ADVERTISEMENT

‘ದಕ್ಷಿಣೆ’ಗೆ ಮನ್ನಣೆ

ಎಲ್‌.ಆರ್‌.ಶಿವರಾಮೇಗೌಡ
Published 14 ನವೆಂಬರ್ 2014, 19:30 IST
Last Updated 14 ನವೆಂಬರ್ 2014, 19:30 IST

ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಕನಿಷ್ಠ ಎರಡು ಎಕರೆ ಭೂಮಿ ಇರಬೇಕು, ಆಟದ ಮೈದಾನ, ಆವರಣ ಗೋಡೆ ಸೇರಿ­ದಂತೆ ಅಗತ್ಯ ಮೂಲ­ಸೌಕರ್ಯ ಇರಬೇಕು ಎಂದು ಹೇಳುತ್ತದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಸೂಚನೆ. ಈ ಅಧಿಸೂಚನೆ ಕಾಗದದಲ್ಲಿ ಮಾತ್ರ ಇದೆ.  ಅನೇಕ ಅನುದಾನರಹಿತ ಶಾಲೆಗಳಲ್ಲಿ ಈ ಎಲ್ಲ ಸೌಲಭ್ಯಗಳು ಇಲ್ಲವೇ ಇಲ್ಲ. ಹಳೆ ಚಲನಚಿತ್ರ ಮಂದಿರ, ಹಳೆ ಮಾಲ್‌ಗಳನ್ನು ನವೀಕರಣ ಮಾಡಿ ಚಂದದ ಬಣ್ಣ ಬಳಿದು ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ.

ಕೆಲವು ಶಾಲೆಗಳು ಮಹಡಿ ಮೇಲಿನ ಇಕ್ಕಟ್ಟಾದ ಕೋಣೆಗಳಲ್ಲಿ ಇವೆ. ಈ ಶಾಲೆಗಳೆಲ್ಲ ‘ಅಂತರ ರಾಷ್ಟ್ರೀಯ ಶಾಲೆಗಳು’.  ಇಲ್ಲಿ ಸೌಲಭ್ಯ ನಾಸ್ತಿ, ಶುಲ್ಕ ಮಾತ್ರ ಲಕ್ಷಾಂತರ. ಹೆಚ್ಚಿನ ಶಾಲೆಗಳ ಒಡೆಯರು ಅನ್ಯ ರಾಜ್ಯದವರು. ಅನ್ಯ ರಾಜ್ಯದ ‘ಶಿಕ್ಷಣೋದ್ಯಮಿ’ಗಳಿಗೆ ಕರ್ನಾಟಕ ಈಗ ‘ಹುಲ್ಲುಗಾವಲು’ ಆಗಿದೆ.

ಜೊತೆಗೆ ನಮ್ಮ ರಾಜ್ಯದ ಎಲ್ಲರೂ ಸಾಚಾಗಳಲ್ಲ. ಶೇ 10 ಮಂದಿ ಆಡಳಿತ ಮಂಡಳಿ­ಯವರು ಕಾನೂನು ಉಲ್ಲಂಘನೆ ಮಾಡು­ತ್ತಿ­ದ್ದಾರೆ. ಇವರಿಗೆಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳ ಶ್ರೀರಕ್ಷೆ ಇದೆ. ಕ್ಷೇತ್ರ ಶಿಕ್ಷಣಾಧಿ­ಕಾರಿಗಳು, ಉಪ­ನಿರ್ದೇಶಕರು (ಡಿಡಿಪಿಐ) ಇಂತಹ  ಶಾಲಾ ಆಡಳಿತ ಮಂಡಳಿಯವ­ರೊಂದಿಗೆ ‘ಹೊಂದಾಣಿಕೆ’ ಮಾಡಿ­ಕೊಳ್ಳು­ತ್ತಾರೆ. ಒಮ್ಮೆ ಅನುಮತಿ ನೀಡಿದ ಬಳಿಕ ಶಾಲೆ ಕಡೆಗೆ ತಲೆ ಹಾಕುವುದಿಲ್ಲ. ಅವರಿಗೆ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ‘ದಕ್ಷಿಣೆ’ ಸಲ್ಲಿಸು­ತ್ತಾರೆ. ಅಧಿಕಾರಿಗಳ ಇಂತಹ ಧೋರಣೆಯಿಂದಲೇ ಅನಧಿಕೃತ ಶಾಲೆಗಳು ತಲೆ ಎತ್ತುತ್ತಿವೆ.

ಒಂದು ಶಾಲೆಗೆ ಅನುಮತಿ ಪಡೆದು ಹತ್ತಾರು ಶಾಲೆಗಳನ್ನು ನಡೆಸಲಾಗುತ್ತದೆ. ಆಂಧ್ರ ಮೂಲದ ನಾರಾಯಣ ಟೆಕ್ನೊ ಸಂಸ್ಥೆಯ 19 ಶಾಖೆಗಳು ಬೆಂಗಳೂರಿನಲ್ಲಿ ಇವೆ. ಅನುಮತಿ ಇರುವುದು ಸಂಸ್ಥೆಯ ನಾಲ್ಕು ಶಾಖೆಗಳಿಗೆ ಮಾತ್ರ. ವಿಬ್ಗಯೊರ್‌, ಆರ್ಕಿಡ್‌, ಚೈತನ್ಯ ಟೆಕ್ನೊ ಮತ್ತಿತರ ಸಂಸ್ಥೆಗಳದ್ದೂ ಇದೇ ಕಥೆ. ಇಂತಹ ಕೆಲ ಸಂಸ್ಥೆಗಳಲ್ಲೇ ಮಕ್ಕಳ ಮೇಲೆ ಅತ್ಯಾಚಾರದಂಥ ಪ್ರಕರಣಗಳು ನಡೆದಿವೆ. ಈ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ಆಯುಕ್ತರೇ ಕಾರಣ. ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅನುಷ್ಠಾನದ ಗೊಂದಲ, ಮಕ್ಕಳ ಸುರಕ್ಷತೆಯ ಸಮಸ್ಯೆ ಬಿಗಡಾಯಿಸಿ­ದಾಗ ಮಾತ್ರ ಅಧಿಕಾರಿಗಳು ಸುತ್ತೋಲೆ ಹೊರಡಿಸಿ ಸುಮ್ಮನಾಗುತ್ತಾರೆ.

ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಿಕೊಡುವಂತೆ ಕ್ಷೇತ್ರ ಶಿಕ್ಷ­ಣಾಧಿ­ಕಾರಿಗಳಿಗೆ 10 ದಿನಗಳ ಹಿಂದೆಯೇ ಆಯುಕ್ತರು ಸೂಚನೆ ನೀಡಿದ್ದಾರೆ. ಈವ­ರೆಗೆ ಪಟ್ಟಿ ಸಿದ್ಧವಾದಂತಿಲ್ಲ. ಬೆಂಗಳೂರಿನಲ್ಲಿರುವ 150 ಅನಧಿಕೃತ ಶಾಲೆಗಳ ಪಟ್ಟಿಯನ್ನು ನಾವು ಆಯುಕ್ತರಿಗೆ ಸಲ್ಲಿಸಿ ವಾರದ ಮೇಲಾಯಿತು. ಇಲ್ಲಿ ತನಕ ಒಂದೇ ಒಂದು ಶಾಲೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಇಂತಹ ಅಧಿಕಾರಿಗಳಿಂದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಸಾಧ್ಯವೇ? ಶಿಕ್ಷಣ ಇಲಾಖೆಯ ಅಧಿಕಾರಿಗಳ ಉದಾಸೀನದಿಂದ ಪೊಲೀಸ್‌ ಇಲಾಖೆ ಕೈಗೆ ಶಿಕ್ಷಣ ಇಲಾಖೆ ಹೋಗಿದೆ. ಅವರು ಶಾಲಾ ಸುರಕ್ಷತೆಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿದೆ. ಇದು ದುರ್ದೈವ.

ಧಾರ್ಮಿಕ ಅಲ್ಪಸಂಖ್ಯಾತ ಹಾಗೂ ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಅಲ್ಪಸಂಖ್ಯಾತ ಶಾಲೆಯ ಹೆಸರಿನಲ್ಲಿ ಬಿಷಪ್‌ ಕಾಟನ್‌, ಸೋಫಿಯಾ, ಬಾಲ್ಡ್‌ವಿನ್‌, ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಂತಹ ಶಾಲೆಗಳು ವಿನಾಯಿತಿ ಪಡೆದಿವೆ. ಭಾಷಾ ಅಲ್ಪಸಂಖ್ಯಾತ ಶಾಲೆ ಹೆಸರಿ­ನಲ್ಲಿ ವಿನಾಯಿತಿ ಪಡೆಯುವವರು ಅನ್ಯ ರಾಜ್ಯದಿಂದ ಬಂದವರು. ರಾಜ್ಯ­ದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ 3 ವರ್ಷ ಕಳೆದ ಕೂಡಲೇ ಈ ಆಡಳಿತ ಮಂಡಳಿಯವರು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತಾರೆ. ಅಧಿಕಾರಿಗಳು ಉದಾರವಾಗಿ ಒಪ್ಪಿಕೊಳ್ಳುತ್ತಾರೆ. ಅನ್ಯಾಯ ಆಗುವುದು ಬಡ ವಿದ್ಯಾರ್ಥಿಗಳಿಗೆ.

ಬಲಾಢ್ಯ ಶಿಕ್ಷಣ ಸಂಸ್ಥೆಗಳು, ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ಸಿಇಟಿ, ವೈದ್ಯಕೀಯ ಶಿಕ್ಷಣದಂತೆಯೇ ಗೋಜಲು ಗೋಜಲಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸ­ಬೇಕು. ಕಾನೂನು ಉಲ್ಲಂಘಿಸುವ ಆಡಳಿತ ಮಂಡಳಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

(ಲೇಖಕರು ರಾಜ್ಯ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT