ADVERTISEMENT

ಜ್ಞಾನದ ನಿರ್ವಹಣೆಯನ್ನು ಕಲಿಯಿರಿ

ಕಲಿಯೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಜ್ಞಾನದ ನಿರ್ವಹಣೆಯನ್ನು ಕಲಿಯಿರಿ
ಜ್ಞಾನದ ನಿರ್ವಹಣೆಯನ್ನು ಕಲಿಯಿರಿ   

ಬಹುಕಾಲ ನಾವು ಅರಿವನ್ನು ಗಳಿಸುವುದರ ಬಗ್ಗೆಯಷ್ಟೇ ಚರ್ಚಿಸುತ್ತಿದ್ದೆವು. ಆದರೆ ಈಗ ಅರಿವು ಎನ್ನುವುದು ಒಂದು ಮಾರುಕಟ್ಟೆ. ಅದೊಂದು ಉತ್ಪನ್ನ. ಅಷ್ಟೇಕೆ ಅದೇ ಒಂದು ಅರ್ಥ ವ್ಯವಸ್ಥೆ ಅರ್ಥಾತ್ ಹಣಕಾಸಿನ ಮೂಲ. ಇದನ್ನೇ ನಾವು ಜ್ಞಾನಾಧಾರಿತ ಆರ್ಥಿಕತೆ ಎಂದು ಕರೆಯುತ್ತೇವೆ.

ಈ ಆರ್ಥಿಕತೆಯಲ್ಲಿ ಉತ್ಪನ್ನ ಅಥವಾ ಸೇವೆಯಾಗಿರುವುದೇ ಜ್ಞಾನ. ಅಂದರೆ ಜ್ಞಾನ ಅಥವಾ ಅರಿವನ್ನು ನಿರ್ವಹಿಸುವ ವ್ಯವಸ್ಥೆಯೊಂದರ ಬಗ್ಗೆಯೂ ನಾವು ಆಲೋಚಿಸಬೇಕಾಗುತ್ತದೆ. ಜ್ಞಾನದ ನಿರ್ವಹಣೆ ಹೇಗೆ ಎಂಬುದನ್ನು ಅರಿಯುವುದಕ್ಕೆ ನಮ್ಮ ಸಾಂಪ್ರದಾಯಿಕ ಕೋರ್ಸ್‌ಗಳು ಸಹಕರಿಸುವುದಿಲ್ಲ. ಅದಕ್ಕೆ ಹೊಸ ತಲೆಮಾರಿನ ಜ್ಞಾನ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡ ಕೋರ್ಸ್‌ಗಳ ಅಗತ್ಯವಿದೆ. ಇಂಥದ್ದೊಂದು ಕೋರ್ಸ್ ಅನ್ನು ಹಾಂಗ್‌ಕಾಂಗ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ ರೂಪಿಸಿದೆ.

ವಿಜ್ಞಾನದ ಎರಡನೇ ತಲೆಮಾರು ಎಂದು ಕರೆಯುತ್ತಿರುವ ಈ ಕಾಲಘಟ್ಟದಲ್ಲಿ ಜ್ಞಾನಾಧಾರಿತ ಉದ್ಯಮಗಳ ನಿರ್ವಹಣೆಯ ತಂತ್ರಗಳನ್ನು ಈ ಕೋರ್ಸ್‌ ಪರಿಚಯಿಸುತ್ತದೆ. ಬೃಹತ್ ಪ್ರಮಾಣದ ದತ್ತಾಂಶದ ವಿಶ್ಲೇಷಣೆ ನೀಡುವ ಒಳನೋಟಗಳನ್ನು ಅವಲಂಬಿಸಿರುವ ಹೊಸ ತಲೆಮಾರಿನ ಜ್ಞಾನೋದ್ಯಮಗಳಿಗೆ ಪ್ರವೇಶ ಪಡೆಯಲು ಇಂಥ ಕೋರ್ಸ್‌ಗಳನ್ನು ಅರಗಿಸಿಕೊಳ್ಳುವ ಅಗತ್ಯವಿದೆ. ಎಂಜಿನಿಯರಿಂಗ್ ಸೇರಿದಂತೆ ಜ್ಞಾನಾಧಾರಿತ ಕ್ಷೇತ್ರಗಳಲ್ಲಿ ಈಗಾಗಲೇ ತೊಡಗಿಸಿಕೊಂಡವರಿಗೆ ತಮ್ಮ ಕೌಶಲಗಳನ್ನು ಹರಿತಗೊಳಿಸಿಕೊಳ್ಳಲು ಇದೊಂದು ಉತ್ತಮ ಕೋರ್ಸ್.

ಹಾಗೆಯೇ ಹೊಸತಾಗಿ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಉತ್ಸಾಹಿಗಳಿಗೂ ಇದು ಉಪಕಾರಿ ಎಂದು ವಿಶ್ವವಿದ್ಯಾಲಯ ಹೇಳುತ್ತಿದೆ. ಕಲಿಕೆ ಸಂಪೂರ್ಣವಾಗಿ ಉಚಿತ. ವಾರಕ್ಕೆ ಎಂಟು ಗಂಟೆಗಳ ಅಧ್ಯಯನದಂತೆ ಆರು ವಾರಗಳಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು.

ಕೋರ್ಸ್ ಜನವರಿ 10ರಿಂದಲೇ ಆರಂಭವಾಗುವುದರಿಂದ ಆದಷ್ಟು ಬೇಗ ನೋಂದಾಯಿಸಿಕೊಳ್ಳುವುದು ಉತ್ತಮ. ಪ್ರಮಾಣ ಪತ್ರ ಬೇಕಿದ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಆಸಕ್ತರು ಇಲ್ಲಿರುವ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು: http://bit.ly/2i10DqU

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.