ADVERTISEMENT

ವೈಜ್ಞಾನಿಕ ಕ್ರಮವೇ ಮದ್ದು

ಸಂಜಯ್ ಗುಬ್ಬಿ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ಭಾರತದಲ್ಲಿ ನಮಗೆ ವಿಧವಿಧವಾದ ವನ್ಯಜೀವಿಗಳೊಡನೆ (ಹಾವು, ಕೋತಿ, ಕಾಡುಹಂದಿ, ಮರವಿ, ಕರಡಿ, ತೋಳ, ಚಿರತೆ, ಆನೆ) ಸಂಘರ್ಷ ಪ್ರತಿನಿತ್ಯದ ಮಾತು. ನಗರವಾಸಿಗಳಿಗೆ ಹೆಚ್ಚಾಗಿ ಹಾವು, ಕೋತಿಗಳೊಡನೆ ಸಂಘರ್ಷವಾದರೆ, ಗ್ರಾಮವಾಸಿಗಳಿಗೆ ಕಾಡು ಹಂದಿ, ಕೃಷ್ಣಮೃಗ, ನರಿ, ಕರಡಿ, ಚಿರತೆಗಳು ಸಮಸ್ಯೆಯ ಮೂಲ. ಅದೇ ದೊಡ್ಡ ಕಾಡುಗಳ ಬದಿಯಲ್ಲಿರುವವರಿಗೆ ಹುಲಿ, ಆನೆ, ಜಿಂಕೆ, ಕಡವೆ, ಕಾಡು ಹಂದಿಗಳ ಬಾಧೆ.

ವಿದ್ಯುತ್ ಬೇಲಿಗಳು ವನ್ಯಜೀವಿಗಳಿಂದ ಬೆಳೆಹಾನಿ ತಡೆಯಲು ವಿಫಲವಾಗಿ­ರುವುದನ್ನು ಅಧ್ಯಯನಗಳು ಸಾದರಪಡಿಸಿವೆ. ಇವುಗಳು ದುಬಾರಿ ಹಾಗೂ ಈ ಬೇಲಿಗಳ ನಿರ್ವಹಣೆಯನ್ನು ಕ್ರಮಬದ್ಧವಾಗಿ ಸಂಭಾಳಿಸಬೇಕು. ಈ ಶಿಸ್ತು ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಅವು ಅಳವಡಿಸಿದ ಬಹುತೇಕ ಪ್ರದೇಶಗಳಲ್ಲಿ ವಿಫಲವಾಗಿವೆ. ಹೀಗಾಗಿ ಅರಣ್ಯ ಇಲಾಖೆ ವಿದ್ಯುತ್ ಬೇಲಿಗಳ ಮೇಲೆ ಇನ್ನು ಮುಂದೆ ಹೆಚ್ಚು ಹಣ ವ್ಯಯಿಸುವುದನ್ನು ನಿಲ್ಲಿಸಬೇಕು.

ಕಾಡಿನ ಬದಿಯಲ್ಲಿ ಆನೆಗಳಿಗೆ ರುಚಿಸದ ಬೆಳೆಗಳ ಬೇಸಾಯ ಹಾಗೂ ಕಾಪು ವಲಯಗಳನ್ನು  ರಕ್ಷಿಸುವುದರಿಂದ ಬೆಳೆಹಾನಿ ತಡೆಯಬಹುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ ಕೆಲವು ರೈತರು ಟೊಮೆಟೊದ ಬದಲು ದಂಟಿನ ಸೊಪ್ಪನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ತರಕಾರಿ ಮಳಿಗೆಯೊಂದು ಇವರ ಬೆಳೆಯನ್ನು ಖರೀದಿಸುತ್ತಿದೆ. ಆನೆಗಳಿಂದ ಅತಿಯಾಗಿ ಬೆಳೆ ಹಾನಿಗೊಳ­ಗಾಗುವ ಸ್ಥಳಗಳಲ್ಲಿ ವನ್ಯಜೀವಿ ಪ್ರವಾಸೋದ್ಯಮ­ದಂತಹ ಕೃಷಿಯೇತರ ಚಟುವಟಿಕೆಗಳನ್ನು ಪ್ರಯತ್ನಿಸಬಹುದು. 

ವನ್ಯಜೀವಿಗಳಿಂ­ದಾಗುವ ತೊಂದರೆ­ ಕಡಿಮೆ ಮಾಡಲು ಕಡಿಮೆ ಬೆಲೆಯ, ಅಲ್ಪ ತಂತ್ರಜ್ಞಾನದ ಪರಿಹಾರಗಳು ಬೇಕಾಗಿವೆ. ದೇಶದೆಲ್ಲೆಡೆ ಇತ್ತೀಚೆಗೆ ಚಿರತೆಗಳು ಸಂಘರ್ಷದಲ್ಲಿ ಅತಿಯಾಗಿ ಸಾಯುತ್ತಿರುವುದು ವರದಿಯಾಗುತ್ತಿದೆ. ಚಿರತೆಗಳು ಸಣ್ಣ ಪುಟ್ಟ ಕುರುಚಲು ಪ್ರದೇಶಗಳಲ್ಲೂ ಬದುಕುಳಿಯಬಲ್ಲ ಪ್ರಾಣಿಗಳು. ಇವಕ್ಕೆ ವಿಶೇಷವಾದ ಆಹಾರದ ಅಗತ್ಯವಿಲ್ಲ. ಹಲವೆಡೆ ನಾಯಿ, ಹಂದಿ, ದನ, ಕುರಿಗಳೇ ಇವುಗಳ ದಿನನಿತ್ಯದ ಆಹಾರ. ಈ ಹೊಂದಿಕೊಳ್ಳುವಿಕೆಯೇ ಚಿರತೆಯನ್ನು ಮಾನವನೊಡನೆ ದಿನನಿತ್ಯದ ಸಂಘರ್ಷಕ್ಕೆ ಹೆಚ್ಚು ಹಾದಿ ಮಾಡಿಕೊಟ್ಟಿದೆ.
 
ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಂದಾಗ ಜನರಿಗೆ ಮಾರಕ ಗಾಯವಾಗು­ವುದು ಹಾಗೂ ಇದರಿಂದ ರೊಚ್ಚಿಗೆದ್ದ ಜನ ಚಿರತೆಗಳನ್ನು ಸಾಯಿಸುವುದು ಸಾಮಾನ್ಯ ಸಂಗತಿ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹಾಗೂ ಅಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ನಿಯಮಗಳ ಅರಿವಿಲ್ಲದಿರುವುದರಿಂದ ಸನ್ನಿವೇಶ ವಿಕೋಪಕ್ಕೆ ಹೋಗುತ್ತದೆ.

ದೇಶದ ಬಹುತೇಕ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯವರಿಗೆ ವನ್ಯಜೀವಿಗಳನ್ನು ನಿರ್ವಹಿಸುವ ಅನುಭವ ಅಥವಾ ನೈಪುಣ್ಯ ಇರುವುದಿಲ್ಲ. ಆದ್ದರಿಂದ ಅದರಲ್ಲಿ ಪರಿ­ಣತಿ ಹೊಂದಿರುವವರು ಬರುವುದನ್ನೇ ಕಾಯುತ್ತಾರೆ. ಅಷ್ಟರಲ್ಲಿ ಜನಜಂಗುಳಿಯ ಒತ್ತಡದಿಂದ ಚಿರತೆಗಳು ಗಾಬರಿ­ಗೊಳ್ಳು­ತ್ತವೆ. ಜನರನ್ನು ಚದುರಿಸಿ, ಶಾಂತವಾಗಲು ಪ್ರಾಣಿಗೆ ಸಮಯ ಕೊಟ್ಟು, ಅದು ತಪ್ಪಿಸಿಕೊಳ್ಳುವುದಕ್ಕೆ ಬಿಡುವುದು ಒಳ್ಳೆಯದು.

ತೆರೆದ ಬಾವಿಯಲ್ಲಿ ಚಿರತೆಗಳು ಬಿದ್ದಾಗ ಹತ್ತಿಯ ಅಥವಾ ತೆಂಗಿನ ನಾರಿನ ಹಗ್ಗದಿಂದ ಸುತ್ತಿದ ಮರದ ಹಲಗೆಯನ್ನು (ಕತ್ತಲಾದ ನಂತರ) ಬಾವಿಯಲ್ಲಿ ಇಳಿ ಬಿಟ್ಟು ದೂರ ಸರಿದರೆ, ಚಿರತೆಗಳು ಹಲಗೆಯನ್ನು ಬಳಸಿಕೊಂಡು ಆಚೆ ಬಂದು ಮಾಯವಾಗುತ್ತವೆ. ವನ್ಯಜೀವಿಗಳನ್ನು ವೈಜ್ಞಾನಿಕ­ವಾಗಿ ನಿರ್ವಹಿಸಲು ಆಗದಿದ್ದರೆ ಕನಿಷ್ಠ ಸಾಮಾನ್ಯ ಜ್ಞಾನ­ವನ್ನಾ­ದರೂ ಬಳಸಿದರೆ ಸಂಘರ್ಷದ ಪ್ರಮಾಣವನ್ನು ತಗ್ಗಿಸಬಹುದು.
(ಲೇಖಕರು ವನ್ಯಜೀವಿ ವಿಜ್ಞಾನಿ)

ಪರಿಹಾರ ಮೊತ್ತ ಹೆಚ್ಚಿಸಿ
ಈ ವರ್ಷ ಸಾವಿರಾರು ರೂಪಾಯಿ ಖರ್ಚು ಮಾಡಿ ಒಂದೂವರೆ ಎಕರೆಯಲ್ಲಿ ಹೈಬ್ರಿಡ್‌ ಜೋಳ ಬೆಳೆದಿದ್ದೆ. ಕಾಡು ಹಂದಿಗಳು ದಾಳಿ ಮಾಡಿ ಮುಕ್ಕಾಲು ಭಾಗದಷ್ಟು ಜೋಳ­ವನ್ನು ತಿಂದುಹಾಕಿವೆ. ಉಳಿದಿರುವ ಜೋಳ ಮಾರಿದರೂ ಕೂಲಿಯಾಳುಗಳಿಗೆ ಕೊಟ್ಟಿರುವಷ್ಟು ಹಣವೂ ಸಿಗುವುದಿಲ್ಲ. ಕಾಡುಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ವೈಜ್ಞಾನಿಕ ವಿಧಾನ ಅನುಸರಿಸಬೇಕು. ಬೆಳೆ ನಾಶಕ್ಕೆ ಇರುವ ಪರಿಹಾರದ ಮೊತ್ತ ಹೆಚ್ಚಿಸಬೇಕು.
ಬಸವಣ್ಣ, ಕೃಷಿಕ, ಚಾಮರಾಜನಗರ ತಾಲ್ಲೂಕು

ಮಿತಿ ಇಲ್ಲ
ಮನಸ್ಸಿಗೆ ಬಂದಂತೆ ಬದುಕುತ್ತಿರುವ ಮನುಷ್ಯ ಯಾವುದಕ್ಕೂ ಮಿತಿ ಹಾಕಿಕೊಳ್ಳುತ್ತಿಲ್ಲ. ಇದರಿಂದ ಇಡೀ ಜೀವ ಸಂಕುಲವನ್ನು ಮೂಲೆಗೆ ದಬ್ಬಿದಂತಾಗಿದೆ. ವನ್ಯಜೀವಿ­ಗಳಿಗೆ  ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದಂತಾಗಿದೆ. ವನ್ಯಜೀವಿಗಳು  ನಮಗಿಂತ ಮೊದಲೇ ಈ ಭೂಮಿಗೆ ಬಂದಿವೆ. ಅವುಗಳ ಬದುಕುವ  ಹಕ್ಕನ್ನು ಕಸಿದುಕೊಂಡಿದ್ದೇವೆ. ಹೀಗಾಗಿ, ಅವು ಬದುಕುಳಿಯಲು ಏನೆಲ್ಲ ಪ್ರಯತ್ನ ನಡೆಸುತ್ತಿವೆ.
ಮನುಷ್ಯರು ಮಾಡಿರುವ ತಪ್ಪಿಗೆ ಪಶ್ಚಾತ್ತಾಪಪಡಲು ಪ್ರಾಣಿಗಳ ಸಂರಕ್ಷಣೆ­ಯೊಂದೇ ಈಗಿರುವ ದಾರಿ. ಇದರಲ್ಲಿ ಜನರು ಮತ್ತು ಮಾಧ್ಯಮಗಳ ಹೊಣೆಯಿದೆ.
ಕೃಪಾಕರ – ಸೇನಾನಿ, ವನ್ಯಜೀವಿ ಛಾಯಾಗ್ರಾಹಕರು, ಮೈಸೂರು

ತಪ್ಪಿಸಿ ಆನೆ, ಕಾಡುಹಂದಿ ಕಾಟ...

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಟ್ಕಲ್‌ ಗ್ರಾಮ ಶಿಂಷಾ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಇಲ್ಲಿ ಆನೆ, ಕಾಡುಹಂದಿಗಳು ಜಮೀನಿಗೆ ಬಂದು ಬೆಳೆ ಹಾನಿ ಮಾಡುತ್ತಲೇ ಇರುತ್ತವೆ. ಆನೆಗಳ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಆನೆಗಳು ಬಾರದಂತೆ ಸೌರ ವಿದ್ಯುತ್‌ ಬೇಲಿ ಹಾಕಲಾಗಿತ್ತು. ಆದರೂ ಅವುಗಳ ಉಪಟಳ ತಪ್ಪಿಲ್ಲ. ಜತೆಗೆ ಕಾಡುಹಂದಿಗಳ ದಾಳಿಯೂ ಮುಂದುವರಿದಿದೆ. ಇದರಿಂದ ಗ್ರಾಮಸ್ಥರನ್ನು ರಕ್ಷಿಸಿ.
ಶೇಖರ್, ಕೃಷಿಕ, ನೆಟ್ಕಲ್‌ ಗ್ರಾಮ, ಮಂಡ್ಯ ಜಿಲ್ಲೆ

ಜೀವನ ಕತ್ತಲು

ಬಂಡೀಪುರ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಮೊಳೆಯೂರು ಹುಲಿ ಸಂರಕ್ಷಿತ ಪ್ರದೇಶದ ಸೀಗೇವಾಡಿ ಹಾಡಿಯಲ್ಲಿದ್ದ ನನ್ನ ಮಾವನ ಮಗ ಚಲುವನಿಗೆ ನಮ್ಮ  ಮಗಳನ್ನು ಕೊಟ್ಟು ಮದುವೆ ಮಾಡಿದ್ದೆವು. ಅವರಿಗೆ  ಇಬ್ಬರು ಗಂಡು ಮಕ್ಕಳಿದ್ದಾರೆ. ಕೂಲಿನಾಲಿ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, 40 ವರ್ಷದವನಾಗಿದ್ದ ಚಲುವ ಹುಲಿಯ ಬಾಯಿಗೆ ತುತ್ತಾಗಿ ವರ್ಷವೇ ಕಳೆದಿದೆ. ನನ್ನ ಮಗಳ ಬದುಕು ಕತ್ತಲಾಗಿದೆ. ಅವಳು ಮತ್ತು ಅವಳ ಮಕ್ಕಳನ್ನು ನಾವೇ ಸಾಕುತ್ತಿದ್ದೇವೆ. 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೆ ಜೀವವೇ ಹೋದ ಮೇಲೆ ಹಣವನ್ನು ಇಟ್ಟುಕೊಂಡು ನಾವು ಏನು ಮಾಡಲು ಸಾಧ್ಯ?
ಚಿಕ್ಕಮ್ಮ, ಎಚ್‌.ಡಿ.ಕೋಟೆ, ಮೈಸೂರು ಜಿಲ್ಲೆ

ಸಹಕಾರ ಬೇಕು

ಕಾಡು ಪ್ರಾಣಿಗಳು ನಾಡಿಗೆ ಬರದಂಥ ಯೋಜ­ನೆ­­ಗಳ ಅನು­ಷ್ಠಾನ ಆಗಬೇಕು. ವನ್ಯಜೀವಿಗಳಿಂದ ಜನರಿಗೆ ರಕ್ಷಣೆ ನೀಡುವ ಅರಣ್ಯ ಇಲಾಖೆಯ ಸಿಬ್ಬಂದಿ­ಯನ್ನು ಸರ್ಕಾರ ಗುರು­ತಿಸಬೇಕು. ಸಮಾಜ ಸಹಕಾರ ನೀಡಬೇಕು.
ಸುರೇಶ್ ಕಣೆಮರಡ್ಕ
ಅಧ್ಯಕ್ಷರು, ಮಂಡೆಕೋಲು ಗ್ರಾಮ ಪಂಚಾಯಿತಿ, ದಕ್ಷಿಣ ಕನ್ನಡ ಜಿಲ್ಲೆ

ಪ್ರಕೃತಿಯಲ್ಲೇ ಉತ್ತರ

ನಾಡಿಗೆ ನುಗ್ಗಿ ಬರುತ್ತಿವೆ ಎನ್ನುವ ಕಾರಣಕ್ಕೆ ವನ್ಯ ಪ್ರಾಣಿಗಳನ್ನು ಹಿಡಿದು ಮಂಗಳನ ಅಂಗಳಕ್ಕೋ ಅಥವಾ ಶುಕ್ರ ಗ್ರಹಕ್ಕೋ ಸಾಗಿಸಲು ಆಗುವುದಿಲ್ಲ. ಸಕಲ ಜೀವರಾಶಿಯೂ ಭೂಮಿ ಮೇಲೆ ಒಂದಕ್ಕೊಂದು ತೊಂದರೆ ನೀಡದಂತೆ ಬದು­ಕುವ ವ್ಯವಸ್ಥೆ ಪ್ರಕೃತಿಯಲ್ಲೇ ಇದೆ. ಅದಕ್ಕೆ ಧಕ್ಕೆ ತಾರ­ದಂತೆ ಮನುಷ್ಯ ಬುದ್ಧಿವಂತಿಕೆ, ಮುನ್ನೆಚ್ಚರಿಕೆಯಿಂದ ಬದುಕಬೇಕು.
ಎಂ.ಎನ್‌.ಷಡಕ್ಷರಿ, ಪರಿಸರ ಚಿಂತಕರು, ಚಿಕ್ಕಮಗಳೂರು

ಸಹಾನುಭೂತಿ ಇರಲಿ

ಪ್ರಾಣಿಗಳ ಬಗ್ಗೆ ಜನ ಸಹಾನುಭೂತಿ ಬೆಳೆಸಿಕೊಳ್ಳಬೇಕು. ನಗರೀಕರಣ, ಕೈಗಾರಿಕೆಗಳು, ಬೃಹತ್‌ ಹೆದ್ದಾರಿ ಯೋಜನೆ­ಗಳು ಪ್ರಾಣಿಗಳ ಚಲನವಲನ ಮತ್ತು ವಾಸಸ್ಥಾನಗಳ ಮೇಲೆ ಪರಿಣಾಮ ಬೀರುತ್ತಿವೆ. ಪ್ರಾಣಿಗಳು ದಾಳಿ ನಡೆಸಿದಾಗ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳು ಅಥವಾ ಸಂಬಂಧಿಕರಿಗೆ  ನೀಡುತ್ತಿರುವ ಪರಿಹಾರ ಅತಿ ಕಡಿಮೆ. ಅದಕ್ಕೂ ಹತ್ತಾರು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು. ಈ ವ್ಯವಸ್ಥೆ­ಯನ್ನು ಬದಲಾಯಿಸಿ ಹೆಚ್ಚಿನ ಮೊತ್ತದ ಪರಿಹಾರವನ್ನು ತ್ವರಿತಗತಿಯಲ್ಲಿ ನೀಡ­ಬೇಕು. ಪ್ರಾಣಿಗಳ ದಾಳಿ ನಡೆದಾಗ ಮಾತ್ರ ವ್ಯಾಪಕ ಪ್ರಚಾರ ದೊರೆಯುತ್ತದೆ. ಉಳಿದ ದಿನಗಳಲ್ಲೂ ಈ ಬಗ್ಗೆ ವಿಶ್ಲೇಷಣೆ ನಡೆಸಿ, ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯಬೇಕು.
ಡಾ. ಕೃತಿ ಕಾರಂತ, ವನ್ಯಜೀವಿ ವಿಜ್ಞಾನಿ, ಬೆಂಗಳೂರು

ಬದುಕುವ ಹಕ್ಕಿದೆ

ಹುಲಿಯ ಬಾಯಿಗೆ ಆಹಾರವಾದ ಕುಟುಂಬಗಳ ಬಗ್ಗೆ ಮರುಕವಿದೆ. ಆದರೆ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅದ­ರಲ್ಲಿ ನಾವು ಹಸ್ತಕ್ಷೇಪ ಮಾಡಬಾರದು. ಸುಸ್ಥಿರ ಅಭಿವೃದ್ಧಿ ಮೂಲಕ ವನ್ಯಜೀವಿಗಳಿಗೆ ಮೀಸಲಾದ ಕಾಡು­ಗಳನ್ನು ಸುರಕ್ಷಿತವಾಗಿ ಇಡುವುದು ಉತ್ತಮ ಪರಿಹಾರ.
ಮುಕುಂದ ಮೈಗೂರ, ಪರಿಸರವಾದಿ, ಧಾರವಾಡ

ಸೂಕ್ಷ್ಮ ನಿರ್ವಹಣೆ ಅಗತ್ಯ

ಶಿಕಾರಿ ಇಳಿಕೆಯಾಗಿದೆ. ಹೀಗಾಗಿ ವನ್ಯಪ್ರಾಣಿಗಳ ಸಂಖ್ಯೆ­ಯಲ್ಲಿ ಸಣ್ಣ ಹೆಚ್ಚಳವೂ ಆಗಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಮೇಲೆ ದಾಳಿ ಸಹಜವಾಗಿ ಜಾಸ್ತಿಯಾಗು­ತ್ತಿದೆ. ಈ ಸೂಕ್ಷ್ಮವನ್ನು ಅರಿತು ಮಾನವ– ವನ್ಯಜೀವಿ ಸಂಘರ್ಷವನ್ನು ನಿರ್ವಹಿಸ­ಬೇಕಾಗಿದೆ. ಜನಸಂಖ್ಯಾ ಸ್ಫೋಟದ ನಡುವೆಯೂ ನಾವು ಈವರೆಗೆ ಎಲ್ಲ ವನ್ಯಜೀವಿ­ಗಳನ್ನೂ ಉಳಿಸಿಕೊಂಡು ಬಂದಿದ್ದೇವೆ. ಆ ‘ಪ್ರಜ್ಞೆ’ಯನ್ನು ಇನ್ನಷ್ಟು ಉದ್ದೀಪನಗೊಳಿಸಬೇಕಾಗಿದೆ.
ಬಾಲಚಂದ್ರ ಸಾಯಿಮನೆ, ವನ್ಯಜೀವಿ ಅಧ್ಯಯನಕಾರರು, ಶಿರಸಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT