆ ಮಾಡಲು ಸಾಧ್ಯ. ಹೀಗಾಗಿ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ಗಳಿಗೆ ನ್ಯಾಯ­ಮೂರ್ತಿ­ಗಳನ್ನು ನೇಮಕ ಮಾಡುವಾಗ ತಜ್ಞ ನ್ಯಾಯಮೂರ್ತಿಗಳ ಅಭಿಪ್ರಾಯವೇ  ಮುಖ್ಯ ಆಗಬೇಕು.  ಸರ್ಕಾರ ಏನೇ ವ್ಯವಸ್ಥೆ ರೂಪಿಸಿದರೂ ನ್ಯಾಯಮೂರ್ತಿಗಳ ನೇಮಕದ ವಿಷಯದಲ್ಲಿ ಶೇ 90ರಷ್ಟು ಅಭಿಪ್ರಾಯ­ವನ್ನು ನ್ಯಾಯಮೂರ್ತಿಗಳಿಂದಲೇ ಪಡೆಯಬೇಕು. ನ್ಯಾಯಮೂರ್ತಿಗಳು ಸಂವೇದನಾ­ಶೀಲ­ರಾಗಿರು­ವುದರಿಂದ  ಸೂಕ್ಷ್ಮವಾಗಿ ಪರಿಶೀಲಿಸಿ, ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುತ್ತಾರೆ. ಬೇರೆಯವರ ಹಸ್ತಕ್ಷೇಪ ಬೇಡ.

ADVERTISEMENT

–ಸರಸಿಜಾ ರಾಜನ್‌, ವಕೀಲರು, ಗುಲ್ಬರ್ಗ ಹೈಕೋರ್ಟ್‌ ಪೀಠ

ಪುನರ್‌ ಪರಿಶೀಲನೆಗೆ ಒಪ್ಪಿಸಲಿ

ನ್ಯಾಯಾಂಗವು ಆಡಳಿತಾಂಗದಿಂದ ಸ್ವತಂತ್ರವಾಗಿರಬೇಕು ಎಂದು ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದ ಆಸ್ತಿ. ಈಗಿರುವ ಕೊಲಿಜಿಯಂ ವ್ಯವಸ್ಥೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ನ್ಯಾಯಾಂಗದ ಸ್ವಾತಂತ್ರ್ಯದ ವಿಷಯದಲ್ಲಿ ಹಸ್ತಕ್ಷೇಪ ಅಪೇಕ್ಷಣೀಯ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರು ಬಹಳ ಸೂಕ್ಷ್ಮವಾಗಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಸಂಸತ್ತು ಪರಿಗಣಿಸಬೇಕಿತ್ತು. ಹಾಗೆ ಪರಿಗಣಿಸದೇ ಶೀಘ್ರ ನಿರ್ಧಾರ ಕೈಗೊಂಡಿದ್ದು ದುರದೃಷ್ಟಕರ. ಆದ್ದರಿಂದ ರಾಷ್ಟ್ರಪತಿಯವರು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (2014) ಮಸೂದೆಯನ್ನು ಸಂಸತ್ತಿನ ಪುನರ್‌ ಪರಿಶೀಲನೆಗೆ ಒಪ್ಪಿಸುವುದೇ ಸೂಕ್ತ ಮಾರ್ಗ. 
–ಸಿ.ಕೆ.ಎನ್‌. ರಾಜಾ, ಸಂವಿಧಾನ ತಜ್ಞರು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.