ADVERTISEMENT

ಆನ್‌ಲೈನ್ ಬೈದಾಟಕ್ಕೆ ನಿರ್ಲಕ್ಷ್ಯವೇ ಮದ್ದು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ಟ್ರೋಲ್
ಟ್ರೋಲ್   

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ ಟ್ರೋಲಿಗರ ದಾಳಿಗೆ ಒಳಪಟ್ಟಿರುತ್ತಾರೆ. ಇಂಟರ್ನೆಟ್ ಜಮಾನದಲ್ಲಿ ‘ತಳಬುಡವಿಲ್ಲದೆ ಬೈಯುವುದು, ಲೇವಡಿ ಮಾಡುವುದು, ಹಾಸ್ಯ ಮಾಡುವುದು, ಆರೋಪಿಸುವುದು, ಅವಮಾನಿಸುವುದು’ ಎಂದೆಲ್ಲಾ ಅರ್ಥ ಪಡೆದುಕೊಂಡಿರುವ ಟ್ರೋಲ್ (troll) ಎನ್ನುವ ಇಂಗ್ಲಿಷ್ ಪದದ ಮೂಲ ಅರ್ಥ ವಿಶಿಷ್ಟವಾಗಿದೆ. ‌ಯೂರೋಪಿಯನ್ ಜಾನಪದ ಕಥೆಗಳಲ್ಲಿ ಪ್ರಸ್ತಾಪವಾಗುವ ಬೃಹತ್ ಗಾತ್ರದ ನಿರುಪದ್ರವಿ ಗುಡ್ಡಗಾಡು ಜೀವಿಗಳನ್ನು ಟ್ರೋಲ್ ಎನ್ನುತ್ತಿದ್ದರು. ಆದರೆ 90ರ ದಶಕದಲ್ಲಿ ಈ ಪದವು ತನ್ನ ಮೂಲ ಅರ್ಥವನ್ನು ಕಳಚಿಕೊಂಡು, ಹೊಸ ಅರ್ಥ ಧರಿಸಿಕೊಂಡಿತು.

ಟ್ರೋಲಿಗರ ದಾಳಿಗೆ ಒಳಗಾದಾಗ ಏನು ಮಾಡಬೇಕು ಎನ್ನುವುದು ನೆಟಿಜನ್ನರನ್ನು ಕಾಡುವ ಬಹುಮುಖ್ಯ ಪ್ರಶ್ನೆ. ಈ ಹಿಂದೆ ದಾಳಿ ಎದುರಿಸಿದ ಅನುಭವ ಇರುವವರು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ದಾರಿ ಕಂಡುಕೊಂಡಿರುತ್ತಾರೆ. ಆದರೆ ಮೊದಲ ಬಾರಿಗೆ ದಾಳಿಗೆ ಒಳಗಾದವರು ಮಾತ್ರ ಮಾನಸಿಕವಾಗಿ ಖಿನ್ನರಾಗಿ, ಹೈರಾಣಾಗಿ ಹೋಗುತ್ತಾರೆ.

ನಿರೀಕ್ಷಿತ: ಸಾಮಾಜಿಕ ಜಾಲತಾಣಗಳಿಗೆ ತೆರೆದುಕೊಂಡಿದ್ದೀರಿ ಎಂದರೆ ನೀವು ನಿಮ್ಮ ಸೇಫ್‌ಜೋನ್‌ನಿಂದ ತುಸು ಹೊರಗೆ ಬಂದಿದ್ದೀರಿ ಎಂದೇ ಅರ್ಥ. ನೀವು ಪೋಸ್ಟ್ ಮಾಡುವ ಫೋಟೊಗಳು, ಬರಹಗಳಿಗೆ ಸಾಕಷ್ಟು ಜನರು ಲೈಕ್, ಕಾಮೆಂಟ್ ಮಾಡುತ್ತಾರೆ. ಅವನ್ನೆಲ್ಲ ಖುಷಿಯಾಗಿ ಸ್ವೀಕರಿಸಿರುತ್ತೀರಿ. ಆದೇ ರೀತಿ ಟೀಕೆಯನ್ನೂ ಸ್ವೀಕರಿಸಬೇಕಾಗುತ್ತದೆ. ‌ ಟ್ರೋಲ್ ಎನ್ನುವುದು ವಿಶಾಲ ಅರ್ಥದಲ್ಲಿ ಟೀಕೆಯೇ ಆಗಿರುತ್ತದೆ. ಆದರೆ ತರ್ಕವನ್ನು ನಿರೀಕ್ಷಿಸಲು ಆಗುವುದಿಲ್ಲ.

ADVERTISEMENT

ಅಯ್ಯೋ, ನಾನು ಹಾಗಿಲ್ಲ: ನಿಮ್ಮ ಹೇಳಿಕೆ ಅಥವಾ ಪೋಸ್ಟ್‌ನ ಒಂದು ಎಳೆ ಹಿಡಿದು ಆರಂಭವಾಗುವ ಟೀಕೆಗಳು ಅನೇಕ ಸಂದರ್ಭಗಳಲ್ಲಿ ತೀರಾ ವೈಯಕ್ತಿಕವಾಗಿಯೂ, ಕ್ರೂರವಾಗಿಯೂ ಇರುತ್ತವೆ. ಪರಿಚಯ ಇಲ್ಲದವರೂ ನಿಮ್ಮ ಮೇಲೆ ಟೀಕಾಪ್ರಹಾರ ನಡೆಸುತ್ತಿರುತ್ತಾರೆ. ನೀವು ಮಾಡದ ಕೆಲಸ, ನೀವು ಇಷ್ಟಪಡದ ವರ್ತನೆಗಳನ್ನು ನಿಮಗೆ ಆರೋಪಿಸಲಾಗುತ್ತದೆ. ನಿಮ್ಮ ಜಾತಿ, ಧರ್ಮ, ಲಿಂಗಗಳೂ ಟೀಕೆಯ ವಸ್ತುವಾಗುತ್ತವೆ. ‘ಅಯ್ಯೋ, ನಾನು ಅಂಥವಳಲ್ಲ, ಇವರೆಲ್ಲ ಏಕೆ ಹೀಗೆ ಮಾತಾಡ್ತಿದ್ದಾರೆ. ನನ್ನ ಯಾವ ತಪ್ಪಿಗೆ ಈ ಶಿಕ್ಷೆ’ ಎಂದು ಹಲವರು ಕೊರುಗುತ್ತಾರೆ. ಟ್ರೋಲ್ ಮಾಡುವವರ ಉದ್ದೇಶವೂ ಇದೇ ಆಗಿರುತ್ತದೆ.

ಪ್ರತಿಕ್ರಿಯಿಸುವ ಮೊದಲ ಯೋಚಿಸಿ: ಟ್ರೋಲ್ ಮಾಡುವ ಉದ್ದೇಶ ಹೊಂದಿರುವವರು ನಿಮ್ಮದೇ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಾಕಿಕೊಂಡು ವಾಚಾಮಗೋಚರ ಬೈದಾಡಲು ಮುಂದಾಡಬಹುದು. ನೀವು ಖಾಸಗಿಯಾಗಿ ಹೇಳಿರುವ ಮಾತು, ಪತ್ರಿಕೆಗಳಲ್ಲಿ ಪ್ರಕಟವಾದ ಹೇಳಿಕೆಗಳು, ಬರಹಗಳೂ ಹೀಗೆ ಬೈದಾಟಕ್ಕೆ ಕಾರಣವಾಗುತ್ತವೆ. ಇಂಥ ಸಂದರ್ಭದಲ್ಲಿ ಉದ್ವೇಗದಿಂದ ನೀವು ಅವರ ಪ್ರಶ್ನೆಗಳಿಗೆ ಉತ್ತರಿಸಲು ಹೊರಟರೆ ಟ್ರೋಲಿಗರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗುತ್ತದೆ. ನಿಮ್ಮ ಉತ್ತರಗಳು ಅವರ ಬೈದಾಟಕ್ಕೆ ಮತ್ತಷ್ಟು ಅಂಶಗಳನ್ನು ದೊರಕಿಸಿಕೊಡುತ್ತವೆ.

ಖಿನ್ನರಾಗಬೇಡಿ: ಟ್ರೋಲಿಗರ ದಾಳಿಯಿಂದ ನಮ್ಮ ಮನಸ್ಥಿತಿ ಕುಸಿದಂತೆ ಆಗಿರುತ್ತದೆ. ಕಚೇರಿಯಲ್ಲಿ ಯಾರು ಏನು ಮಾತನಾಡಿದರೂ, ಗೆಳೆಯರ ಬಳಗದಲ್ಲಿ ಏನು ಸಂವಾದ ನಡೆದರೂ ನನ್ನ ಬಗ್ಗೆಯೇ ಮಾತನಾಡುತ್ತಿರಬಹುದು ಎನಿಸುತ್ತೆ. ನನ್ನ ಮೇಲೆ ನಡೆಯುತ್ತಿರುವ ಟ್ರೋಲ್‌ಗಳಿಗೆ ಇವರು ಯಾರೂ ಪ್ರತಿಕ್ರಿಯಿಸಿಲ್ಲವಲ್ಲ ಎಂದು ಎಲ್ಲರ ಮೇಲೂ ಸಿಟ್ಟು ಬರುತ್ತೆ.

ವಾಸ್ತವ ಅಂದ್ರೆ, ನಿಮ್ಮ ಗೆಳೆಯರಿಗೆ ನಿಮ್ಮ ಬಗ್ಗೆ ಸಹಾನುಭೂತಿ ಇರುತ್ತೆ. ಆದರೆ ಅದನ್ನು ಆನ್‌ಲೈನ್‌ನಲ್ಲಿ ತೋರಿಸಲು ಅವರಿಗೆ ಇಷ್ಟವಾಗುವುದಿಲ್ಲ ಅಷ್ಟೇ. ನಿಮ್ಮೊಡನೆ ಈ ವಿಷಯ ಅವರು ಮಾತನಾಡುತ್ತಿಲ್ಲ ಎಂದರೆ, ಅವರಿಗೆ ನಿಮ್ಮನ್ನು ನೋಯಿಸಲು ಇಷ್ಟವಿಲ್ಲ ಎಂದು ಅರ್ಥ.

ನಿರ್ಲಕ್ಷಿಸಿ: ನಿಮ್ಮನ್ನು ಬೈಯುವ ಮೂಲಕ ಪ್ರಚಾರ ಪಡೆಯುವುದು ಟ್ರೋಲ್ ಮಾಡುವವರ ಉದ್ದೇಶ. ನೀವು ಪ್ರತಿಕ್ರಿಯಿಸಿದರೆ ಅವರ ಉದ್ದೇಶ ಈಡೇರಿದಂತೆ ಆಗುತ್ತದೆ. ಹೀಗಾಗಿ ನಿರ್ಲಕ್ಷಿಸುವುದು ಒಳಿತು. ಯಾರನ್ನಾದರೂ ನಾವು ನಿರ್ಲಕ್ಷಿಸುತ್ತೇವೆ ಎನ್ನುವುದು ಸಹ ಎಷ್ಟೋ ಸಲ ಪ್ರಬಲ ಸಂದೇಶವೇ ಆಗಿರುತ್ತದೆ. ಟ್ರೋಲ್‌ಗಳಿಂದ ಕಿರುಕುಳ ಅನುಭವಿಸಿದ ಶೇ60ರಷ್ಟು ಮಂದಿ ನಿರ್ಲಕ್ಷ್ಯವೇ ಮದ್ದು ಎಂದು ಹಲವು ಸಮೀಕ್ಷೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಬಣ್ಣ ಬಯಲು ಮಾಡಿ: ನಿಮ್ಮ ವಿರುದ್ಧ ಟ್ರೋಲ್ ಮಾಡುತ್ತಿರುವವರು ಯಾರು ಎಂದು ನಿಮಗೆ ಸ್ಪಷ್ಟವಾಗಿ ತಿಳಿದಿದ್ದರೆ ಅವರ ಉದ್ದೇಶ ಮತ್ತು ನಿಜಬಣ್ಣ ಬಯಲು ಮಾಡಿ. ನೀವು ನೇರವಾಗಿ ಪ್ರತಿಕ್ರಿಯಿಸುವುದಕ್ಕಿಂತ ನಿಮಗೆ ತಿಳಿದವರು ಪ್ರತಿಕ್ರಿಯಿಸುವಂತೆ ಮಾಡುವುದು ಜಾಣತನ. ನಿಮ್ಮ ಆಪ್ತ ಗೆಳೆಯರನ್ನು ಪ್ರತಿಕ್ರಿಯಿಸು ವಂತೆ ವಿನಂತಿಸುವುದು ಅವಮಾನದ ಸಂಗತಿ ಅಲ್ಲ. ‌ ಟ್ರೋಲಿಂಗ್ ಹದ್ದು ಮೀರಿದರೆ ಪೊಲೀಸರ ನೆರವು ಪಡೆಯಲು ಹಿಂಜರಿಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.