ADVERTISEMENT

ದೊಡ್ಡದಾಗಿ ಯೋಚಿಸುವುದು ಎಂದರೆ...

ಸಾಧಕ

ವಿಶಾಖ ಎನ್.
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ದೊಡ್ಡದಾಗಿ ಯೋಚಿಸುವುದು ಎಂದರೆ...
ದೊಡ್ಡದಾಗಿ ಯೋಚಿಸುವುದು ಎಂದರೆ...   

‘ಶಂಕರ್ ಆಲೋಚನೆಗಳ ವ್ಯಾಪ್ತಿ ಅಂದಾಜಿಗೇ ಸಿಗುತ್ತಿರಲಿಲ್ಲ. ಅಷ್ಟೆಲ್ಲ ಬಜೆಟ್‌ ಬೇಡುತ್ತಿದ್ದ ದೃಶ್ಯಗಳನ್ನು ಅವರು 1990ರ ದಶಕದಲ್ಲೇ ಸಂಯೋಜಿಸುತ್ತಿದ್ದುದನ್ನು ಕಂಡು ಕಣ್ಣರಳಿಸಿದವರಲ್ಲಿ ನಾನೂ ಒಬ್ಬ. ಆದರೆ, ಅವರು ಎಲ್ಲ ವಿಷಯಗಳಲ್ಲೂ ಅಚ್ಚುಕಟ್ಟಾಗಿ ಹೋಂವರ್ಕ್‌ ಮಾಡಿರುತ್ತಿದ್ದರು.’– ಅರ್ಜುನ್ ಸರ್ಜಾ ಹೀಗೆ ಹೇಳಿ ಹತ್ತು ವರ್ಷಗಳಾದವು. ಶಂಕರ್ ನಿರ್ದೇಶನದ ‘ರೋಬೊ 2.0’ ತಮಿಳು ಚಿತ್ರದ ಉಪಗ್ರಹ ಹಕ್ಕು ₹ 110 ಕೋಟಿಗೆ ಮಾರಾಟವಾಗಿರುವ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಮಾತು ಮತ್ತೆ ನೆನಪಾಯಿತು.

2010ರಲ್ಲಿ ಶಂಕರ್ ‘ರೋಬೊ’ ನಿರ್ದೇಶಿಸಿದ್ದಾಗ ಖರ್ಚಾಗಿದ್ದುದು ₹132 ಕೋಟಿ. ಈಗ ಆ ಮೊತ್ತದ ಬಹುಪಾಲು ಉಪಗ್ರಹ ಹಕ್ಕಿನಿಂದಲೇ ಬರುವಂತೆ ಮಾಡುವ ಜನಪ್ರಿಯ ಸಿನಿಮಾ ಜಾಣ್ಮೆ ಶಂಕರ್ ಅವರಿಗೆ ಇದೆ.

‘ರೋಬೊ’ ಚಿತ್ರಕಥೆಯನ್ನು ಶಂಕರ್ ತುಂಬ ಒಲವಿಟ್ಟುಕೊಂಡು ಸಿದ್ಧಪಡಿಸಿ ಹತ್ತೊಂಬತ್ತು ವರ್ಷಗಳಾಗಿವೆ. ‘ಮುದಲ್‌ವನ್’ ತಮಿಳು ಚಿತ್ರ ನಿರ್ದೇಶಿಸುವುದರ ಜೊತೆಗೆ ಅದರ ನಿರ್ಮಾಣಕ್ಕೂ ಶಂಕರ್ ಮುಂದಾದಾಗಲೇ ಅವರ ಕೈಲಿ ‘ರೋಬೊ’ ಸ್ಕ್ರಿಪ್ಟ್‌ ಇತ್ತು. ಆದರೆ, ಅದನ್ನು ಸಾಕಾರಗೊಳಿಸಲು ಅಗತ್ಯವಿದ್ದ ಬಜೆಟ್ ಇರಲಿಲ್ಲ.

ADVERTISEMENT

ರಜನೀಕಾಂತ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶಂಕರ್ ‘ಮುದಲ್‌ವನ್’ ಚಿತ್ರಕಥೆ ಸಿದ್ಧಪಡಿಸಿದ್ದು. ಆ ಕಥೆ ರಜನಿಗೂ ಇಷ್ಟವಾಗಿತ್ತು. ಆದರೆ, ತಕ್ಷಣಕ್ಕೆ ಕೊಡಲು ಕಾಲ್‌ಷೀಟ್ ಇರಲಿಲ್ಲ. ಹಾಗಾಗಿ ಅರ್ಜುನ್ ಸರ್ಜಾ ‘ಮುದಲ್‌ವನ್’ ನಾಯಕರಾದರು. ಅದೇ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಿ, ನಿರ್ದೇಶಿಸಿದ ಶಂಕರ್ ವಾಣಿಜ್ಯ ದೃಷ್ಟಿಯಿಂದ ದೊಡ್ಡದಾಗಿ ಯೋಚಿಸುವುದನ್ನು ಅವರ ವೃತ್ತಿಬದುಕಿನ ಯಾವ ಹಂತದಲ್ಲಿಯೂ ಬಿಡಲಿಲ್ಲ. ‘ಜೀನ್ಸ್‌’, ‘ಬಾಯ್ಸ್‌’ ತರಹದ ಸೀಮಿತಾವಕಾಶದಲ್ಲಿಯೇ ಪ್ರಯೋಗ ಮಾಡಿದ ಅವರ ಚಿತ್ರಗಳ ಬಜೆಟ್‌ ಕೂಡ ಕಡಿಮೆ ಇರಲಿಲ್ಲ ಎನ್ನುವುದೇ ಇದಕ್ಕೆ ಪುಷ್ಟಿ ಕೊಡುತ್ತದೆ.

ರಜನಿ ಕಾಲ್‌ಷೀಟನ್ನು ಮತ್ತೆ ಪಡೆದು ‘ಶಿವಾಜಿ’ ಸಿನಿಮಾ ಮಾಡಿದಾಗಲೂ ಶಂಕರ್ ತಲೆಯಲ್ಲಿ ಇದ್ದುದು ‘ರೋಬೊ’ ಸಾಕಾರಗೊಳಿಸಬೇಕೆಂಬ ಮಹತ್ವಾಕಾಂಕ್ಷೆ. ಹಾಗೆಂದು ಅವರು ‘ಶಿವಾಜಿ’ಯ ಬಜೆಟ್ಟನ್ನು ಸೀಮಿತಗೊಳಿಸಲು ಹೋಗಲಿಲ್ಲ. ₹ 60 ಕೋಟಿ ವೆಚ್ಚದಲ್ಲಿಯೇ ಅದು ನಿರ್ಮಾಣವಾಗಿ, ಹೆಚ್ಚು ಹಣವನ್ನು ಬಾಚಿದ್ದು ಇತಿಹಾಸ. ಅದು ‘ರೋಬೊ’ ತಯಾರಾಗಲು ಇಂಧನವಾಗಿ ಒದಗಿಬಂದದ್ದೂ ನಿಜ. ರಜನಿಗೆ ಇರುವ ಮಾರುಕಟ್ಟೆಯ ವ್ಯಾಪ್ತಿ ಶಂಕರ್ ಯೋಚನೆಗೆ ನಿಲುಕಿ ದಶಕಗಳೇ ಆಗಿವೆ. ಅದನ್ನೀಗ ಅವರು ತಮ್ಮ ಸಿನಿಮಾ ಕ್ರಿಯಾಶೀಲತೆಯನ್ನು ಒರೆಗೆಹಚ್ಚಿಕೊಳ್ಳಲು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರಷ್ಟೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಡಿಪ್ಲೊಮಾ ಕಲಿತ ಶಂಕರ್ ಮೊದಲು ಸಿನಿಮಾ ನಟರಾಗಬೇಕು ಎಂದುಕೊಂಡಿದ್ದವರು.  ನಾಟಕವಾಡಿಸುತ್ತಿದ್ದಾಗ ನಿರ್ದೇಶಕ ಎಸ್‌.ಎ. ಚಂದ್ರಶೇಖರ್ ಕಣ್ಣಿಗೆ ಬಿದ್ದದ್ದೇ ಅವರ ನಸೀಬು ಬದಲಾಯಿತು.  ನಟ ರಾಜೇಶ್‌ ಖನ್ನಾ ವೃತ್ತಿಬದುಕಿನ ಇಳಿಗಾಲದಲ್ಲಿ ತಯಾರಾಗುತ್ತಿದ್ದ ‘ಜೈ ಶಿವ ಶಂಕರ್’ ಹಿಂದಿ ಸಿನಿಮಾಗೆ ಸಹಾಯಕರಾಗಿ ಕೆಲಸ ಮಾಡಿದಾಗ ಶಂಕರ್ ದೊಡ್ಡದಾಗಿ ಯೋಚಿಸುವುದನ್ನು ಕಲಿತದ್ದು. ಆ ಸಿನಿಮಾ ನಿರ್ದೇಶಿಸಿದವರು ಚಂದ್ರಶೇಖರ್.

ಮೊದಲ ಚಿತ್ರ ‘ಜಂಟಲ್‌ಮನ್’ನಿಂದಲೂ (ತಮಿಳು) ಬಜೆಟ್ ವಿಷಯದಲ್ಲಿ ಶಂಕರ್ ರಾಜಿಯಾಗಲೇ ಇಲ್ಲ. 2007ರಿಂದ 2010ರ ಅವಧಿಯಲ್ಲಿ  ಅವರು ಖುದ್ದು ಕೆಲವು ಚಿತ್ರಗಳನ್ನು ನಿರ್ಮಿಸಿ ಹಣ ಮಾಡಿದ್ದು ಕೂಡ ಸಿನಿಮಾಗಳ  ಮೇಲೆಯೇ ಮರು ವಿನಿಯೋಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ. ಸಾಮಾನ್ಯವಾಗಿ ಭಾರತದಲ್ಲಿ ಸಿನಿಮಾ ನಿರ್ದೇಶಕ ಬಜೆಟ್‌ ವಿಷಯದಲ್ಲಿ ರಾಜಿಯಾಗಿರುವ ಉದಾಹರಣೆಗಳೇ ಹೆಚ್ಚು. ಅದಕ್ಕೆ ಅಪವಾದವಾಗಿ ಕಾಣುವ ಶಂಕರ್ ಅಧ್ಯಯನ ಯೋಗ್ಯ ವ್ಯಕ್ತಿಯಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.