ADVERTISEMENT

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಹೈಕೋರ್ಟ್ ನಿವೃತ್ತ  ನ್ಯಾಯಮೂರ್ತಿಗಳು ಹೇಳುವುದೇನು?
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹೇಳುವುದೇನು?   

ಆದೇಶ ಸಂಕ್ಷಿಪ್ತವಾಗಿರಲಿ
ನ್ಯಾಯಮೂರ್ತಿಗಳ ಕೊರತೆ ಇರುವ ಈ ಸಂದರ್ಭದಲ್ಲಿ ಅವರು ಶೀಘ್ರದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರೆ ತಕ್ಕಮಟ್ಟಿಗೆ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಚಿಕ್ಕಪುಟ್ಟ ಪ್ರಕರಣಗಳಲ್ಲೂ ಪುಟಗಟ್ಟಲೆ ಆದೇಶ/ ತೀರ್ಪು ಬರೆಸುವ ಬದಲು ಎಷ್ಟು ಅಗತ್ಯವಿದೆಯೋ ಅಷ್ಟನ್ನು ಬರೆಸಿ ಪ್ರಕರಣಗಳ ಶೀಘ್ರ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು. ಜಮೀನು ಇತ್ಯಾದಿ ಪ್ರಕರಣಗಳಲ್ಲಿ ಎರಡೂ ಕಡೆಯ ಕಕ್ಷಿದಾರರ ಮನವೊಲಿಸಿ ಒಪ್ಪಂದಕ್ಕೆ ಬರುವಂಥ ತೀರ್ಪು ನೀಡುವ ಮೂಲಕ ಮೇಲ್ಮನವಿಗೆ ಅವಕಾಶ ಇಲ್ಲದಂತೆ ಮಾಡಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ನ್ಯಾಯಾಲಯಗಳ ಮೇಲಿನ ಹೊರೆಯನ್ನು ನ್ಯಾಯಮೂರ್ತಿಗಳೇ ಕಮ್ಮಿ ಮಾಡಬಹುದು. ಏಕೆಂದರೆ ಇಂಥ ಪ್ರಕರಣಗಳು 20-30 ವರ್ಷ ಕೋರ್ಟ್‌ಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿಯುವುದೇ ಹೆಚ್ಚು. 
-ನ್ಯಾ. ಕೆ.ಎಲ್.ಮಂಜುನಾಥ

** *** **
ಅಧೀನ ಕೋರ್ಟ್‌ಗಳದ್ದೂ ಚರ್ಚೆಯಾಗಲಿ

ಈಗ ಎಲ್ಲೆಲ್ಲೂ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯದ್ದೇ ಚರ್ಚೆ. ಮಾಧ್ಯಮಗಳೂ ಈ ಬಗ್ಗೆಯೇ

ಹೆಚ್ಚು ಗಮನ ಹರಿಸುತ್ತಿವೆ. ಆದರೆ ಇದಕ್ಕಿಂತ ಹೆಚ್ಚಾಗಿ ಚರ್ಚೆ ಆಗಬೇಕಿರುವುದು ಅಧೀನ ಕೋರ್ಟ್‌ಗಳ ಸಮಸ್ಯೆ. ಏಕೆಂದರೆ ಸುಮಾರು 20 ವರ್ಷಗಳಿಂದ ಅಧೀನ ಕೋರ್ಟ್‌ಗಳಲ್ಲಿ ಸಂಪೂರ್ಣ ಹುದ್ದೆಗಳ ಭರ್ತಿಯಾಗಿಲ್ಲ. ಇದರಿಂದಾಗಿ ನ್ಯಾಯಾಧೀಶರು ಮಾತ್ರವಲ್ಲದೆ ನೌಕರರು ಕೂಡ 4-5 ಗಂಟೆ ಹೆಚ್ಚಿಗೆ ದುಡಿಯಬೇಕಾಗಿ ಬಂದಿದೆ. ನ್ಯಾಯಾಧೀಶರ ಹುದ್ದೆಗೆ ಅರ್ಜಿ ಕರೆದು ಅರ್ಹರನ್ನು ಹೈಕೋರ್ಟ್‌ ನೇಮಕ ಮಾಡಲು ಸುಮಾರು ಆರು ತಿಂಗಳು ಬೇಕು. ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ಅವರಿಗೆ ತರಬೇತಿ ನೀಡಲು ಮತ್ತೆ ಆರು ತಿಂಗಳು ತಗಲುತ್ತದೆ. ಹೀಗೆ ಒಂದು ವರ್ಷ ಅಲ್ಲೇ ಕಳೆದುಹೋಗುತ್ತದೆ. ಆದ್ದರಿಂದ  ಹುದ್ದೆ ತೆರವುಗೊಳ್ಳುವವರೆಗೆ ಕಾಯದೆ ತಕ್ಷಣ ನೇಮಕಾತಿ ಪ್ರಕ್ರಿಯೆ ಆಗುವಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ಹೀಗಾದಲ್ಲಿ ಅಧೀನ ಕೋರ್ಟ್‌ಗಳಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿ ಆಗಿ ಹೊರೆ ತಪ್ಪಿಸಬಹುದಾಗಿದೆ.
-ನ್ಯಾ. ಎ.ಸಿ.ಕಬ್ಬಿಣ

** *** **

ಕೊಟ್ಟಿದ್ದು ಕಮ್ಮಿ, ನೇಮಕವೂ ಇಲ್ಲ
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ನ್ಯಾಯಾಲಯಗಳಿಗೆ ಕೊಟ್ಟಿರುವ ಒಟ್ಟು ನ್ಯಾಯಾಧೀಶರ ಸಂಖ್ಯೆಯೇ ಕಮ್ಮಿ. ಪರಿಸ್ಥಿತಿ ಹೀಗಿದ್ದರೂ ನಿಗದಿತ ನ್ಯಾಯಾಧೀಶರ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ನಡೆಯುತ್ತಿಲ್ಲ. ಇಂಥ ಸಮಸ್ಯೆಯ ನಡುವೆ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ. ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ನ್ಯಾಯಾಧೀಶರು ಶ್ರಮವಹಿಸಿ ದುಡಿಯುತ್ತಿದ್ದರೂ ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು ಕಷ್ಟವೇ ಆಗಿದೆ.
-ನ್ಯಾ. ಕೇಶವ ನಾರಾಯಣ

** *** **

ವಕೀಲರ ಸಹಕಾರ ಅಗತ್ಯ
ಜನಸಂಖ್ಯೆ ಹೆಚ್ಚುತ್ತಿದೆ. ಪ್ರಕರಣಗಳ ಸಂಖ್ಯೆಯೂ ಅದೇ ವೇಗದಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಹಿಂದಿನ ಜನಸಂಖ್ಯೆ ಹಾಗೂ

ADVERTISEMENT

ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿಯೇ ಇನ್ನೂ ನ್ಯಾಯಾಧೀಶರ ಸಂಖ್ಯೆ ಇದೆ. ರಾಜ್ಯ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷನಾಗಿದ್ದ ನಾನು ಅಲ್ಲಿಯೂ ಕಾರ್ಯ ಒತ್ತಡ ಇರುವುದನ್ನು ಬಲ್ಲೆ. ಈಗಿರುವ ಸಮಸ್ಯೆಗಳ ಜೊತೆಗೆ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕಿದ್ದರೆ ಅದು ನ್ಯಾಯಾಧೀಶರೊಬ್ಬರಿಂದ ಸಾಧ್ಯವಿಲ್ಲ. ವಕೀಲರ ಸಹಕಾರವೂ ಅಗತ್ಯ.
-ನ್ಯಾ. ಕೆ.ರಾಮಣ್ಣ


** *** **

‘ಜಾತಿ’ ಪ್ರವೇಶವೂ ಕಾರಣ
ನಿಯಮದ ಪ್ರಕಾರ ನ್ಯಾಯಮೂರ್ತಿಗಳ ನಿವೃತ್ತಿಯ ಆರು ತಿಂಗಳು ಮುಂಚಿತವಾಗಿ ಹೈಕೋರ್ಟ್, ಸರ್ಕಾರಕ್ಕೆ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಬೇಕು. ಆ ಹೆಸರುಗಳ ಪೈಕಿ ಕೆಲವನ್ನು ಅಥವಾ ಎಲ್ಲವನ್ನೂ ರಾಜ್ಯ ಸರ್ಕಾರ ಅನುಮೋದಿಸಿ ಮುಂದಿನ ಪ್ರಕ್ರಿಯೆಗೆ ಕೇಂದ್ರಕ್ಕೆ ಕಳುಹಿಸಬೇಕು.  ಅದನ್ನು ಬಿಟ್ಟು ನ್ಯಾಯಮೂರ್ತಿಗಳ ನಿವೃತ್ತಿಯ ನಂತರ ಪ್ರಕ್ರಿಯೆ ಶುರು ಮಾಡಿದರೆ, ಆ ಆರು ತಿಂಗಳ ಅವಧಿಯ ಸಂಪೂರ್ಣ ಪ್ರಕರಣಗಳು ಇತ್ಯರ್ಥವಾಗದೇ ಉಳಿದುಬಿಡುತ್ತವೆ. ಈಗ ಆಗುತ್ತಿರುವುದು ಅದೇ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮೀಸಲಾತಿ ಇಲ್ಲದಿದ್ದರೂ ರಾಜಕಾರಣಿಗಳ ‘ಜಾತಿ’ ಪ್ರವೇಶ ಮಾಡುವ ಕಾರಣ ಹೈಕೋರ್ಟ್‌ನಿಂದ ಶಿಫಾರಸುಗೊಂಡ ಹೆಸರುಗಳು ಅಲ್ಲಿಯೇ ಕೊಳೆಯತೊಡಗುತ್ತವೆ. ಆದ್ದರಿಂದ ಈ ಸಮಸ್ಯೆಗೆ ಸಂಪೂರ್ಣವಾಗಿ ಸರ್ಕಾರದ ವೈಫಲ್ಯವೇ ಕಾರಣ ಎನ್ನಬಹುದು.
-ನ್ಯಾ. ರಾಮಾ ಜೋಯಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.