ADVERTISEMENT

ಕಣ್ಣಿನ ಅಂದ ಕೆಡಿಸುವ ಕಪ್ಪು ವರ್ತುಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ಕಣ್ಣಿನ ಅಂದ ಕೆಡಿಸುವ ಕಪ್ಪು ವರ್ತುಲ
ಕಣ್ಣಿನ ಅಂದ ಕೆಡಿಸುವ ಕಪ್ಪು ವರ್ತುಲ   

ಕಣ್ಣಿನ ಸುತ್ತ ಉಂಟಾಗುವ ಕಪ್ಪು ವರ್ತುಲಗಳು ಮುಖದ ಸೌಂದರ್ಯ ಹಾಳು ಮಾಡುತ್ತವೆ. ಮೇಕಪ್‌ನಿಂದ ಇವುಗಳನ್ನು ಮುಚ್ಚಿದರೆ ಅದು ತಾತ್ಕಾಲಿಕ ಉಪಶಮನವಷ್ಟೇ ಆಗಬಲ್ಲದು. ‘ಕಪ್ಪು ವರ್ತುಲಗಳಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲವೇ?’ ಎಂಬ ಪ್ರಶ್ನೆ ಅನೇಕ ಮಹಿಳೆಯರ ಮನದಲ್ಲಿದೆ.

ಕಣ್ಣಿನ ಸುತ್ತಲಿನ ಚರ್ಮ ಬಹಳ ನಾಜೂಕಾದುದು. ಮುಖದ ಉಳಿದ ಭಾಗಕ್ಕಿಂತ ಕಣ್ಣಿನ ಸುತ್ತ ಇರುವ ಚರ್ಮ ತೆಳುವಾಗಿರುತ್ತದೆ. ಹಾಗಾಗಿ ಮುಖದ ಈ ಭಾಗಕ್ಕೆ ಹೆಚ್ಚಿನ ಆರೈಕೆ ಬೇಡುತ್ತದೆ.

ಡಯೆಟ್‌: ಉತ್ತಮ ಆಹಾರ ಪದ್ಧತಿ ಕಪ್ಪು ವರ್ತುಲಗಳನ್ನು ತಡೆಗಟ್ಟಬಲ್ಲದು. ತಾಜಾ ಹಣ್ಣುಗಳು, ಮೊಸರು, ಕೆನೆಭರಿತ ಹಾಲು, ಬೀನ್ಸ್‌, ತಾಜಾ ತರಕಾರಿಯುಕ್ತ ಪೌಷ್ಟಿಕ ಆಹಾರ ಸೇವನೆ ಕಪ್ಪು ವರ್ತುಲಕ್ಕೆ ಮದ್ದು.

ಚರ್ಮದ ಆರೈಕೆ: ಮುಖಕ್ಕೆ ಬಳಸುವ ಕ್ರೀಮ್‌ಗಳನ್ನು ಜಾಗ್ರತೆಯಿಂದ ಆರಿಸಿಕೊಳ್ಳಿ. ಕೆಲವೊಮ್ಮೆ ಇವು ಕೂಡ ಕಪ್ಪು ವರ್ತುಲಕ್ಕೆ ಕಾರಣವಾಗಬಹುದು.    ಮೇಕಪ್‌ ಹಾಕುವ ಮತ್ತು ತೆಗೆಯುವ ಕಾರ್ಯವನ್ನು ನಾಜೂಕಿನಿಂದ ಮಾಡಿ. ಕಣ್ಣನ್ನು ಒರೆಸಿಕೊಳ್ಳಲು ಹತ್ತಿಯ ತೆಳುವಾದ ಬಟ್ಟೆಯನ್ನೇ ಬಳಸಿ.

ಅತಿಯಾದ ಕೆಲಸ: ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು, ಕಣ್ಣಿಗೆ ವಿಶ್ರಾಂತಿ ನೀಡದೆ ಓದುವುದು ಕಪ್ಪು ವರ್ತಲಕ್ಕೆ ಕಾರಣವಾಗಬಹುದು.

ಕಂಪ್ಯೂಟರ್ ಮುಂದೆ ಬಹಳ ಸಮಯ ಕುಳಿತು ಕೆಲಸ ಮಾಡುವವರು ಪ್ರತಿ 2–3 ಗಂಟೆಗೊಮ್ಮೆ ಕಣ್ಣನ್ನು ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕಣ್ಣಿಗೆ ವಿಶ್ರಾಂತಿ ನೀಡಿದಂತಾಗುತ್ತದೆ. ಇದರಿಂದ ಕಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಕಪ್ಪು ವರ್ತುಲ ಬಾರದಂತೆ ತಡೆಯಬಹುದು.

ನಿದ್ದೆ: ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಕಣ್ಣಿನ ಮೇಲೆ ಒತ್ತಡ ಉಂಟಾಗಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಅವಶ್ಯಕ. ದಿನಕ್ಕೆ ಕನಿಷ್ಠ 6 ಗಂಟೆಯಾದರೂ ನಿದ್ದೆ ಮಾಡಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ಕೊಡಬೇಕು.

ಮನೆ ಮದ್ದು
*ಸೌತೆಕಾಯಿ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ 25 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಿರಿ.
*ನಿಂಬೆ ರಸವನ್ನು ಕಣ್ಣಿನ ಸುತ್ತ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.
*ಆಲೂಗಡ್ಡೆಯನ್ನು ಕೆಲ ಸಮಯ ಫ್ರಿಡ್ಜ್‌ನಲ್ಲಿಡಿ. ಅದು ತಣ್ಣಗಾದ ನಂತರ ಹೊರಗೆ ತೆಗೆದು ತೆಳುವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಕಪ್ಪುವರ್ತುಲವೂ ಮುಚ್ಚುವಂತಿರಲಿ. 15–20 ನಿಮಿಷವಾದ ನಂತರ ತೆಗೆಯಿರಿ.
*ಆಹಾರದಲ್ಲಿ ಸೊಪ್ಪಿನ ಬಳಕೆಗೆ ಪ್ರಾಮುಖ್ಯತೆ ಸಿಗಲಿ.
*ಒಂದು ಬೌಲ್‌ನಲ್ಲಿ ತಣ್ಣನೆಯ ನೀರಿಗೆ ವಿಟಮಿನ್‌ ಇ ಎಣ್ಣೆಯನ್ನು ಬೆರೆಸಿ. ಹತ್ತಿ ಬಟ್ಟೆಯನ್ನು ಅದರಲ್ಲಿ ಅದ್ದಿ ಕಣ್ಣಿನ ಮೇಲೆ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ.
*ಪ್ರಾಣಾಯಾಮ, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಿ. ಇವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.