ADVERTISEMENT

ಟೋಪಿ ಹಾಕಿ ನೋಡು

ಚೆಲುವಿನ ಚಿತ್ತಾರ

ಪೃಥ್ವಿರಾಜ್ ಎಂ ಎಚ್
Published 20 ಜುಲೈ 2014, 19:30 IST
Last Updated 20 ಜುಲೈ 2014, 19:30 IST

ಒಮ್ಮೆ  ಟೋಪಿ ಹಾಕಿಕೊಂಡು ಕನ್ನಡಿ ಮುಂದೆ ನಿಂತರೆ ಅದರ ಖದರೇ ಬೇರೆ. ಕ್ಷಣ ಕಾಲ ಸಿನಿಮಾ ನಾಯಕ/ನಾಯಕಿಯರಂತೆ ಬೀಗುವುದು  ಗ್ಯಾರಂಟಿ. ತಲೆನೇ ನಿಲ್ಲಲ್ಲ ಅಂತರಲ್ಲ, ಹಾಗಾಗುತ್ತೇ ಈ ಟೋಪಿ ಹಾಕಿದರೆ!

ಮುಖದ ಸೌಂದರ್ಯ ಹೆಚ್ಚಿಸುವ, ತಲೆಯ ಕುರೂಪವನ್ನು ಮರೆಮಾಚುವ ಟೋಪಿಗೂ ಅಪರಾಧದ ಹಣೆಪಟ್ಟಿ ತಪ್ಪಿಲ್ಲ. ಹೇಗೆ ಅಂತೀರಾ? ನಿನಗೆ ಸರಿಯಾಗಿ ಟೋಪಿ ಹಾಕಿದ್ದಾನೆ/ಳೆ ಎಂದು ಕೆಲವರು ಹೇಳುತ್ತಿರುತ್ತಾರೆ. ವಾಸ್ತವವಾಗಿ ಅವರು ಮೋಸ ಹೋಗಿರುವುದಕ್ಕೆ ‘ಟೋಪಿ ಹಾಕುವುದು’ ಎಂದು ವ್ಯಂಗ್ಯವಾಗಿ ಹೇಳುವುದು ಹಿಂದಿನಿಂದಲೂ ರೂಢಿಗತವಾಗಿ ಬೆಳೆದುಬಂದಿದೆ. ಒಂದು ವೇಳೆ ಟೋಪಿಗೆ ಜೀವ ಇದ್ದಿದ್ದರೆ ಇಂದು ಅದೆಷ್ಟು ಜನರ ಮೇಲೆ ‘ಮಾನನಷ್ಟ ಮೊಕದ್ದಮೆ’ ಹಾಕುತ್ತಿತ್ತೋ,  ದೇವರೆ ಬಲ್ಲ!

ಟೋಪಿ ಮನುಷ್ಯನ ಹುಟ್ಟಿನೊಂದಿಗೆ ತಳಕು ಹಾಕಿಕೊಂಡಿದೆ. ಭಾರತ ಸೇರಿದಂತೆ ವಿಶ್ವಸಮುದಾಯದ ಅನೇಕ ಬುಡಕಟ್ಟು ಜನಾಂಗಗಳಲ್ಲಿ ಈಗಲೂ, ಶಿಶುವಿನಿಂದ ಹಿಡಿದು ಸತ್ತವರಿಗೂ ಟೋಪಿ ಹಾಕುವ ಸಂಪ್ರದಾಯ ಬೆಳೆದುಬಂದಿದೆ.

ಈ ದಿನಗಳಲ್ಲಿ ಟೋಪಿ ಹಾಕುವುದು ಫ್ಯಾಷನ್‌ ಆಗಿಬಿಟ್ಟಿದೆ. ಯುವ ಜನರ ಅಭಿರುಚಿಗೆ ತಕ್ಕಂತೆ ಟೋಪಿಗಳ ವಿನ್ಯಾಸ ಕೂಡ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ತರಹೇವಾರಿ ವಿನ್ಯಾಸದ ಸಾವಿರಾರು ನಮೂನೆಯ ಮತ್ತು ವಿವಿಧ ಗಾತ್ರದ ಟೋಪಿಗಳು ಮಾರುಕಟ್ಟೆಯಲ್ಲಿ ಲಭ್ಯ. 

ಎಲ್ಲಾ ಋತುಮಾನಗಳಿಗೂ ಹೊಂದುವ ಟೋಪಿಗಳು ಮನುಷ್ಯನಿಗೆ  ಮುಕುಟಪ್ರಾಯವಾಗಿವೆ. ಮಾನವನ ಹುಟ್ಟಿನಷ್ಟೆ ಪ್ರಾಚೀನತೆ ಹೊಂದಿರುವ ಈ ಟೋಪಿಗಳು ನಾಗರಿಕತೆಗಳ ಜೊತೆ ಜೊತೆಗೇ ಸಮಾನಾಂತರವಾಗಿ ಬೆಳೆದು, ವಿಕಾಸ ಹೊಂದುತ್ತ ಇತಿಹಾಸದ ಭಾಗವಾಗಿವೆ.

ಟೋಪಿಯ ಕಾರಣಕ್ಕೆ ಯುದ್ಧಗಳೇ ನಡೆದಿವೆ. ಪ್ರೇಮಿಗಳ ಬಲಿದಾನವಾಗಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಕ್ರಿಸ್ತ ಪೂರ್ವ 550–450ದಲ್ಲಿ ಅಥೆನ್ಸ್‌ ರಾಜ ಜಾಕ್ವಿಸ್‌ನ ಮಹಾರಾಣಿ ಟೋಪಿ ಹಾಕಿದ್ದ ಪರ್ಷಿಯನ್‌ ಸೈನಿಕನ ಜೊತೆ ಓಡಿ ಹೋಗಿದ್ದಕ್ಕೆ ಪರ್ಷಿಯಾದ ವಿರುದ್ಧ  ಯುದ್ಧ ಮಾಡಿ ಗೆಲುವು ಪಡೆದ. ಈ ಗೆಲುವನ್ನು ‘ಅಥೆನ್ಸ್‌ ಟೋಪಿಯ ಗೆಲುವು’ ಎಂದು ಖ್ಯಾತ ಇತಿಹಾಸಕಾರ ಹೆರೋಡೋಟಸ್ ಬಣ್ಣಿಸಿದ್ದಾನೆ. ಮಧ್ಯಕಾಲೀನ ಯುಗವಂತೂ ಟೋಪಿಯ ಪ್ರವರ್ಧಮಾನ ಕಾಲ. ಆಗ ಲೆಕ್ಕವಿಲ್ಲದಷ್ಟು ಯುವಕ ಯುವತಿಯರ ಪ್ರೀತಿಯ ಸೆಲೆಯಾಗಿತ್ತು ಈ ಟೋಪಿ. ಅಷ್ಟೇ ಏಕೆ, ಭಾರತೀಯ ನೆಲದಿಂದ ಬ್ರಿಟಿಷರನ್ನು ಅವರ ದೇಶಕ್ಕೆ ಓಡಿಸಿದ್ದು ಇದೇ ’ಗಾಂಧಿ ಟೋಪಿ’ ಅಲ್ಲವೇ?

ವಿನ್ಯಾಸಗಳು
ಸಾವಿರಕ್ಕೂ ಹೆಚ್ಚು ವಿಧದ ಟೋಪಿಗಳಿವೆ. ಇವುಗಳಲ್ಲಿ ಬೇಸ್‌ಬಾಲ್‌ ಕ್ಯಾಪ್‌, ಮಂಕಿ ಕ್ಯಾಪ್‌, ಕ್ರಿಕೆಟ್‌ ಕ್ಯಾಪ್‌, ಬೋಟರ್‌ ಕ್ಯಾಪ್‌, ಬಾಸ್‌

ಕ್ಯಾಪ್‌, ಬಕೆಟ್‌ ಹ್ಯಾಟ್‌, ಫೆಜ್‌ ಹ್ಯಾಟ್‌ ಇತ್ಯಾದಿ ಟೋಪಿಗಳು ಜನಪ್ರಿಯತೆ ಪಡೆದಿವೆ.

ಭಾರತ ಮಾತ್ರವಲ್ಲದೆ ತೃತೀಯ ಗುಂಪಿನ ರಾಷ್ಟ್ರಗಳಲ್ಲಿಯೂ ಗಾಂಧಿ ಟೋಪಿಗೆ ವಿಶೇಷ ಗೌರವವಿದೆ. ಇನ್ನು ಕ್ರಿಕೆಟ್‌ ಟೋಪಿ, ಸಮ್ಮರ್‌ ಕ್ಯಾಪ್‌, ಬೇಸ್‌ ಬಾಲ್‌ ಕ್ಯಾಪ್‌, ಪನಾಮಾ ಹ್ಯಾಟ್‌, ಪ್ಯಾಟ್ರೋಲ್‌ ಕ್ಯಾಪ್‌ಗಳು ಭಾರತೀಯರ ಮುಡಿಗಳಲ್ಲಿ ರಾರಾಜಿಸುತ್ತಿವೆ. ಇಂದು ಟೋಪಿ ತಯಾರಿಕೆ ದೊಡ್ಡ ಉದ್ಯಮವಾಗಿ ಬೆಳೆದಿದೆ. ವಿಶ್ವದಾದ್ಯಂತ ವಾರ್ಷಿಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ ಎನ್ನುತ್ತಾರೆ ಟೋಪಿ ರಫ್ತು ಮತ್ತು ಅಮದುದಾರರು.

ಇತಿಹಾಸ
ಟೋಪಿಗೂ ಒಂದು ಇತಿಹಾಸ ಮತ್ತು ಪರಂಪರೆ ಇದೆ. ಅದಿಮಾನವರು ಬಿಸಿಲು ಮತ್ತು ಮಳೆಗೆ ತೆಳುವಾದ ಚಪ್ಪಟೆ ಕಲ್ಲುಗಳನ್ನು ತಲೆಯ ಮೇಲಿಟ್ಟುಕೊಂಡು ಅದಕ್ಕೆ ಬಳ್ಳಿಗಳನ್ನು ಕಟ್ಟಿಕೊಳ್ಳುತ್ತಿದ್ದರಂತೆ. ನಂತರದ ದಿನಗಳಲ್ಲಿ ಮರದ ಹಲಗೆಗಳು ಬಳಕೆಗೆ ಬಂದವು. ಹೀಗೆ ಟೋಪಿ ರೂಪಾಂತರವಾಯಿತು ಎನ್ನುತ್ತಾರೆ ಇತಿಹಾಸಕಾರರು. ನಾಗರಿಕತೆಗಳು ಬೆಳೆದಂತೆ, ಬದಲಾದಂತೆ ಟೋಪಿಗಳು ಕೂಡ ವಿಕಾಸ ಹೊಂದಿದವು. ಗ್ರೀಕ್‌ನ ತತ್ವಜ್ಞಾನಿಗಳಾದ ಸಾಕ್ರಟಿಸ್‌, ಅರಿಸ್ಟಾಟಲ್‌ ಮತ್ತು ಪ್ಲೆಟೊ ಟೋಪಿ ತೊಡುತ್ತಿದ್ದರು ಎಂಬ ಉಲ್ಲೇಖಗಳಿವೆ.
ಹದಿನೆಂಟು, ಹತ್ತೊಂಬತ್ತನೇ ಶತಮಾನದಲ್ಲಿ ಟೋಪಿ ಧರಿಸುವುದು ಪ್ರತಿಷ್ಠೆಯಾಗಿತ್ತು. ಸುಶಿಕ್ಷಿತ  ವರ್ಗದವರು, ಸ್ಥಿತಿವಂತರು ಮಾತ್ರ ಟೋಪಿ ಹಾಕುತ್ತಿದ್ದರು. ಇಂದು ಭೇದಭಾವ ಇಲ್ಲದೆ ಟೋಪಿ ತೊಡುವುದು ಸಾಮಾನ್ಯವಾಗಿಬಿಟ್ಟಿದೆ.
ಈ ಪುಟ್ಟ ಟೋಪಿಯ ಹಿಂದೆ ದೊಡ್ಡ ಇತಿಹಾಸವೇ ಅಡಗಿರುವಾಗ ನಾವೂ ಒಮ್ಮೆ ಟೋಪಿ ಹಾಕಿ ನೋಡೊಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT