ADVERTISEMENT

ಆಸ್ಟ್ರಿಚ್‌ ಮೂಲ ಯಾವುದು?

25 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿದ್ದ ಆಸ್ಟ್ರಿಚ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:30 IST
Last Updated 16 ಮಾರ್ಚ್ 2017, 19:30 IST
ಆಸ್ಟ್ರಿಚ್‌ ಮೂಲ ಯಾವುದು?
ಆಸ್ಟ್ರಿಚ್‌ ಮೂಲ ಯಾವುದು?   
ಆಫ್ರಿಕಾ ಮೂಲದ್ದೆಂದು ನಂಬಲಾಗಿರುವ ಆಸ್ಟ್ರಿಚ್‌ ಪಕ್ಷಿ 25 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿಯೂ ಇತ್ತು ಎನ್ನುವ ಸಂಗತಿ ಜೀವಕೋಶ ಮತ್ತು ಜೀವಕಣ ಅಧ್ಯಯನ ಕೇಂದ್ರ  (ಸಿಸಿಎಂಬಿ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 
 
ರಾಜಸ್ತಾನ ಹಾಗೂ ಮಧ್ಯಪ್ರದೇಶದ ನಾನಾ ಭಾಗಗಳಲ್ಲಿ ಆಸ್ಟ್ರಿಚ್‌ಗಳ ಮೊಟ್ಟೆಯ ಚಿಪ್ಪುಗಳು  (ಎಗ್‌ ಶೆಲ್‌) ಭೂವಿಜ್ಞಾನಿಗಳಿಗೆ ಹಾಗೂ ಪುರಾತತ್ವ ಶಾಸ್ತ್ರಜ್ಞರಿಗೆ ದೊರಕಿದ್ದವು. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. 
 
‘ಆಫ್ರಿಕಾದ ಆಸ್ಟ್ರಿಚ್‌ಗಳ ಡಿಎನ್‌ಎಗೂ ಭಾರತದಲ್ಲಿ ಸಿಕ್ಕಿರುವ ಮೊಟ್ಟೆಯ ಚಿಪ್ಪಿನ ಡಿಎನ್‌ಗೂ ಸಾಮ್ಯತೆ ಇದೆ. ಕಾರ್ಬನ್‌ ಡೇಟಿಂಗ್‌ಗೆ ಒಳಪಡಿಸಿದಾಗ ಇವು 25 ಸಾವಿರ ವರ್ಷಗಳಷ್ಟು ಹಳೆಯವು ಎಂಬುದು ದೃಢಪಟ್ಟಿದೆ’ ಎಂದು ಅಧ್ಯಯನ ಕೇಂದ್ರದ ಹಿರಿಯ ವಿಜ್ಞಾನಿ ಕುಮಾರಸ್ವಾಮಿ ತಂಗರಾಜ ಹೇಳಿದ್ದಾರೆ. 
 
ಆಸ್ಟ್ರಿಚ್‌ಗಳು ಮೂಲತಃ ಗೊಂಡ್ವಾನ್‌ ಖಂಡಕ್ಕೆ (15 ಕೋಟಿ  ವರ್ಷಗಳ ಹಿಂದೆ ದಕ್ಷಿಣ ಅಮೆರಿಕ, ಅರೇಬಿಯಾ, ಆಫ್ರಿಕಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಭಾರತ ಹಾಗೂ ಮಡಗಾಸ್ಕರ್‌ಗಳನ್ನು ಒಳಗೊಂಡ ಮಹಾಖಂಡವೇ ಈ ಗೊಂಡ್ವಾನ್‌) ಸೇರಿದ್ದವು.  ನಂತರ ಈ ಖಂಡ ಭೌಗೋಳಿಕವಾಗಿ ವಿಭಜನೆ ಆದಾಗ ಆಫ್ರಿಕಾ ಹಾಗೂ ಇಂಡೊ –ಮಡಗಾಸ್ಕರ್‌ ಎಂದು ಗುರುತಿಸಿಕೊಂಡಿತು.

ಈ ವಿಭಜನೆಯಿಂದಾಗಿ ಆಸ್ಟ್ರಿಚ್‌ಗಳು ಆಫ್ರಿಕಾದ ಭಾಗಗಳಲ್ಲಿ ಉಳಿದುಕೊಂಡವು. ಮೊಟ್ಟೆಯ ಚಿಪ್ಪೊಂದರಿಂದಲೇ ಆಸ್ಟ್ರಿಚ್‌ಗಳು ಭಾರತದಲ್ಲಿದ್ದವು ಎಂದು ಸಾಬೀತು ಮಾಡುವುದು ಸಾಧ್ಯವಿಲ್ಲ ಎಂಬ ವಾದವೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.