ADVERTISEMENT

ಎಮುಗಳ ವಿರುದ್ಧ ಸೈನಿಕರಿಗೆ ಸೋಲು!

ಪೃಥ್ವಿರಾಜ್ ಎಂ ಎಚ್
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST
ಎಮುಗಳ ವಿರುದ್ಧ  ಸೈನಿಕರಿಗೆ ಸೋಲು!
ಎಮುಗಳ ವಿರುದ್ಧ ಸೈನಿಕರಿಗೆ ಸೋಲು!   
‘ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಪಕ್ಷಿ ಮತ್ತು ಮಾನವನ ನಡುವಿನ ಯುದ್ಧ ಇಂದು ಅಂತ್ಯಗೊಂಡಿದ್ದು, ಪಕ್ಷಿಗಳಿಗೆ ಜಯ ಒಲಿದಿದೆ. ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರು ಸೋಲನ್ನು ಒಪ್ಪಿಕೊಂಡಿದ್ದಾರೆ’. ಈ ಘಟನೆ ಈಗ ನಡೆದಿದ್ದರೆ, ಬಹುಶಃ ಇದೇ ರೀತಿ ವರದಿಯಾಗುತ್ತಿತ್ತು.
 
ಪ್ರಾಣಿ–ಪಕ್ಷಿಗಳು ಮಾನವನ ವಿರುದ್ಧ ಜಯಿಸಿರುವುದು, ಪುರಾಣ, ಪುಸ್ತಕಗಳಲ್ಲಿ ಮಾತ್ರ ಎಂಬುದಷ್ಟೇ ನಮಗೆ ಗೊತ್ತು. ಆದರೆ ನಿಜ ಜೀವನದಲ್ಲೂ ಪಕ್ಷಿಗಳು ಮಾನವನ ವಿರುದ್ಧ ಜಯಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. 
 
ಇಷ್ಟಕ್ಕೂ ನಡೆದದ್ದು ಏನು? 
1930ರಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದವು. ಆಹಾರ ಧಾನ್ಯಗಳ ಕೊರತೆಯೂ ವಿಪರೀತವಾಗಿತ್ತು. ಇದಕ್ಕಾಗಿ ದೇಶದಾದ್ಯಂತ ಗೋಧಿ ಇಳುವರಿ ಹೆಚ್ಚಾಗಬೇಕೆಂದು ಆಸ್ಟ್ರೇಲಿಯಾ ಸರ್ಕಾರ ಆದೇಶಿಸಿತ್ತು. ಆದರೆ ರೈತರಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ತಿಳಿಸಿತ್ತು.
 
ಮೊದಲನೇ ವಿಶ್ವಮಹಾಯುದ್ಧದಲ್ಲಿ ಭಾಗವಹಿಸಿದ್ದ  ಬ್ರಿಟಿಷ್‌  ಮತ್ತು ಆಸ್ಟ್ರೇಲಿಯಾ ಸೇನೆಗಳ  ಮಾಜಿ ಸೈನಿಕರು ಪಶ್ಚಿಮ ಆಸ್ಟ್ರೇಲಿಯಾದಲ್ಲಿರುವ ಭೂಮಿಗಳಲ್ಲಿ ಗೋಧಿ ಬೆಳೆದರು, ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಎಲ್ಲಿಂದ ಬಂದವೋ, ದೈತ್ಯ ಉಷ್ಟ್ರಪಕ್ಷಿಯಂತಹ ಎಮು ಪಕ್ಷಿಗಳು  ಹೊಲಗಳ ಮೇಲೆ ದಾಳಿ ಮಾಡಿದವು.
 
‘ಪಕ್ಷಿಗಳು, ಗದರಿಸಿದರೆ ಓಡಿ ಹೋಗುತ್ತವೆ ಬಿಡು’ ಎಂದು ಅವರು ಭಾವಿಸಿದರು. ಇವರ ಬೆದರಿಕೆಗಳಿಗೆ ಆ ದೈತ್ಯ ಪಕ್ಷಿಗಳು ಜಗ್ಗಲಿಲ್ಲ. ಒಂದಲ್ಲಾ ಎರಡಲ್ಲ ಸುಮಾರು 20 ಸಾವಿರಕ್ಕೂ ಹಚ್ಚು ಎಮು ಪಕ್ಷಿಗಳು ಹೊಲಗಳ ಮೇಲೆ ದಾಳಿ ಮಾಡಿದವು. ಪಕ್ಷಿಗಳ ಈ ದಾಳಿಗೆ ಬೇಸತ್ತು ಮಾಜಿ ಸೈನಿಕರು ಸೇನಾ ಸಚಿವರೊಂದಿಗೆ ಮಾತನಾಡಿ, ಪಕ್ಷಿಗಳೊಂದಿಗೆ ಕೊಲ್ಲುವುದು ಅನಿವಾರ್ಯ ಎಂದು ಮನವಿ ಮಾಡಿದರು. ಪಕ್ಷಿಗಳನ್ನು ಕೊಲ್ಲಲು ಎರಡು ಲೆವಿಸ್ ಮೆಷಿನ್‌ ಗನ್‌ಗಳು ಮತ್ತು 10 ಸಾವಿರ ಗುಂಡುಗಳನ್ನು ಬಳಸಲು ಇಲಾಖೆ ಅನುಮತಿ ಸಹ ನೀಡಿತು! ಮೇಜರ್ ಜಿ.ಪಿ. ಡಬ್ಲ್ಯೂ ಮೆರಿಡಿತ್ ಅವರು ಈ ಯುದ್ಧದ ನೇತೃತ್ವ ವಹಿಸಿದ್ದರು.
 
ಸಶಸ್ತ್ರ ಸನ್ನದ್ಧರಾಗಿ 1932 ನವೆಂಬರ್ 2ರಂದು ಯುದ್ಧ ಆರಂಭಿಸಿಯೇ ಬಿಟ್ಟರು.  ಸೈನಿಕರು ಗುಂಡಿನ ಮಳೆ ಸುರಿಸುತ್ತಿದ್ದಂತೇ ಕೆಲವು ಪಕ್ಷಿಗಳು ಗುಂಡೇಟಿಗೆ ಬಲಿಯಾದವು. ಗುಂಡೇಟಿನ ತೀವ್ರತೆ ಅರಿತು ಉಳಿದವು ಕಾಡಿಗೆ ನುಗ್ಗಿ ತಪ್ಪಿಸಿಕೊಂಡವು.
 
ಮರುದಿನ ಹಲವು ಪಕ್ಷಿಗಳು ಮತ್ತೆ ಹೊಲಗಳಿಗೆ ಲಗ್ಗೆ ಇಟ್ಟವು. ಪಕ್ಷಿಗಳನ್ನು ಕಂಡೊಡನೆ ಸೈನಿಕರು ಗುಂಡಿನ ಮಳೆ ಸುರಿಸಿದರು.  ಒಂದು ಸುತ್ತಿನ ಗುಂಡು ಹಾರಿಸುತ್ತಿದ್ದಂತೇ ಗನ್‌ಗಳು ಕೆಟ್ಟು ಹೋದವು. ಇದೇ ಸಮಯ ಎಂದು ಎಮುಗಳು ಪುನಃ ಓಡಿಹೋದವು.
 
ಎಮುಗಳ ವೇಗ ಸಾಮರ್ಥ್ಯವನ್ನು ಗುರುತಿಸಿದ ಮೆರಿಡಿತ್, ವಾಹನಗಳ ಮೂಲಕ ಅವುಗಳನ್ನು ಹಿಂಬಾಲಿಸಿ ಕೊಲ್ಲಬೇಕೆಂದು ನಿರ್ಧರಿಸಿದರು. ಆದರೆ ಇವರ ಬಳಿ ಎರಡೇ ಗನ್‌ಗಳು ಇದ್ದಿದ್ದರಿಂದ ಒಂದೇ ಸಮಯದಲ್ಲಿ ಹೆಚ್ಚು ಎಮುಗಳನ್ನು ಹಿಂಬಾಲಿಸಿ ಕೊಲ್ಲಲು ಸಾಧ್ಯವಾಗಲಿಲ್ಲ. ವೇಗವಾಗಿ ಓಡುತ್ತಿದ್ದ ಎಮುಗಳು ಗುಂಡಿನ ಶಬ್ದವಾಗುತ್ತಿದ್ದಂತೆ, ಕಾಡಿನೊಳಗೆ ನುಗ್ಗಿ ತಪ್ಪಿಸಿಕೊಳ್ಳುತ್ತಿದ್ದವು.
 
ಕೊನೆಗೆ ಸೈನಿಕರ ಬಳಿ ಇದ್ದ 10 ಸಾವಿರ ಗುಂಡುಗಳು ಬಳಕೆಯಾದರೂ  986 ಎಮುಗಳನ್ನಷ್ಟೇ ಕೊಲ್ಲಲು ಸಾಧ್ಯವಾಯಿತು. ಕೊನೆಗೆ ಆ ಪಕ್ಷಿಗಳನ್ನು ಕೊಲ್ಲುವುದು ಅಸಾಧ್ಯ ಎಂದು ಭಾವಿಸಿದ ಸೈನಿಕರು 1932 ಡಿಸೆಂಬರ್ 30ರಂದು ಯುದ್ಧಕ್ಕೆ ಪೂರ್ಣ ವಿರಾಮ ಇಟ್ಟರು. 
 
ಈ ವಿಷಯ ಆಸ್ಟ್ರೇಲಿಯಾ ಸಂಸತ್‌ನಲ್ಲೂ ಪ್ರತಿಧ್ವನಿಸಿತು.  ಯುದ್ಧದಲ್ಲಿ ಸೈನಿಕರ ಗುಂಡೇಟುಗಳನ್ನು ತಪ್ಪಿಸಿಕೊಂಡ ಎಮುಗಳಿಗೆ ನಿಜಕ್ಕೂ ಚಿನ್ನದ ಪದಕಗಳನ್ನು ನೀಡಬೇಕು ಎಂದು ಕೆಲವರು ವ್ಯಂಗ್ಯವಾಡಿದರು. ಕೊನೆಗೆ ಎಮುಗಳೇ ಜಯಿಸಿವೆ ಎಂದು ಸೈನಿಕರೂ ಒಪ್ಪಿಕೊಂಡರು!
ಆಧಾರ: Today I found Out
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.